Thursday, September 19, 2024

ಪ್ರಾಯೋಗಿಕ ಆವೃತ್ತಿ

ಬೇಸಿಗೆ ಬೆಳೆಗೆ ಕಟ್ಟು ಪದ್ಧತಿಯಲ್ಲಿ ಕೊನೆ ಭಾಗಕ್ಕೆ ನೀರೊದಗಿಸಿ : ಮಧು ಜಿ. ಮಾದೇಗೌಡ

ಬೇಸಿಗೆ ಅವಧಿಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕೊನೆಯ ಭಾಗದಲ್ಲಿರುವ ಬೆಳೆಗಳ ರಕ್ಷಣೆಗೆ ಸಮಪರ್ಕವಾಗಿ ನೀರೊದಗಿಸಲು ಪ್ರಥಮ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಒತ್ತಾಯಿಸಿದರು.

ವಿಧಾನ ಪರಿಷತ್ತಿನಲ್ಲಿ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ಬೇಸಿಗೆ ಅವಧಿಯಲ್ಲಿ ಕೊನೆ ಭಾಗದ ರೈತರು ಬೆಳೆಗಳಿಗೆ ನೀರುಣಿಸಲು ಈ ಹಿಂದಿನಿಂದಲೂ ಸಾಕಷ್ಟು ತೊಂದರೆ ಅನುಭವಿಸುತ್ತಾ ಬಂದಿದ್ದಾರೆ. ಕಡೇ ಭಾಗದ ರೈತರಿಗೆ ಅನುಕೂಲವಾಗುವಂತೆ ನೀರು ಒದಗಿಸಲು ಸರ್ಕಾರ ಅಗತ್ಯ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರ ಪರವಾಗಿ ಉತ್ತರಿಸಿದ ಸಚಿವ ಜೆ.ಮಾಧುಸ್ವಾಮಿ ಅವರು, ಈ ಬಾರಿ ಕೆ.ಆರ್.ಎಸ್. ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ಲಭ್ಯವಿದ್ದು, ಕಡೇ ಭಾಗದ ರೈತರನ್ನೂ ಗಮನದಲ್ಲಿಟ್ಟುಕೊಂಡು ಅಚ್ಚುಕಟ್ಟು ಪ್ರದೇಶದಲ್ಲಿನ ಎಲ್ಲಾ ಬೆಳೆಗಳಿಗೂ ನೀರು ಒದಗಿಸಲಾಗುವುದು. ಈ ಬಗ್ಗೆ ಆತಂಕ ಬೇಡ ಎಂದು ಭರವಸೆ ನೀಡಿದರು.

ಕಟ್ಟು ಪದ್ಧತಿ ಆಧಾರದಲ್ಲಿ ನೀರು

ಕೃಷ್ಣರಾಜಸಾಗರ ಜಲಾಶಯದ ವಿಶ್ವೇಶ್ವರಯ್ಯ ನಾಲಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಹಾಲಿ ಬೆಳೆದು ನಿಂತಿರುವ ಕಬ್ಬಿನ ಬೆಳೆಗಳಿಗೆ ಮೇ 29 ರವರೆಗೂ ಕಟ್ಟು ಪದ್ಧತಿ ಆಧಾರದಲ್ಲಿ ನೀರು ಒದಗಿಸಲಾಗುವುದು. 18 ದಿನಗಳು ನಾಲೆಯಲ್ಲಿ ನೀರನ್ನು ಹರಿಸಿ, ಮುಂದಿನ 12 ದಿನಗಳು ನಾಲೆಯಲ್ಲಿ ನೀರನ್ನು ನಿಲ್ಲಿಸಲಾಗುವುದು. ವಿತರಣಾ ನಾಲೆ ಮತ್ತು ಉಪ ನಾಲೆಗಳಲ್ಲಿ ನಿಗದಿತ ಅವಧಿಗೆ, ಅವಶ್ಯಕತೆಗೆ ತಕ್ಕಂತೆ ನೀರನ್ನು ಹರಿಸಲಾಗುವುದು ಎಂದು ತಿಳಿಸಿದರು.

ನೀರು ಹರಿಸುವ ದಿನಾಂಕ

ಫೆ. 10 ರಿಂದ 28, ಮಾರ್ಚ್ 12 ರಿಂದ 30, ಏಪ್ರಿಲ್ 11 ರಿಂದ 29 ಹಾಗೂ ಮೇ 15 ರಿಂದ 29 ರವರೆಗೆ ನೀರು ಹರಿಸಲಾಗುತ್ತದೆ.

ಕೆ.ಆರ್.ಎಸ್. ಅಣೆಕಟ್ಟು ಪುನಶ್ಚೇತನ: ರೂ. 2,912.27 ಲಕ್ಷ ವೆಚ್ಚ

ಕೃಷ್ಣರಾಜಸಾಗರ ಜಲಾಶಯದ ಪುನಶ್ಚೇತನಕ್ಕಾಗಿ ಕಳೆದ ಮೂರು ವರ್ಷಗಳಲ್ಲಿ (2019-22) ಅಣೆಕಟ್ಟು ಪುನಶ್ಚೇತನ ಅಭಿವೃದ್ಧಿ ಯೋಜನೆಯಡಿ ಒಟ್ಟು ರೂ.2,912.27 ಲಕ್ಷ ವೆಚ್ಚ ಮಾಡಲಾಗಿದೆ.

2019-20ರಲ್ಲಿ ರೂ. 825.10 ಲಕ್ಷ, 2020-21ರಲ್ಲಿ ರೂ.749.36 ಲಕ್ಷ ಹಾಗೂ 2021-22ರಲ್ಲಿ ರೂ. 1337.81 ಲಕ್ಷಗಳ ವೆಚ್ಚದಲ್ಲಿ ಅಣೆಕಟ್ಟೆಯ ಸುರಕ್ಷತೆಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!