Monday, September 16, 2024

ಪ್ರಾಯೋಗಿಕ ಆವೃತ್ತಿ

ಕಬ್ಬು ಕಡಿಯಲು ಬಂದು ಅತ್ಯಾಚಾರಕ್ಕೆ ಒಳಗಾದ್ರು… ಕೊಲೆಯಾದ್ರು…

✍️ ನಾಗೇಶ್ ಎನ್.

ಮಂಡ್ಯ ಜಿಲ್ಲೆಯಲ್ಲಿ ಹಲವಾರು ಸಕ್ಕರೆ ಕಾರ್ಖಾನೆಗಳಿವೆ. ಪ್ರತಿ ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯಲ್ಲಿಯೂ ಕಬ್ಬು ಕಡಿಯಲು ದೂರದ ಉತ್ತರ ಕರ್ನಾಟಕದ ಜನರೇ ಬರಬೇಕು.

ಏಕೆಂದರೆ ಸ್ಥಳೀಯವಾಗಿ ಕಬ್ಬು ಕಡಿಯುವವರ ಸಂಖ್ಯೆ ಸಾಕಷ್ಟು ಕಡಿಮೆ ಇರುವ ಕಾರಣದಿಂದ ಉತ್ತರ ಕರ್ನಾಟಕದ ಬಾಗಲಕೋಟೆ, ಕಲ್ಬುರ್ಗಿ, ಗದಗ, ಹಾವೇರಿ, ಬಳ್ಳಾರಿ, ವಿಜಯಪುರ ಮೊದಲಾದ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಬ್ಬು ಕಟಾವು ಮಾಡಲು ಮಂಡ್ಯ ಜಿಲ್ಲೆಗೆ ಬರುತ್ತಾರೆ.

ವರ್ಷದ ಆರೇಳು ತಿಂಗಳು ಇವರಿಗೆ ಕೆಲಸ ಸಿಗುತ್ತದೆ. ಈ ಕಬ್ಬು ಕಟಾವು ಮಾಡಲು ಬರುವ ಬಹುತೇಕರು ಲಂಬಾಣಿ ತಾಂಡಾದವರು. ಇವರಿಗೆ ಈ ಕಸುಬು ಬಿಟ್ಟು ಬೇರೆ ಕಸುಬು ಗೊತ್ತಿಲ್ಲ. ಇಲ್ಲಿ ಸ್ಥಳೀಯವಾಗಿ ಕಬ್ಬು ಕಡಿಯುವವರು ಹೆಚ್ಚಿನ ಕೂಲಿ ಕೇಳುತ್ತಾರೆ. ಆದರೆ ಈ ಉತ್ತರ ಕರ್ನಾಟಕದ ಮಂದಿ ಕಡಿಮೆ ಕೂಲಿಗೆ ಕೆಲಸ ಮಾಡುವುದರಿಂದ ಇವರನ್ನೇ ಕಾರ್ಖಾನೆಯವರು ಕರೆಸುತ್ತಾರೆ.

ಅತ್ಯಾಚಾರ-ಕೊಲೆ

ಬೆಳಿಗ್ಗೆ ಬೇಗನೆ ಎದ್ದು ಕಬ್ಬು ಕಡಿಯಲು ಹೋಗುವ ಈ ಮಂದಿ, ಇನ್ನು ಮರಳುವುದು ಸಂಜೆಗೆ. ತಮ್ಮೊಡನೆ ಚಿಕ್ಕ ಮಕ್ಕಳು ಸೇರಿದಂತೆ ತಮ್ಮ ಕುಟುಂಬದ ಬಹುತೇಕರನ್ನು ಕರೆದುಕೊಂಡು ಬರುತ್ತಾರೆ. ಹೆಣ್ಣು ಮಕ್ಕಳು ಮನೆಯಲ್ಲಿದ್ದು ಕೆಲಸ ಮಾಡಿಕೊಳ್ಳುತ್ತಾರೆ. ಈ ತಾಂಡಾಗಳ ಹೆಣ್ಣು ಮಕ್ಕಳು ಸ್ಥಳೀಯ ಕಾಮುಕರ ಕೆಟ್ಟ ಕಣ್ಣುಗಳಿಂದ ತಪ್ಪಿಸಿಕೊಳ್ಳಬೇಕು, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ.

ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪದ ಎನ್ಎಸ್ಎಲ್ ಕಾರ್ಖಾನೆಗೆ ಕಬ್ಬು ಕಡಿಯಲೆಂದು ಬಂದಿದ್ದ ಹುರುಗಲವಾಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಂಡಾದ 12 ವರ್ಷದ ಬಾಲಕಿಯೊಬ್ಬಳ ಮೇಲೆ 17 ವರ್ಷದ ಕಾಮುಕನೊಬ್ಬ ಅತ್ಯಾಚಾರ ಮಾಡಲು ಹೋಗಿ, ಬಾಲಕಿ ಕೂಗಿಕೊಂಡಾಗ ಕುಡುಗೋಲಿನಿಂದ ಆಕೆಯ ಕೊಲೆ ಮಾಡಿ ಕಬ್ಬಿನ ಗದ್ದೆಗೆ ಹಾಕಿ,ಅದೇ ಕಬ್ಬಿನ ಗದ್ದೆಯಲ್ಲಿ ಅವಿತುಕೊಂಡಿದ್ದ. ನಂತರ ಸಿಕ್ಕಿಬಿದ್ದ. ಆತನ ಕಾಮತೃಷೆಗೆ ಏನೂ ಅರಿಯದ, ಇನ್ನೂ ಸಾಕಷ್ಟು ಪ್ರಪಂಚ ನೋಡಬೇಕಿದ್ದ ಬಾಲಕಿ ಬಲಿಯಾದಳು.

ಇನ್ನೂ ಹಳ್ಳಿಗಳ ಹೊರವಲಯದಲ್ಲಿ ಟೆಂಟ್ ಹಾಕಿಕೊಂಡು ಜೀವಿಸುವ ಹೆಣ್ಣುಮಕ್ಕಳು ಕಬ್ಬು ಸಾಗಿಸುವ ಟ್ರಾಕ್ಟರ್, ಲಾರಿ ಚಾಲಕರು, ಜಮೀನಿನ ಮಾಲೀಕರು, ಸ್ಥಳೀಯ ಕಾಮುಕರಿಂದ ಕೆಟ್ಟ ದೃಷ್ಟಿಯಿಂದ ಬಚಾವಾಗುವುದು ಕಷ್ಟದ ಕೆಲಸ. ಹಲವೆಡೆ ಲೈಂಗಿಕ ದೌರ್ಜನ್ಯ ನಡೆದರೂ, ಕೆಲವೊಮ್ಮೆ ಬೆಳಕಿಗೆ ಬರುವುದಿಲ್ಲ. ಬಂದರೂ ಹಣವಂತರು, ಸ್ಥಳೀಯರ ವಿರೋಧ ಕಟ್ಟಿಕೊಂಡು ಕೆಲಸ ಮಾಡುವುದು ಸಾಧ್ಯವಿಲ್ಲ. ಹಾಗಾಗಿ ಎಷ್ಟೋ ಲೈಂಗಿಕ ದೌರ್ಜನ್ಯಗಳು ರಾಜಿ ಪಂಚಾಯ್ತಿಯಲ್ಲೇ ಮುಗಿದು ಹೋಗುತ್ತೆ.

ಕೇಳೋರಿಲ್ಲ

ಇನ್ನು ಈ ಜನರಿಗೆ ಅನ್ಯಾಯವಾದರೂ ಇವರ ಮಾತು ಕೇಳೋರೆ ಇಲ್ಲ. ಕಬ್ಬು ಕಡಿಯುವಾಗ ಹಾವು ಕಚ್ಚಿ ಸಾವನ್ನಪ್ಪಿದವರಿಗೆ ಕೆಲವೇ ಸಾವಿರ ಕೊಟ್ಟು ಸುಮ್ಮನಿರಿಸಲಾಗುತ್ತದೆ. ಇತ್ತೀಚೆಗೆ ಕೆ.ಆರ್.ಪೇಟೆ ಬಳಿ ಸಾವನ್ನಪ್ಪಿದ ಮೂವರಿಗೆ ತಲಾ 3.50 ಲಕ್ಷ ಹಣ ಕೊಟ್ಟು ಸಾಗ ಹಾಕಿದ್ದಾರೆ. ಇನ್ನೂ ಹೆಚ್ಚಿನ ಪರಿಹಾರ ಕೊಡಿಸಬೇಕಾದ ಇವರ ಜನಾಂಗದ, ಸಂಘಟನೆಯ ನಾಯಕರು ಕೇವಲ 3.50 ಲಕ್ಷ ಹಣ ಕೊಡಿಸಿ ಅದನ್ನೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ಕಾರ್ಖಾನೆಯ ವಿರುದ್ಧ ಕೇಸು ಹಾಕಿ ಹೆಚ್ಚಿನ ಪರಿಹಾರ ಕೊಡಿಸಲು ಯಾರೂ ಮುಂದಾಗುವುದಿಲ್ಲ.ಅವರಿಗೆ ಸರ್ಕಾರ,ಜನಪ್ರತಿನಿಧಿಗಳ ಸಹಾಯವೂ ದೊರಕುವುದಿಲ್ಲ. ಇದು ಕಬ್ಬು ಕಡಿಯಲು ಉತ್ತರ ಕರ್ನಾಟಕದಿಂದ ಬಂದವರ ದಾರುಣ ಕಥೆ….ವ್ಯಥೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!