ಡ್ರೋನ್ ಮೂಲಕ ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ಮಾಡುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ವಿ.ಎಸ್.ಅಶೋಕ್ ತಿಳಿಸಿದರು.
ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ ಟಾಟಾಸ್ ರ‍್ಯಾಲೀಸ್ ಇಂಡಿಯಾ ಲಿಮಿಟೆಡ್ ವತಿಯಿಂದ ನಡೆದ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆ ಮಾಡುವ ಪ್ರಾಯೋಗಿಕ ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮನುಷ್ಯ ರಾಸಾಯನಿಕ ಸಿಂಪಡಣೆ ಮಾಡಿದರೆ ಎಕರೆಗೆ ಕನಿಷ್ಟ 600 ರೂ. ವೆಚ್ಚವಾಗುತ್ತಿತ್ತು. ಆದರೆ ಡ್ರೋನ್‌ನಿಂದ ಎಕರೆಗೆ 300 ರೂ. ವೆಚ್ಚದಲ್ಲಿ ಸಿಂಪಡಣೆ ಮಾಡಬಹುದಾಗಿದೆ ಎಂದರು.
ರೈತರಿಗೆ ಕೇಂದ್ರ ಸರ್ಕಾರ ರಸಗೊಬ್ಬರ ಒದಗಿಸಲು ಸಾಕಷ್ಟು ಪ್ರಮಾಣದಲ್ಲಿ ಸಬ್ಸಿಡಿ ನೀಡುತ್ತಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 2500 ಲಕ್ಷ ಕೋಟಿಗೂ ಹೆಚ್ಚಿನ ಅನುದಾನವನ್ನು ಸಬ್ಸಿಡಿ ರೂಪದಲ್ಲಿ ರೈತರಿಗೆ ನೀಡಲಾಗುತ್ತಿದೆ. ಇದರಲ್ಲಿ ಯೂರಿಯಾಗೆ ಹೆಚ್ಚಿನ ಪಾಲು ಹೋಗುತ್ತದೆ ಎಂದರು.
ಯೂರಿಯಾ 50 ಕೆ.ಜಿ. ಚೀಲದೊಂದಿಗೆ ನ್ಯಾನೋ ದ್ರವರೂಪದ ಗೊಬ್ಬರವೂ ದೊರೆಯುತ್ತದೆ. ಇದರ ಬಳಕೆ ತುಂಬಾ ಸುಲಭವಾಗಿದೆ. ಆದರೆ ಇದರ ಉಪಯೋಗ, ಅನುಕೂಲ ತಿಳಿಯದ ರೈತರು ಎಷ್ಟೋ ಮಂದಿ ಇದು ಬೇಡವೇ ಬೇಡ ಎಂದು ವಾಪಸ್ಸು ನೀಡುತ್ತಿದ್ದಾರೆ. ಇದರ ಮಹತ್ವ ಅರಿತು ಬಳಕೆ ಮಾಡಿಕೊಳ್ಳುವುದು ಅಗತ್ಯ ಎಂದು ಹೇಳಿದರು.
ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ. ರಘುಪತಿ ಮಾತನಾಡಿ, ಡ್ರೋನ್‌ನಿಂದ ಔಷಧ ಸಿಂಪಡಣೆ ಮಾಡುವುದರಿಂದ ಏನೆಲ್ಲಾ ಅನುಕೂಲಗಳಿವೆಯೋ ಅಷ್ಟೇ ಅನಾನುಕೂಲಗಳಿವೆ ಎಂಬುದರ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಮೇಲಿಂದ ರಾಸಾಯನಿಕ ಸಿಂಪಡಣೆ ಮಾಡುವುದರಿಂದ ಗಾಳಿಯೊಂದಿಗೆ ಕ್ರಿಮಿನಾಶಕವೂ ಇತರೆಡೆಗೆ ಹರಡಬಹುದು.
ಇದರಿಂದ ಬೇರೆ ಬೇರೆ ಬೆಳೆಗಳಿಗೆ ತೊಂದರೆಯಾಗುವುದೇ, ಎಲೆಗಳ ಹಿಂದೆ ಅವಿತಿರುವ ಹುಳುಗಳಿಗೆ ಔಷಧ ತಲುಪುತ್ತದೆಯೇ, ಹುಳುಗಳು ಸಾಯುತ್ತವೆಯೇ ಇತ್ಯಾದಿ ವಿಚಾರಗಳ ಬಗ್ಗೆಯೂ ಸಂಶೋಧನೆ ನಡೆಯುತ್ತಿದೆ. ಕೆಲವೊಂದು ತಿದ್ದುಪಡಿಗಳನ್ನು ಮಾಡಿಕೊಂಡರೆ ರೈತರಿಗೆ ಇನ್ನೂ ಹೆಚ್ಚಿನ ಸೇವೆ ನೀಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಡ್ರೋನ್‌ಗಳನ್ನು ಸಾಮಾನ್ಯವಾಗಿ ಮದುವೆ ಸಮಾರಂಭಗಳು, ಹುಟ್ಟುಹಬ್ಬ ಇಲ್ಲವೇ ಇತರೆ ಕಾರ್ಯಕ್ರಮಗಳಲ್ಲಿ ಪೋಟೋ, ವೀಡಿಯೋ ತೆಗೆಯಲು ಮಾತ್ರ ಬಳಸಲಾಗುತ್ತಿತ್ತು. ಇದೀಗ ರ‍್ಯಾಲೀಸ್ ಇಂಡಿಯಾನಂತಹ ಕಂಪನಿಗಳು ಕೃಷಿಯಲ್ಲೂ ಡ್ರೋನ್ ಬಳಕೆ ಮಾಡಿ ಹೆಚ್ಚಿನ ಕರ‍್ಯಗಳನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿವೆ ಎಂದು ತಿಳಿಸಿದರು.
ರ‍್ಯಾಲೀಸ್ ಇಂಡಿಯಾ ಲಿಮಿಟೆಡ್‌ನ ಮುಂಬೈನ ಎಂಡಿ ಹಾಗೂ ಸಿಇಓ ಸಂಜೀವ್‌ಲಾಲ್, ಬೆಂಗಳೂರು ರ‍್ಯಾಲೀಸ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಜಿ.ಎನ್. ಕೆಂಡಪ್ಪ,ವಿ.ಸಿ. ಫಾರಂನ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ವೆಂಕಟೇಶ್, ಟಾಟಾ ರ‍್ಯಾಲೀಸ್‌ನ ಮುಖ್ಯ ವಿತರಕರಾದ ಎಸ್.ನಾಗರಾಜು, ಡಾ. ಎಸ್. ಮಲ್ಲಿಕಾರ್ಜುನಪ್ಪ, ಸಂತೋಷ್, ಶಾಂತಕುಮಾರ್, ಸತ್ಯನಾರಾಯಣಗುಪ್ತ, ಗಣೇಶ್‌ಭಟ್, ಡಾ. ವಿ. ರಾಮನಾಥ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.