Thursday, April 18, 2024

ಪ್ರಾಯೋಗಿಕ ಆವೃತ್ತಿ

ಆದ್ರೂ ಹಿಂಗ್ ಮಾಡಬಾರದಿತ್ತು ಕಣ್ರೀ….

ಮಾಚಯ್ಯ ಎಂ ಹಿಪ್ಪರಗಿ

ಆಹಾ..ಆಹಾ… ಆಹಾಹಾಹಾ.. ಎಷ್ಟು ದಿನಗಳ ಕನಸು ಕಣ್ರೀ ಅದು. ಅದಾನಿ-ಅಂಬಾನಿಯನ್ನು ಕಾಡಿಬೇಡಿ, ಅವರ ಪಾಲಾಗುತ್ತಿದ್ದ ಟ್ಯಾಕ್ಸ್-ಪೇಯರ‍್ಸ್ ಹಣದಲ್ಲಿ ಗಿಂಚಾಡಿ, ಇಪ್ಪತ್ತು ಸಾವಿರ ಕೋಟಿಯನ್ನು ಅದೇಗೊ ಮಿಕ್ಕಿಸಿಕೊಂಡು ಭವ್ಯ ಸಂಸತ್ ಭವನ ಕಟ್ಟಿಸಿಕೊಂಡ ಮೋದಿಯವರು ಏನೇನೊ ಕನಸು ಕಟ್ಟಿಕೊಂಡಿದ್ದ್ರು ಕಣ್ರಿ. ತನ್ನನ್ನು ತಾನು ಶ್ರೀಕೃಷ್ಣದೇವರಾಯನ ಮರುಜನ್ಮ ಅಂತ ಸೆಲ್ಫ್ ಸರ್ಟಿಫೈಡ್ ಮಾಡಿಕೊಂಡು, ತಿರುಪತಿಯ ತಿಮ್ಮಪ್ಪನಿಗೇ ಚಿನ್ನದ ಟೋಪಿ ಹಾಕಿದ್ದ ನಮ್ಮ ಜೆನ್ನಿ ರೆಡ್ಡಿಯಂತೆಯೇ, ಭಾರತದ ಚರಿತ್ರೆಯಲ್ಲಿ ಆಗಿಹೋದ ಯಾವನೋ ಒಬ್ಬ ರಾಜನ ಪಟ್ಟಾಭಿಷೇಕದ ದರ್ಬಾರನ್ನು ಸಾಕ್ಷಾತ್ ಸಂಸತ್ ಭವನದಲ್ಲಿ ಪ್ರತಿಷ್ಟಾಪಿಸುವ ಕನಸು ಮೋದಿಗಲ್ಲದೆ ಮತ್ತ್ಯಾರಿಗೆ ಬರಲು ಸಾಧ್ಯ ನೀವೇ ಹೇಳಿ. ಆಪ್ತಮಿತ್ರ, ಆಪ್ತರಕ್ಷಕದಂತಹ ಹಾರರ್ ಸಿನಿಮಾಗಳ ಕ್ಲೈಮ್ಯಾಕ್ಸ್ ಅನ್ನು ನೆನಪಿಸುವಂತಹ ಡಿಸೈನ್ ಡಿಸೈನ್ ಸನ್ಯಾಸಿಗಳು, ಸಾಧುಗಳ ಮಣಮಣ ಮಂತ್ರಘೋಷಗಳ ನಡುವೆ ತಮಿಳು ರಾಜಮನೆತನದವರ ಚಿನ್ನದ ದೊಣ್ಣೆಕೋಲು ಹಿಡಿದುಕೊಂಡು ತಾನೊಬ್ಬನೇ, ತಾನು ಮಾತ್ರವೇ ಥಕಥೈ ಥಕಥೈ ಅಂತ ನಡೆದು ಬರಬೇಕು, ಅದನ್ನು ಕ್ಯಾಮೆರಾಮೆನ್‌ಗಳು ಹಾಲಿವುಡ್ ಎಫೆಕ್ಟಿನಲ್ಲಿ ಸೆರೆಹಿಡಿದು ಪ್ರಪಂಚಕ್ಕೆಲ್ಲ ಬಿತ್ತರಿಸಬೇಕು, ’ಮೋದಿ ಹೈ ತೋ ಮುಮ್‌ಕೀನ್ ಹೈ’ ಅಂತ ಹರುಕುಬಾಯಿ ಆಂಕರುಗಳು ಮಲಬದ್ಧತೆಯ ರೋಗಿಗಳಂತೆ ಮುಲುಕಾಡಬೇಕು ಅಂತ ಏನೇನೋ ಕನಸು ಕಟ್ಟಿಕೊಂಡಿದ್ದ್ರು ಕಣ್ರೀ ನಮ್ಮ್ ಮೋದಿ. ಅಂತಹ ಐತಿಹಾಸಿಕ ಕ್ಷಣದ ಫೋಟೊಶೂಟ್‌ಗೆ ಅಡ್ಡಿಯಾಗಬಾರದು ಅಂತ, ಅಷ್ಟೇನು ಫೋಟೊಜೆನಿಕ್ ಅಲ್ಲದ ರಾಷ್ಟ್ರಪತಿ ದ್ರೌಪದಿ ಮುರ್ಮು ಮೇಡಂ ಅವರನ್ನೂ ಏನೇನೊ ನೆಪ ಹೇಳಿ ಹೊರಗಿಟ್ಟಿದ್ದರು ಪಾಪಾ! ‘ವಿಧವೆ’, ‘ಅಪಶಕುನ’, ‘ಅಸ್ಪೃಶ್ಯೆ ಅಂತ ತರೇವಾರಿ ರಿಲೀಜಿಯಸ್ ಲಾಜಿಕ್ಕುಗಳನ್ನೂ ಹರಿಬಿಟ್ಟರು! ಆದ್ರೆ, ಆದ್ರೆ….. ಇದಾವಲ್ಲ ಈ ಡೆಲಿಬರೇಟೆಡ್ ದುಶ್ಮನ್‌ಗಳು! ತಮ್ಮನ್ನು ತಾವು ಸೆಕ್ಯುಲರ್ರು, ಪ್ರಗತಿಪರ್ರು, ಜನಪರ್ರು, ಮಣ್ಣು ಮಸಿ ಅಂತ ಕರೆದುಕೊಳ್ಳೋ ಈ ಹಾಳಾದ ಕಾಂಗೈ ಏಜೆಂಟರು ‘ರಾಷ್ಟ್ರಪತಿಯನ್ನೇ ಹೊರಗಿಟ್ಟವುರೇ’ ಅಂತ ಆಂಟಿ-ನೇಷನ್ ಸ್ಲೋಗನ್ನು ಕೂಗಿ, ನಮ್ಮ ಮೋದೀಜಿಯ ಮಹದಾಸೆಯನ್ನೆ ಬುಡಮೇಲು ಮಾಡ್‌ಬಿಟ್ಟ್ರು ಕಣ್ರಿ…

ಅವುಗಳ ಅರಚಾಟದ ಕಾಟ ತಾಳಲಾರದೆ, ತಮ್ಮ ಮನಸ್ಸಿಗೆ ಎಳ್ಳಷ್ಟು ಇಷ್ಟವಿಲ್ಲದಿದ್ದರೂ, ಹಿಸ್ಟಾರಿಕ್ ಫೋಟೊಶೂಟ್ ಪ್ಲ್ಯಾನಿಂಗ್‌ನ ಬ್ಲ್ಯೂಪ್ರಿಂಟಿನಲ್ಲಿ ಹೆಸರೇ ಇಲ್ಲದಿದ್ದರೂ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾರನ್ನ ಮೋದಿಜಿ ತನ್ನ ಬೆನ್ನ ಹಿಂದೆ ಕರೆದುಕೊಂಡು ತಿರುಗಾಡಬೇಕಾಯ್ತು. ಸಿಕ್ಕಿದ್ದೇ ಚಾನ್ಸು ಅಂತ ಸ್ಪೀಕರ್ ಸಾಹೇಬ್ರು, ಇಡೀ ಸ್ಯಾಫ್ರಾನ್ ಸಂಭ್ರಮದ ಇವೆಂಟಿನುದ್ದಕ್ಕೂ ಫೋಟೊ ಫ್ರೇಮಿನಲ್ಲಿ ಮುಖ ಇಣುಕಿಸುತ್ತಲೇ ಬಂದ್ರು. ಒನ್ ಅಂಡ್ ಓನ್ಲಿ ಮಿಂಚಬೇಕೆಂದು ಹಲವು ಹಗಲು-ರಾತ್ರಿ ನಿದ್ರೆ ಮಾಡದೆ ಕನಸು ಕಂಡು, ಅಳತೆಪಟ್ಟಿ ಹಿಡಿದು ಗಡ್ಡ ಟ್ರಿಮ್ ಮಾಡಿಸಿಕೊಂಡಿದ್ದ ಮೋದಿಜಿಗೆ ಇದ್ರಿಂದ ಎಷ್ಟು ಬೇಜಾರಾಗಿರಬೇಡ ನೀವೇ ಹೇಳಿ!? ಇಂಥಾ ಇವೆಂಟಿನ ಪ್ರೊಫೆಷನಲ್ ಫೋಟೊಶೂಟಿನಲ್ಲಿ ತನ್ನದಲ್ಲದ ಇನ್ನೊಂದು ಪೊಲಿಟಿಕಲ್ ಮುಖದೊಟ್ಟಿಗೆ ಮೋದಿಜಿ ಫೋಟೊಫ್ರೇಮ್ ಶೇರ್ ಮಾಡಿಕೊಂಡಿದ್ದು ಬಹುಶಃ ಇದೇ ಮೊದ್ಲು ಅನ್ಸುತ್ತೆ! ಎಷ್ಟು ನೋವಾಗಿರಬೇಡ ಅವರಿಗೆ! ಎಲ್ಲಾ, ಎಲ್ಲಾ, ಈ ದರಿದ್ರದ ಡೆಲಿಬರೇಟೆಡ್ ದುಶ್ಮನ್‌ಗಳಿಂದ್ಲೇ ಆಗಿದ್ದು.

ಆದ್ರೂ ನಮ್ ಮೋದಿಜಿಯ ಫೋಟೊಶೂಟ್‌ಗೆ ಇವ್ರು ಹಿಂಗ್ ಮಾಡಬಾರದಿತ್ತು ಕಣ್ರೀ….

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!