Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು| ಡಿಸೆಂಬರ್ ನಲ್ಲಿ ತಬ್ಲಿಕ್ ಜಮಾತ್ ಇಜ್ಜಿತಮಾ ಧಾರ್ಮಿಕ ಸಮ್ಮೇಳನ

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡಲದೊಡ್ಡಿ ಗ್ರಾಮದ ಹೊರ ವಲಯದಲ್ಲಿ ಡಿಸೆಂಬರ್ 10 ಮತ್ತು 11ರಂದು  ತಬ್ಲಿಕ್ ಜಮಾತ್ ಇಜ್ಜಿತಮಾ ಧಾರ್ಮಿಕ ಸಮ್ಮೇಳನ ನಡೆಯಲಿದ್ದು, ಅದರ ಪೂರ್ವಭಾವಿ ಸಭೆಯು ಕೊಪ್ಪದಲ್ಲಿ ನಡೆಯಿತು.

ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರು, ಎಲ್ಲಾ ಧರ್ಮಗಳ ಸಾರವು ಒಂದೇ ಆಗಿದ್ದು. ಭಗವಂತನ ಸಾಕ್ಷಾತ್ಕಾರವನ್ನು ಹೊಂದುವುದಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ಭಾರತೀಯ ಸಂಸ್ಕೃತಿಯು ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ಒಬ್ಬರಿಗೆ ಕೇಡು ಬಯಸಿ ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸುವ ಧಾರ್ಮಿಕ ಸಂದೇಶವು ಯಾವುದೇ ಧರ್ಮದಲ್ಲಿಯೂ ಇಲ್ಲ. ಪ್ರವಾದಿ ಮಹಮ್ಮದ್ ಪೈಗಂಬರರ ಆಶಯಗಳು ಹಾಗೂ ಧಾರ್ಮಿಕ ಸಂದೇಶವನ್ನು ನಾಡಿಗೆ ಬಿತ್ತರಿಸುವ ನಿಟ್ಟಿನಲ್ಲಿ ಸಮಾಜದಲ್ಲಿ ವಾಸಿಸುವ ಎಲ್ಲಾ ಧರ್ಮೀಯರನ್ನು ಒಳಗೊಂಡಂತೆ ಎಂದು ಪೂರ್ವಭಾವಿ ಸಭೆಯನ್ನು ನಡೆಸುತ್ತಿರುವುದು ಸ್ವಾಗತವಾಗಿದೆ ಎಂದರು.

ಮಾನವ ಧರ್ಮಕ್ಕಿಂತ ಮಿಗಿಲಾದ ಧರ್ಮ ವಿಶ್ವದಲ್ಲಿಯೇ ಯಾವುದು ಇಲ್ಲ, ಮಾನವತೆಯ ಸಂದೇಶವನ್ನು ಸಾರುವ ಇಸ್ಲಾಂ ಧರ್ಮವು ಯಾರಿಗೂ ಕೇಡನ್ನು ಬಯಸುವುದಿಲ್ಲ. ಆದ್ದರಿಂದ ನಾಡಿಗೆ ಭಾವೈಕ್ಯತೆಯ ಸಂದೇಶವನ್ನು ಸಾರಲಿರುವ ಈ ಧಾರ್ಮಿಕ ಸಭೆಯು ಮದ್ದೂರು ತಾಲೂಕಿನ ಕೊಪ್ಪದ ನೆಲದಲ್ಲಿ ನಡೆಯುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ಸಂಗತಿಯಾಗಿದೆ. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಈ ಧಾರ್ಮಿಕ ಸಮಾವೇಶಕ್ಕೆ ನಾವೆಲ್ಲರೂ ಕೈಗೂಡಿಸಿ ಕೆಲಸ ಮಾಡುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸುವ ಜೊತೆಗೆ ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದು ಕೆ.ಟಿ. ಶ್ರೀಕಂಠೇಗೌಡ ಮನವಿ ಮಾಡಿದರು.

ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಾಂ ಆಜಾದ್, ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರು ನಾಡಿಗೆ ನೀಡಿರುವ ಕೊಡುಗೆಗಳು ಇಂದಿಗೂ ಚಿರಸ್ಥಾಯಿಯಾಗಿ ಉಳಿದಿವೆ. ನಮ್ಮ ರಾಜ್ಯ ಸೇರಿದಂತೆ ದೇಶದ ಉನ್ನತಿಗೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಕೊಡುಗೆ ಅಪಾರವಾಗಿದೆ. ಈ ದಿಕ್ಕಿನಲ್ಲಿ ಮುಸ್ಲಿಂ ಬಾಂಧವರು ಒಂದಾಗಿ ನಡೆಸುತ್ತಿರುವ ಧಾರ್ಮಿಕ ಸಮ್ಮೇಳನವು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾರುವ ಕಾರ್ಯಕ್ರಮವಾಗಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಸಾವಿರಾರು ಮುಸ್ಲಿಂ ಬಾಂಧವರು ಎರಡು ದಿನಗಳ ಕಾಲ ಒಗ್ಗೂಡಿ ನಡೆಸುವ ಈ ಧಾರ್ಮಿಕ ಸಮ್ಮೇಳನವನ್ನು ನಾಗರೀಕ ಸಮಾಜದ ಎಲ್ಲ ಬಂಧುಗಳು ಸಹಕಾರ ನೀಡುವ ಮೂಲಕ ಯಶಸ್ವಿಗೊಳಿಸಿಕೊಡಬೇಕು ಎಂದು ವಿಚಾರವಾದಿ ಹಾಗೂ ಚಿಂತಕ ಕುಮಾರ್ ಕೊಪ್ಪ ಮನವಿ ಮಾಡಿದರು.

ಧಾರ್ಮಿಕ ಗುರುಗಳಾದ ಮಹಮ್ಮದ್ ಖಾಸಿಂ, ತಬ್ಲಿಕ್ ಜಮಾತ್ ಧಾರ್ಮಿಕ ಸಮ್ಮೇಳನ ಕುರಿತು ಮಾತನಾಡಿದರು.

ನಾಗಮಂಗಲ ತಾಲೂಕು ಗ್ರಾಮಾಂತರ ಕೆ ಎನ್ ದಿವಾಕರ್, ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ ಪಿ ನವೀನ್ ಕುಮಾರ್, ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ, ವಕೀಲರಾದ ರಮೇಶ್, ಕೊಪ್ಪ ಆರಕ್ಷಕ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ವೆಂಕಟೇಶ್, ಸ್ಥಳೀಯ ಮುಖಂಡರಾದ ರಮೇಶ್, ಶಿವಣ್ಣ, ಪುಟ್ಟಸ್ವಾಮಿ, ಹೊಸಳ್ಳಿ ಶ್ರೀನಿವಾಸ್, ಕೃಷ್ಣೆಗೌಡ, ಮಧು, ಬಿದರಕೋಟೆ ಕುಮಾರ್, ಅಭಿನವ ಭಾರತೀ ಶಾಲೆಯ ಅಧ್ಯಕ್ಷ ಶಿವಮೂರ್ತಿ, ಮದ್ದೂರು ತಾ.ಪಂ. ಮಾಜಿ ಅಧ್ಯಕ್ಷ ಶಿವಣ್ಣ, ಕೊಪ್ಪ ಮೋಹನ್, ಕಿಸರ್ ಅಹಮದ್ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 500ಕ್ಕೂ ಹೆಚ್ಚು ಮುಸ್ಲಿಂ ಭಂಧವರು ಸಭೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!