Friday, November 20, 2026

ಪ್ರಾಯೋಗಿಕ ಆವೃತ್ತಿ

ಸೂಪರ್‌ ಸ್ಪೆಷಾಲಿಟಿ : ಶೇ.50ರಷ್ಟು ಸೀಟು ಹಂಚಿಕೆಗೆ ಸುಪ್ರೀಂ ಕೋರ್ಟ್‌ ಅನುಮತಿ

ನೀಟ್‌ ಅರ್ಹತೆ ಪಡೆದ ಸೇವಾನಿರತ ಅಭ್ಯರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.50ರಷ್ಟು ಸೂಪರ್‌ ಸ್ಪೆಷಾಲಿಟಿ ಸೀಟುಗಳನ್ನು ಹಂಚಿಕೆ ಮಾಡಲು ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ.

ನ.18ರಂದು ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ತೀರ್ಪಿನ ಅನ್ವಯ ತಮಿಳುನಾಡು ಸರ್ಕಾರ ಮತ್ತು ಸೇವಾನಿರತ ಅಭ್ಯರ್ಥಿಗಳು ಸಲ್ಲಿಸಿದ್ದ ಸ್ಪಷ್ಟೀಕರಣದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ. ಆರ್‌. ಗವಾಯಿ ಮತ್ತು ವಿಕ್ರಮ್‌ ನಾಥ್‌ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. 

2022-23ರ ಶೈಕ್ಷಣಿಕ ವರ್ಷಕ್ಕೆ ಸೇವಾನಿರತ ವೈದ್ಯರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಡಿಎಂ/ಎಂಸಿಎಚ್‌ ಕೋರ್ಸ್‌ಗಳಲ್ಲಿ ಶೇ.50ರಷ್ಟು ಸೂಪರ್‌ ಸ್ಪೆಷಾಲಿಟಿ ಸೀಟುಗಳನ್ನು ಮೀಸಲಿಡಲು ಅನುವು ಮಾಡಿಕೊಡುವಂತೆ ಕೋರಿ ತಮಿಳುನಾಡು ಸರ್ಕಾರ ಮತ್ತು ಅಭ್ಯರ್ಥಿಗಳು ಮದ್ರಾಸ್‌ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಮದ್ರಾಸ್‌ ಹೈಕೋರ್ಟಿನ ನ್ಯಾಯಮೂರ್ತಿ ಸುರೇಶ್‌ ಅವರು, ಈ ಅರ್ಜಿಗೆ ಸಂಬಂಧಿಸಿದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಇದೆ. ಈ ಕುರಿತು ನೀವು ಸುಪ್ರೀಂ ಕೋರ್ಟ್‌ ಸಂಪರ್ಕಿಸಬಹುದು ಎಂದಿದ್ದರು.

2020ರ ನವೆಂಬರ್‌ 7ರಂದು ತಮಿಳುನಾಡು ಸರ್ಕಾರ, ಸೇವಾನಿರತ ವೈದ್ಯರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಮೀಸಲಿಡಬೇಕು ಎಂದು ಅಧಿಸೂಚನೆ ಹೊರಡಿಸಿತ್ತು.

ತಮಿಳುನಾಡು ಸರ್ಕಾರದ ಆದೇಶದ ಪ್ರಕಾರ 15 ದಿನಗಳ ಒಳಗೆ ಆ ಸೀಟುಗಳನ್ನು ಭರ್ತಿ ಮಾಡುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ. 16ನೇ ದಿನದಂದು ಸೇವಾನಿರತ ಅಭ್ಯರ್ಥಿಗಳಿಂದ ಭರ್ತಿಯಾಗದ ಸೀಟುಗಳನ್ನು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಆಧಾರದ ಮೇಲೆ ಬೇರೆ ಅಭ್ಯರ್ಥಿಗಳಿಗೆ ನೀಡಬಹುದು ಎಂದೂ ಸೂಚಿಸಿದೆ. 

ಎನ್ ಕಾರ್ತಿಕೇಯನ್ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ಎಲ್‌ಎನ್ ರಾವ್ ಅವರು ತಮಿಳುನಾಡು ಅಧಿಸೂಚನೆಯನ್ನು ತಡೆಹಿಡಿಯಲು ನಿರಾಕರಿಸಿದ್ದರು. ಜತೆಗೆ ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಲ್ಲಿ ಸೇವೆಯಲ್ಲಿರುವ ವೈದ್ಯರಿಗೆ ಮೀಸಲಾತಿ ನೀಡಲು ರಾಜ್ಯಗಳು ಸಮರ್ಥವಾಗಿವೆ ಎಂದು ಹೇಳಿದ್ದರು.

ಈ ಪ್ರಕರಣದ ವಿಚಾರಣೆಯನ್ನು 2023ರ ಫೆ.14ಕ್ಕೆ ಮುಂದೂಡಿ ಪೀಠ ಆದೇಶಿಸಿದೆ. 

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ