Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಬಿಟ್ಟು ಬರುವ ಪ್ರಶ್ನೆಯೇ ಇಲ್ಲ: ಸುಮಲತಾ ಅಂಬರೀಶ್

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಟಿಕೆಟ್ ಗೆ ಬಿಗಿಪಟ್ಟು ಹಿಡಿದಿರುವ ಸಂಸದೆ ಸುಮಲತಾ ಅಂಬರೀಶ್ ಮಂಡ್ಯ ಬಿಟ್ಟು ಬರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿನ ಜೆ.ಪಿ.ನಗರದ ತಮ್ಮ ನಿವಾಸದಲ್ಲಿಂದು ಸುಮಲತಾ ಅಂಬರೀಶ್ ತಮ್ಮ ಬೆಂಬಲಿಗರು, ಆಪ್ತರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ.

ಸಭೆಯಲ್ಲಿ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಬೆಂಬಲಿಗರು, ಹಿತೈಷಿಗಳು ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದ್ದು, ಸುಮಲತಾ ಅವರ ನಡೆ ತೀವ್ರ ಕುತೂಹಲ ಮೂಡಿಸಿದೆ.

ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಹಿನ್ನೆಲೆಯಲ್ಲಿ ಇತ್ತೀಚಿಗೆ ನವದೆಹಲಿಯಲ್ಲಿ ಅಮಿತ್ ಶಾ- ಕುಮಾರಸ್ವಾಮಿ ನಡುವೆ ನಡೆದ ಚರ್ಚೆ ವೇಳೆ ಮಂಡ್ಯವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ತೀರ್ಮಾನಿಸಲಾಗಿದೆ ಎಂಬಂತಹ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕಳೆದ ಬಾರಿ ಪಕ್ಷೇತರ ವಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ಸುಮಲತಾ, ಈ ಬಾರಿ ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿದರೆ ಮುಂದೇನು ಮಾಡಬೇಕೆಂಬ ಬಗ್ಗೆ ಸಭೆಯಲ್ಲಿ ಮಹತ್ವದ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ನಟ ದರ್ಶನ್ ನಿಮ್ಮೊಂದಿಗೆ ಇರುತ್ತೇನೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕೇಳಿದರೆ ಬೆಂಗಳೂರು ಉತ್ತರ ಕ್ಷೇತ್ರವನ್ನಾದರೂ ಬಿಜೆಪಿ ಬಿಟ್ಟುಕೊಡಬಹುದು ಎಂಬ ಮಾತನ್ನು ಜೆಡಿಎಸ್ ನವರು ಆಡುತ್ತಿದ್ದಾರೆ. ಆದರೆ ನನಗೆ ಬೆಂಗಳೂರು ಉತ್ತರದ ಟಿಕೆಟ್ ಪಡೆಯಲು ಒಂದು ಕ್ಷಣ ಸಾಕು. ಆದರೆ ಮಂಡ್ಯ ಬಿಟ್ಟು ಬೇರೆ ಸ್ಪರ್ಧಿಸುವ ವಿಚಾರವೇ ಇಲ್ಲ. ಮೋದಿಯವರು ವಿಶ್ವನಾಯಕರು. ಮೋದಿಯವರ ಅಭಿವೃದ್ಧಿ ಕಾರ್ಯಗಳೇ ಮಂಡ್ಯದಲ್ಲಿ ಬಿಜೆಪಿ ವರ್ಚಸ್ಸಿಗೆ ಕಾರಣ ಎಂದ ಸುಮಲತಾ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಬಿಡಲ್ಲ

ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ಬಿಜೆಪಿ ನನಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಸುಮಲತಾ ಅಂಬರೀಶ್ ಸಭೆಯ ನಂತರ ಸ್ಪಷ್ಟಪಡಿಸಿದ್ದಾರೆ. ಲೋಕಸಭೆಯಲ್ಲಿ ಸ್ಪರ್ಧೆ ಮಾಡುತ್ತೇನೆ ವಿನಃ ರಾಜ್ಯಸಭೆಗೆ ಸ್ಪರ್ಧೆ ಮಾಡಲು ಆಸಕ್ತಿ ಇಲ್ಲ. ಮಂಡ್ಯದ ಜನರು ನನಗೆ ರಾಜಕೀಯ ಶಕ್ತಿ ನೀಡಿದ್ದು ಅದರಂತೆ ಮುಂಬರುವ ಚುನಾವಣೆಯಲ್ಲಿ ಮಂಡ್ಯದಿಂದಲೇ ಸ್ಪರ್ಧಿಸುತ್ತೇನೆ.ಮಂಡ್ಯ ಬಿಟ್ಟು ಬರುವುದಿಲ್ಲ. ಮಂಡ್ಯದಲ್ಲಿ ಸ್ಪರ್ಧೆ ಮಾಡುವ ವಿಚಾರವಾಗಿ ದರ್ಶನ್ ಅವರ ಜೊತೆ ಮಾತನಾಡಿದ್ದೇನೆ. ಅವರು ಚುನಾವಣೆಯಲ್ಲಿ ನನ್ನ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ.

ನಟ ಯಶ್ ಲಂಡನ್ ನಲ್ಲಿರುವ ಕಾರಣ ಅವರೊಂದಿಗೆ ಮಾತನಾಡಿಲ್ಲ. ಬಂದ ಮೇಲೆ ಚರ್ಚೆ ಮಾಡುತ್ತೇನೆ. ಇಂದು ನಡೆದ ಸಭೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಆಪ್ತರು ಮಂಡ್ಯದಿಂದಲೇ ಸ್ಪರ್ಧಿಸಿ ಎಂದು ಹೇಳಿದ್ದಾರೆ. ಅದರಂತೆ ನನಗೆ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!