Thursday, September 19, 2024

ಪ್ರಾಯೋಗಿಕ ಆವೃತ್ತಿ

ರಾಜ್ಯಾದ್ಯಂತ ಮೇ 6ರಂದು ‘ಪುರುಷೋತ್ತಮ’ ಚಿತ್ರ ತೆರೆಗೆ

ಪ್ರಥಮ ಬಾರಿಗೆ ನಾನು ನಾಯಕ ನಟನಾಗಿ ನಟಿಸಿರುವ ಪುರುಷೋತ್ತಮ ಚಲನಚಿತ್ರ ಮೇ.6 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ನಾಡಿನ ಜನತೆ ಚಿತ್ರ ನೋಡಿ‌ ಆಶೀರ್ವದಿಸಬೇಕೆಂದು ನಾಯಕ ನಟ ಜಿಮ್ ರವಿ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪುರುಷೋತ್ತಮ ಚಿತ್ರ ಉತ್ತಮ ಸಾಂಸಾರಿಕ ಕಥೆ ಹೊಂದಿದ್ದು, ಗಂಡ-ಹೆಂಡತಿ ನಡುವಿನ ಸಂಬಂಧ ಹೇಗೆ ಕಾಪಾಡಿಕೊಳ್ಳುವುದು ಎಂಬುದನ್ನು ಚಿತ್ರದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಸಮಾಜಕ್ಕೆ ಒಂದು ಉತ್ತಮ ಸಂದೇಶವಿದ್ದು ಜನರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಿಸಿ ಪ್ರೋತ್ಸಾಹ ನೀಡಬೇಕೆಂದರು.

ಚಿತ್ರದ ನಿರ್ಮಾಪಕ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಯ ವಿಜಯ್ ರಾಮೇಗೌಡ ಅವರ ಸಹಕಾರದಿಂದ ಇಂದು ನಾನು ನಾಯಕನಾಗಲು ಸಾಧ್ಯವಾಯಿತು. ಅವರಂತಹ ಸಹೃದಯಿ ನನಗೆ ಸಿಕ್ಕಿರೋದು ಪುಣ್ಯ. ನಿನ್ನಂತಹ ದೇಹಧಾರ್ಡ್ಯ ಪ್ರತಿಭೆಗೆ ಬೆಲೆ ಸಿಗಬೇಕು ಅಂತ ಹೇಳಿ ಹಣ ಬಂದರೂ, ಹೋದರೂ ಸರಿ ನೀನೇ ನಾಯಕ ಆಗಬೇಕು ಅಂತ ಒತ್ತಾಯ ಮಾಡಿ ಹಣ ಹಾಕಿ ಪುರುಷೋತ್ತಮ ಚಿತ್ರ ನಿರ್ಮಾಣ ಮಾಡಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.

ಕಳೆದ 25-30 ವರ್ಷದಿಂದ ಪೋಷಕ ಪಾತ್ರ ಸೇರಿದಂತೆ ವಿವಿಧ ಪಾತ್ರಗಳಲ್ಲಿ ಅಭಿನಯಿಸಿಕೊಂಡು ಬರುತ್ತಿದ್ದೇನೆ. ಇದೇ ಪ್ರಥಮ ಬಾರಿಗೆ ಸಿನಿಮಾವೊಂದರಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದು ತಿಳಿಸಿದರು.

ನಾನು ಬಡ ಕುಟುಂಬದಿಂದ ಬಂದವನಾಗಿದ್ದು, ದೇಹದಾರ್ಢ್ಯ ಸ್ಪರ್ಧೆಯಲ್ಲಿ ರಾಷ್ಟ್ರ,ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ 200 ಕ್ಕೂ ಹೆಚ್ಚು ಚಿನ್ನದ ಪದಕ ಪಡೆದಿದ್ದೇನೆ ಎಂದರು.

ಎಸ್.ವಿ.ಅಮರ್‌ನಾಥ್ ಈ ಸಿನಿಮಾಕ್ಕೆ ನಿರ್ದೇಶನ ಹಾಗೂ ಸಂಭಾಷಣೆ ಬರೆದಿದ್ದು, ಮೈಸೂರು ಸುತ್ತ-ಮುತ್ತ 54 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ ಎಂದರು.

ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಮಾತನಾಡಿ,ಜಿಮ್ ರವಿ ಅವರು ಈಗಾಗಲೇ ಕಳೆದ ೩೦ ವರ್ಷದಿಂದ ಜನಪ್ರಿಯ ನಟರಾದ ಪುನೀತ್, ಸುದೀಪ್ ಹಾಗೂ ದರ್ಶನ್ ಸೇರಿದಂತೆ ಹಲವು ನಟರೊಂದಿಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರ ಹಾಗೂ ಖಳನಾಯಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರು. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವೂ ಬಹಳ ಅರ್ಥಗರ್ಭಿತವಾಗಿದೆ. ಜನರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಹಾರೈಸಬೇಕೆಂದರು.

ಚಿತ್ರದ ನಾಯಕಿ ಅಮೂಲ್ಯ,ನಿರ್ಮಾಪಕ ಬೂಕನಕೆರೆ ವಿಜಯ್ ರಾಮೇಗೌಡ, ಪ್ರಭು, ಕ್ರಿಸ್ಟಿ ಮ್ಯಾನ್ಯುವೆಲ್ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!