Tuesday, May 21, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯ ಕೈವಾಡದಿಂದ 84 ಸಾವಿರ ಮತದಾರರ ಹೆಸರು ಡಿಲೀಟ್: ಕಾಂಗ್ರೆಸ್‌ ಆರೋಪ

ಧಾರವಾಡ ಜಿಲ್ಲಾದ್ಯಂತ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಖಾಸಗಿ ಕಂಪನಿಯ ಮೂವರು ಸಿಬ್ಬಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಸುಮಾರು 84 ಸಾವಿರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಈ ದಂಧೆ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ ಹಳ್ಳೂರ ಆರೋಪಿಸಿದ್ದಾರೆ.

“ಏಪ್ರಿಲ್‌ನಿಂದ ಸೆಪ್ಪೆಂಬರ್‌ವರೆಗೆ ಈ ಅಕ್ರಮ ನಡೆದಿದೆ. ದೆಹಲಿ ಮೂಲದ ಎಎಸ್‌ಆರ್ ಕಂಪೆನಿ ಅಕ್ರಮದ ರೂವಾರಿಯಾಗಿದೆ. ಈ ಕಂಪೆನಿ ನೀಡಿದ ಮಾಹಿತಿಯ ಆಧಾರದ ಮೇಲೆ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ” ಎಂದು ಅವರು ದೂರಿದ್ದಾರೆ.

“ಜಿಲ್ಲೆಯ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ 11 ಸಾವಿರ, ಪೂರ್ವ ಕ್ಷೇತ್ರದಲ್ಲಿ 6 ಸಾವಿರ, ಪಶ್ಚಿಮದಲ್ಲಿ 15 ಸಾವಿರ, ಕುಂದಗೋಳದಲ್ಲಿ 18 ಸಾವಿರ, ನವಲಗುಂದದಲ್ಲಿ 9 ಸಾವಿರ, ಕಲಘಟಗಿಯಲ್ಲಿ 11 ಸಾವಿರ, ಧಾರವಾಡ ಗ್ರಾಮೀಣದಲ್ಲಿ 14 ಸಾವಿರ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯಲಾಗಿದೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.

“ನಮ್ಮ ಪಕ್ಷದ ಕಾರ್ಯಕರ್ತರು ಕಂಪೆನಿಯ ಸಿಬ್ಬಂದಿಯನ್ನು ವಿಚಾರಿಸಿದಾಗ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರ ಹೆಸರನ್ನು ಹೇಳಿದ್ದಾರೆ. ಈ ಕೃತ್ಯದಲ್ಲಿ ಮಹಾನಗರ ಪಾಲಿಕೆ ಹಾಗೂ ಪೊಲೀಸರು ಭಾಗಿಯಾಗಿರುವ ಸಾಧ್ಯತೆಯಿದೆ” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಘಟನೆ ಹಿನ್ನಲೆ

ದೆಹಲಿ ಮೂಲದ ಎಎಸ್‌ಆರ್ ಕಂಪನಿ ಸಿಬ್ಬಂದಿ ನವ ಅಯೋಧ್ಯಾ ನಗರದ ಮನೆಗಳಿಗೆ ತೆರಳಿ ಮೊಬೈಲ್‌ ಆಪ್‌ ಮೂಲಕ ಸಮೀಕ್ಷೆ ನಡೆಸಿದ್ದಾರೆ. ಅಲ್ಲಿರುವ ಅಲ್ಪಸಂಖ್ಯಾತರು, ದಲಿತರು ಹಾಗೂ ಆರ್ಥಿಕವಾಗಿ ಹಿಂದುಳಿದವರ ಪೂರ್ಣ ಮಾಹಿತಿ ಸಂಗ್ರಹಸಿದೆ. ಈ ಮಾಹಿತಿ ಆಧಾರದ ನೂರಾರು ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ ಎಂದು ರಜತ್‌ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದರು.

ಇವರ ದೂರಿನ ಅನ್ವಯ ಕಂಪೆನಿಯ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ಒಳಪಡಿಸಿದಾಗ ಕೆಲವು ಮಾಹಿತಿ ಹೊರಬಿದ್ದಿದೆ.

ಈ ಕಂಪೆನಿಯ ಸಿಬ್ಬಂದಿಗಳಿಗೆ ತಿಂಗಳಿಗೆ 8 ಸಾವಿರ ಸಂಬಳ ನಿಗದಿಯಾಗಿದ್ದು, ಇವರು ಗುರುತಿಸಿದ ಪ್ರದೇಶಗಳಿಗೆ ತೆರಳಿ ಜನರ ಮಾಹಿತಿ ಸಂಗ್ರಹಿಸಿ ಕಂಪೆನಿಗೆ ನೀಡುತ್ತಿದ್ದರು. ಬೇರೆ ರಾಜ್ಯಗಳಲ್ಲೂ ಕಂಪೆನಿಯು ಈ ರೀತಿಯ ಸಮೀಕ್ಷೆ ನಡೆಸುತ್ತಿದೆ ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೇ ಜಿಲ್ಲಾಡಳಿತ ಕಚೇರಿ ನೀಡಿದ ಸ್ವೀಕೃತಿ ಪತ್ರವನ್ನೇ ಅನುಮತಿ ಪತ್ರವೆಂದು ಸಿಬ್ಬಂದಿಗಳು ತೋರಿಸಿ ಸಮೀಕ್ಷೆ ನಡೆಸಿದ್ದಾರೆ ಎಂಬ ಮಾಹಿತಿಯೂ ಹೊರಗೆ ಬಿದ್ದಿದೆ.

ಕಂಪೆನಿಯ ವ್ಯವಸ್ಥಾಪಕ ಮಹೇಶ್‌ ಎನ್ನುವವರನ್ನು ಪೊಲೀಸರು ವಿಚಾರಣೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!