Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರತಿಮೆಗಳು ಯುವಜನರಿಗೆ ಪ್ರೇರಣೆ ನೀಡುವಂತಿರಲಿ

ನಾಯಕರು ಆದರ್ಶಗಳ ಮಟ್ಟಕ್ಕೆ ಬೆಳೆಯಬೇಕು, ಯುವಪೀಳಿಗೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕು, ಅಂತಹ ಆದರ್ಶ ಪುರುಷರ ಪ್ರತಿಮೆಗಳು ಯುವಜನರಿಗೆ ಪ್ರೇರಣೆ ನೀಡುವಂತಿರಬೇಕು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಮಂಡ್ಯ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಡಾ.ಹೆಚ್.ಡಿ.ಚೌಡಯ್ಯ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ನಿರ್ಮಿಸಿರುವ ಡಾ.ಹೆಚ್.ಡಿ ಚೌಡಯ್ಯ ಪ್ರತಿಮೆ ಅನಾವರಣಗೊಳಿಸಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಈ ಜಗತ್ತಿಗೆ ಯಾತ್ರಿಕರಾಗಿ ಬಂದು ಅಳಿದಂತಹ ಸಾಧಕರನ್ನು ನೆನಪು ಮಾಡಿಕೊಳ್ಳುವುದು ಸಮಾಜದ ಕರ್ತವ್ಯ. ಅಂತಹ ಸಾಧಕರ ಪ್ರತಿಮೆಗಳು ಯುವ ಪೀಳಿಗೆಗೆ ಪ್ರೇರಣೆಯಾಗಿ ಉಳಿಯಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ಆದರ್ಶಗಳಿಗೆ  ಕೊರತೆಯೇನೂ ಇಲ್ಲ. ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು ಆದರ್ಶವಾದರೆ, ವಿವೇಕಾನಂದರು ಅರವಿಂದರಿಗೆ ಆದರ್ಶವಾದರು. ನಮ್ಮ ಯುವಕರು ವಿದೇಶಗಳ ಕನಸು ಕಾಣದೆ ದೇಶದಲ್ಲಿ ಬೇಕಾದಷ್ಟು ಬದಲಾವಣೆಗಳಾಗಿದ್ದು ಇಲ್ಲಿಯೇ ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಡಾ.ಹೆಚ್.ಎಸ್.ಮುದ್ದೇಗೌಡ ರಚಿಸಿರುವ ‘ಕಾಯಕಯೋಗಿ ಡಾ.ಹೆಚ್.ಡಿ.ಚೌಡಯ್ಯ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ  ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಚೌಡಯ್ಯನವರು ಎಲ್ಲವೂ ಕಾನೂನುಬದ್ಧ ಶಿಸ್ತುಬದ್ಧವಾಗಿರಬೇಕು ಎನ್ನುವ ಕಾರಣಕ್ಕೆ  ಆಗಾಗ್ಗೆ ಸಂಘಟನೆಯಲ್ಲಿ ಇರುತ್ತಿತ್ತು. ಆದರೂ ತಕ್ಷಣ ಆತ್ಮೀಯತೆ ನಮ್ಮನ್ನು ತಿದ್ದುತ್ತಿದ್ದರು. ನಮ್ಮಂತಹ ಯುವ ನಾಯಕರಿಗೆ ಸಹಕಾರ ತತ್ವದ ಬಗ್ಗೆ ಮನದಟ್ಟು ಅವರು ಮಾಡಿಕೊಟ್ಟಿದ್ದಾರೆ ಎಂದರು.

ಚೌಡಯ್ಯ ಅವರು ಸಮಾಜಕ್ಕೆ ಹತ್ತಾರು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಷ್ಟ್ರ ಒಪ್ಪುವ ನಾಯಕತ್ವ ಕೊಟ್ಟಿದ್ದಾರೆ. ಜಿಲ್ಲೆಯು ಅಭಿವೃದ್ಧಿಯಾಗಬೇಕು ಎನ್ನುವ ಮಾತುಗಳನ್ನು ಸದಾ ಅವರು ನೆನಪಿಸುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಶಿಸ್ತುಬದ್ಧ ನಡವಳಿಕೆಯಿಂದ ಗಮನ ಸೆಳೆದಿದ್ದಾರೆ. ಅವರನ್ನು ಕಳೆದುಕೊಂಡದ್ದು ನೋವಿನ ಸಂಗತಿ. ನಾವು ಆ ಮಟ್ಟಕ್ಕೆ ಬೆಳೆಯಲು, ಗೌರವ ಪಡೆದುಕೊಳ್ಳಲು, ಆಡಳಿತ ಸುಧಾರಣೆ ಮಾಡುವುದು ಕಷ್ಟದ ಕೆಲಸ ಎಂದು ಅಭಿಪ್ರಾಯಪಟ್ಟರು.

ವಿಶ್ರಾಂತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ ಚೌಡಯ್ಯನವರ ಕುರಿತು ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ ಅವರಿಗೆ ಡಾ.ಹೆಚ್.ಡಿ.ಚೌಡಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ಥಳೀಯ ಸಾಧಕರಾದ ಮೂಳೆ ಮತ್ತು ಕೀಲು ಶಸ ಚಿಕಿತ್ಸಕ ಡಾ.ಹೆಚ್.ಎಸ್.ರವಿಕುಮಾರ್ ಹಾಗೂ ಬಂಟ್ವಾಳ ತಾಲ್ಲೂಕಿನ ತಹಸೀಲ್ದಾರ್ ಡಾ.ಸ್ಮಿತಾ ರಾಮು ಅವರನ್ನು ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಸನ್ಮಾನಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಹೊಳಲು ಸರ್ಕಾರಿ ಪ್ರೌಢಶಾಲೆಯ ವಿಸ್ಮಯ ಹೆಚ್.ಕೆ, ಸತ್ಯಮೂರ್ತಿ ಹೆಚ್.ಕೆ ಹಾಗೂ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯ  ದಿಶಾ.ಎಸ್, ಭುವನ್‌ಸಿ.ಎಸ್ ಅವರನ್ನು ಮಾಜಿ ಶಾಸಕ  ಜಿ.ಬಿ.ಶಿವಕುಮಾರ್ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಿಧಾನಪರಿಷತ್ ಸದಸ್ಯ ಮಧು ಜಿ ಮಾದೇಗೌಡ, ಮಾಜಿ ಶಾಸಕ ಎಚ್.ಬಿ.ರಾಮು,  ಹೊಳಲು ಗ್ರಾ.ಪಂ. ಅಧ್ಯಕ್ಷ ಹೆಚ್.ಡಿ. ರವಿ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎಂ. ಕುಮಾರ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪದ್ಮಾ ನಾಗರಾಜು  ಭಾಗವಹಿಸಿದ್ದರು.

ಸಮಾರಂಭದಲ್ಲಿ ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಹೆಚ್.ಎಲ್.ಶಿವಣ್ಣ, ಕಾರ್ಯದರ್ಶಿ ಲಿಂಗಪ್ಪ, ಹೆಚ್.ಸಿ.ಹರಿಪ್ರಸಾದ್, ಮೋಹನ್, ಹೆಚ್.ಬಿ.ಶಿವಣ್ಣ, ಹೆಚ್.ಸಿ.ಶ್ರೀಧರ್, ವಿಜಯಕುಮಾರ್, ಆನಂದ್, ಮುಂತಾದವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!