ಬಿಜೆಪಿ ಸರ್ಕಾರ ಬಹಳ ಹಿಂದಿನಿಂದಲೂ ಶಿಕ್ಷಕ ವರ್ಗಕ್ಕೆ ಸ್ಪಂದಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮೈ.ವಿ.ರವಿಶಂಕರ್ ಅವರಿಗೆ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘ ಬೆಂಬಲ ನೀಡಲಿದೆ ಎಂದು ಸಂಘದ ಅಧ್ಯಕ್ಷ ಕೆ. ಕಾಳೇಗೌಡ ತಿಳಿಸಿದರು
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 1995ರ ಒಳಗೆ ಆರಂಭವಾದ ಎಲ್ಲಾ ಖಾಸಗಿ ಶಾಲೆಗಳಿಗೆ ಅನುದಾನ ನೀಡಿ ಸುಮಾರು 25 ಸಾವಿರಕ್ಕೂ ಹೆಚ್ಚು ಶಿಕ್ಷಕರಿಗೆ ಜೀವನವನ್ನು ಕಲ್ಪಿಸಿರುತ್ತಾರೆ. ಸುಮಾರು 3000ಕ್ಕೂ ಹೆಚ್ಚು ಜೆಓಸಿ ಶಿಕ್ಷಕರನ್ನು ನೇಮಕಾತಿ ಮಾಡಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ಅತ್ಯಂತ ಸಂಕಷ್ಟಕ್ಕೀಡಾಗಿದ್ದ ಅನುದಾನ ರಹಿತ ಶಿಕ್ಷಕರಿಗೆ ₹5000 ಸಹಾಯಧನ ಸೇರಿದಂತೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಕಾಳಜಿಯಿಂದ ಸ್ಪಂದಿಸಿದ್ದಾರೆ. ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಈಗಿನ ಶಿಕ್ಷಣ ಸಚಿವ ನಾಗೇಶ್ ಶಿಕ್ಷಕರ ಒಡನಾಡಿಗಳಾಗಿ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ತಿಳಿಸಿದರು.
ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದಾ ಸ್ಪಂದಿಸುವ ಬಿಜೆಪಿ ಪಕ್ಷದ ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ರವಿಶಂಕರ್ ಅವರಿಗೆ ಮಾಧ್ಯಮಿಕ ಶಿಕ್ಷಕರ ಸಂಘ ಬೆಂಬಲ ನೀಡಲಿದ್ದು,ಪದವೀಧರ ಮತದಾರರು ಅವರಿಗೆ ಆಶೀರ್ವದಿಸಬೇಕೆಂದು ಕೋರಿದರು.
ಸಂಘದ ಕಾರ್ಯದರ್ಶಿ ರಾಜು,ಸಂಘಟನಾ ಕಾರ್ಯದರ್ಶಿ ನರಸಿಂಹಮೂರ್ತಿ ಮತ್ತು ಪುಟ್ಟಸ್ವಾಮಿ ಉಪಸ್ಥಿತರಿದ್ದರು.