Friday, November 20, 2026

ಪ್ರಾಯೋಗಿಕ ಆವೃತ್ತಿ

ಬೀದಿ ನಾಟಕಗಳಿಂದ ಸತ್ಯ ಪ್ರತಿಪಾದನೆ: ಜನ್ನಿ

70ರ ದಶಕದಲ್ಲಿ ಆರಂಭವಾದ ಬೀದಿ ನಾಟಕಗಳು ನೇರವಾಗಿ ಪ್ರೇಕ್ಷಕರ ಕಣ್ಣಲ್ಲಿ ಕಣ್ಣಿಟ್ಟು ಪ್ರದರ್ಶಿಸುವ ಕಲೆಯಾಗಿದ್ದು, ಸತ್ಯವನ್ನು ಪ್ರತಿಪಾದಿಸುವ ಸತ್ಯದ ಅನುಸಂಧಾನವಾಗುವ ಪ್ರಕ್ರಿಯೆಯಾಗಿದೆ ಎಂದು ಖ್ಯಾತ ರಂಗಕರ್ಮಿ ಎಚ್.ಜನಾರ್ಧನ್ ತಿಳಿಸಿದರು.

ನಗರದ ಬಾಲಭವನದಲ್ಲಿ ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬೀದಿ ನಾಟಕೋತ್ಸವ ಹಾಗೂ ಬೀದಿ ನಾಟಕ ಕಲಾವಿದರ ಪ್ರಸ್ತುತ ದಿನಗಳ ಸವಾಲುಗಳು ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀದಿ ನಾಟಕದ ಕಲಾವಿದರು ಪ್ರೇಕ್ಷಕರ ಕಣ್ಣೆದುರೇ ರಂಗಕಿರಣ, ರಂಗಪ್ರಸ್ತುತಿ ಪ್ರದರ್ಶಿಸುವುದು ಸುಲಭದ ವಿಚಾರವಲ್ಲ. ರಂಗಭೂಮಿಯಲ್ಲಿ ಎಲ್ಲ ವ್ಯವಸ್ಥೆಗಳಿರುತ್ತವೆ. ಆದರೆ, ಬೀದಿ ನಾಟಕ ಸತ್ಯವನ್ನು ಪ್ರತಿಪಾದಿಸುತ್ತದೆ. ನಿರಂತರವಾದ ಅಧ್ಯಯನ, ಅಭ್ಯಾಸ ಹಾಗೂ ಕಲಿಕೆಯಲ್ಲಿ ಪೂರ್ಣನಾದಾಗ ಮಾತ್ರ ನೈಜ ಕಲಾವಿದನಾಗಿ ಹೊರಹೊಮ್ಮುತ್ತಾನೆ ಎಂದರು.

ಮಂಡ್ಯ ಜಿಲ್ಲೆಗೂ ಬೀದಿ ನಾಟಕಕ್ಕೂ ಅವಿನಾಭಾವ ಸಂಬಂಧವಿದ್ದು, ಮಂಡ್ಯ ನೆಲ ಬೀದಿ ನಾಟಕಕ್ಕೆ ತಾಯಿ ಮನೆಯಾಗಿದೆ. ಬೀದಿ ನಾಟಕದಿಂದ ಸಾಕ್ಷರತೆ ಯೋಜನೆ ಯಶಸ್ವಿಯಾಗಿದೆ. ಅದೇ ರೀತಿ ಸರ್ಕಾರಿ ಯೋಜನೆಗಳ ಪ್ರಚಾರಕ್ಕೆ ಬೀದಿ ನಾಟಕಗಳು ಹೆಚ್ಚು ಪರಿಣಾಮ ಬೀರುತ್ತವೆ. ಜಿಲ್ಲೆಯಲ್ಲಿ ಬೀದಿ ನಾಟಕ ಕಲಾವಿದರ ಸಮಾವೇಶ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈರಮುಡಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲೇ ಏಕವ್ಯಕ್ತಿಯಿಂದ ಆರಂಭಗೊಂಡ ಬೀದಿ ನಾಟಕದ ಕಲೆಯನ್ನು ಪೋಷಿಸಲು ಸರ್ಕಾರ ಮತ್ತು ಸಮಾಜ ಮುಂದಾಗಬೇಕು. ಬೀದಿ ನಾಟಕ ಕಲಾವಿದರ ಉನ್ನತಿಗೆ ಯೋಜನೆ ರೂಪಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟದ ಅಧ್ಯಕ್ಷ ಗ್ಯಾರಂಟಿ ರಾಮಣ್ಣ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್, ಜಿಲ್ಲಾ ವಾರ್ತಾಧಿಕಾರಿ ನಿರ್ಮಲಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಕಲಾವಿದ ದೇವರಾಜ ಕೊಪ್ಪ, ಮಂಗಲ ಯೋಗೇಶ್, ಕೀಲಾರ ಕೃಷ್ಣೇಗೌಡ, ಸಂತೆಕಸಲಗೆರೆ ಬಸವರಾಜ್, ಟಿ.ಎಂ.ನಾಗರಾಜು ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ