ಪ್ರತಿಯೊಬ್ಬರು ತಪ್ಪದೇ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳುವ ಮೂಲಕ ಆರೋಗ್ಯಯುತ ಜೀವನ ನಡೆಸಬೇಕೆಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.
ಪಾಂಡವಪುರ ತಾಲ್ಲೂಕಿನ ಚಿಟ್ಟನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದೊಂದಿಗೆ ಶ್ರೀ ಬಾಲಭೈರವೇಶ್ವರ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ಬೆಂಗಳೂರು ಇವರ ನೇತೃತ್ವದಲ್ಲಿ ಆಯೋಜಿಸಿದ್ದ ಉಚಿತ ಹೃದಯರೋಗ, ನರರೋಗ, ಕ್ಯಾನ್ಸರ್, ಮೂತ್ರಪಿಂಡದ ಕಲ್ಲು ಕಾಯಿಲೆಗಳ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ಕಾಯಿಲೆಗಳು ಸರ್ವೇಸಾಮಾನ್ಯವಾಗಿವೆ, ಇವುಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ನಿಯಮಿತವಾದ ಆರೋಗ್ಯ ತಪಾಸಣೆ ಅಗತ್ಯ ಎಂದ ಅವರು, ಸಮಾಜ ಸೇವಕ ಅರವಿಂದ ರಾಘವನ್ ಅವರ ನೇತೃತ್ವದಲ್ಲಿ ಚಿಟ್ಟನಹಳ್ಳಿ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಶಿಬಿರ ನೇತೃತ್ವ ವಹಿಸಿದ್ದ ವಕೀಲ, ಸಮಾಜ ಸೇವಕ ಅರವಿಂದ ರಾಘವನ್ ಮಾತನಾಡಿ, ನಮ್ಮ ಟ್ರಸ್ಟ್ ವತಿಯಿಂದ ಚಿಟ್ಟನಹಳ್ಳಿಯಲ್ಲಿ ಆಯೋಜಿಸಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ನಡೆಯಲಿದೆ ಎಂದರು.
ಶಿಬಿರದಲ್ಲಿ ಕಣ್ಣಿನ ತಪಾಸಣೆ, ಹೃದಯರೋಗ, ಇಸಿಜಿ, ಎಕೋ, ಬಿ.ಪಿ, ಶುಗರ್ ಪರೀಕ್ಷೆ, ಮೂತ್ರಪಿಂಡದ ಸಂಬಂಧಿ ತೊಂದರೆಯ ಲಕ್ಷಣಗಳು, ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರಪಿಂಡದಲ್ಲಿ ಹರಳು (ಕಿಡ್ನಿಸ್ಟೋನ್), ಮೂತ್ರ ವಿಸರ್ಜನೆ ವೇಳೆ ಉರಿ, ರಕ್ತ ಬರುವುದು ಸೇರಿದಂತೆ ಇತರೆ ಕಾಯಿಲೆಗಳಿಗೆ ತಪಾಸಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ, ಜಯದೇವ ಆಸ್ಪತ್ರೆ ಹೃದಯ ತಜ್ಞ ವೈದ್ಯ ಡಾ.ಸಂತೋಷ್, ಬೆಂಗಳೂರು ಅಪೋಲೋ ಆಸ್ಪತ್ರೆಯ ಡಾ.ನಾಗರಾಜು, ಡಾ.ಸಿ.ಎ.ಪ್ರಶಾಂತ್, ಡಾ.ಕೆ.ಎಸ್.ರವಿಶಂಕರ್, ಕಾವೇರಿ ಆಸ್ಪತ್ರೆಯ ಡಾ.ಪ್ರವೀಣ್, ಕನಕಲಕ್ಷ್ಮಿ ಚಲುವೇಗೌಡ, ದೇಸಿಗೌಡ, ಬಿ.ಬೆಟ್ಟೆಗೌಡ, ಪಾಪಣ್ಣ ಮತ್ತಿತರರು ಭಾಗವಹಿಸಿದ್ದರು.




