Wednesday, September 18, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ಗಲಭೆಕೋರರ ವಿರುದ್ದ ಕಠಿಣ ಕ್ರಮ: ಶಿವನಂಜು

ಗಲಭೆಗೆ ಕಾರಣರಾದವರ ವಿರುದ್ಧ ಮಂಡ್ಯ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮ ಕೈಗೊಂಡಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರು ನಾಗಮಂಗಲದಲ್ಲಿ ಮೊಕ್ಕಾಂ ಹೂಡಿ ಶಾಂತಿ ಸ್ಥಾಪನೆಗೆ ಮುಂದಾಗಿದ್ದಾರೆ, ಇತಂಹ ಸಂದರ್ಭದಲ್ಲಿ ವಿಪಕ್ಷ ನಾಯಕರು ಶಾಂತಿ ನೆಲೆಸಲು ಅನುವು ಮಾಡಿಕೊಡಬೇಕೆಂದು ಕಾಂಗ್ರೆಸ್ ಮುಖಂಡ ಶಿವನಂಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಕೋಮು ಸೌಹಾರ್ದತೆಗೆ ಹೆಸರುವಾಸಿಯಾಗಿದೆ. ಜಿಲ್ಲಾಡಳಿತ ಗಣೇಶ ವಿಸರ್ಜನೆ ಸಂದರ್ಭ ಅಹಿತಕರ ಘಟನೆ ನಡೆಯಬಾರದು ಎನ್ನುವ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಸಿದೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೆ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ಸಂದರ್ಭ ಅಹಿತಕರ ಘಟನೆ ನಡೆದಿರುವುದು ವಿಷಾದನೀಯ ಎಂದರು .

ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡುತ್ತಿದ್ದು ,ಇದು ಖಂಡನೀಯ. ಕೆರಗೋಡು ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಶಾಂತಿ ಕದಡಲು ಮುಂದಾಗಿದ್ದರು. ಹೆಚ್ ಡಿ ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕಿಕೊಂಡು ಕೋಮು ಸೌಹಾರ್ದ ಕದಡಲು ಪ್ರಯತ್ನಿಸಿದ್ದರು .ಆದರೆ ಮಂಡ್ಯದ ಜನ ಇದಕ್ಕೆ ಅವಕಾಶ ನೀಡಲಿಲ್ಲ ಎಂದರು .

ನಾಗಮಂಗಲದಲ್ಲಿ ಈಗ ನಡೆದಿರುವ ಘಟನೆ ಬಗ್ಗೆ ಶಾಂತಿ ಸ್ಥಾಪಿಸಲು ಮುಂದಾಗದೆ, ಬಿಜೆಪಿ-ಜೆಡಿಎಸ್ ಪಕ್ಷಗಳ ಮುಖಂಡರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಖಂಡಿಸಿದ ಅವರು, ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ನೂರಾರು ಗಲಭೆಗಳು ನಡೆದಿದ್ದು ಈಗ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಇದೆ ಎಂದು ಹೇಳಲು ಬಿಜೆಪಿ ಮುಖಂಡ ಸಿಟಿ ರವಿ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ನಾನು ಮುಂದಿನ ಜನ್ಮದಲ್ಲಿ ಹುಟ್ಟಿದರೆ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದರು .ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿಯನ್ನು ಕೋಮುವಾದಿ ಅಂದಿದ್ದರು. ಆದರೆ ಈಗ ಅವರೇ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿಎಂ ದ್ಯಾವಪ್ಪ ,ನಗರಸಭೆ ಮಾಜಿ ಸದಸ್ಯ ಕೆಎಲ್ ನಾಗೇಂದ್ರ, ಕಾಂಗ್ರೆಸ್ ಮುಖಂಡರಾದ ವೆಂಕಟೇಶ್, ಉಮ್ಮಡಹಳ್ಳಿ ನಾಗೇಶ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!