Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಾತುಕತೆ ವಿಫಲ: ಅ.5ಕ್ಕೆ ರೈತಸಂಘದಿಂದ ಹೆದ್ದಾರಿ ತಡೆ

ಪ್ರತಿ ಟನ್ ಕಬ್ಬಿಗೆ 4,500 ರೂ. ಧನ ನಿಗದಿ,ಕೆಆರ್‌ಎಸ್‌ ಸುತ್ತಮುತ್ತ ಗಣಿಗಾರಿಕೆ ನಿಷೇಧ ಸೇರಿದಂತೆ 18 ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 5ರ ದಸರಾ ದಿನದಂದು ಮೈಸೂರಿಗೆ ಸಂಪರ್ಕ ಕಲ್ಪಿಸುವ 8 ಹೆದ್ದಾರಿಗಳನ್ನು ತಡೆದು ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಲಿದೆ.

ವಿದ್ಯುತ್ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು, ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಿದಂತೆ ಆಗ್ರಹಿಸಿ, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವುದು ಸೇರಿದಂತೆ 18 ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಇತ್ತೀಚೆಗೆ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಆಗ್ರಹಿಸಲಾಗಿತ್ತು.

ಅಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರ ಬೇಡಿಕೆಗಳನ್ನು ಈಡೇರಿಸದೆ ಕಡೆಗಣಿಸಿದ ಹಿನ್ನೆಲೆಯಲ್ಲಿ ಅಕ್ಟೋಬರ್ 5 ರ ದಸರಾ ದಿನದಂದು ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಂಟು ಕಡೆಗಳಲ್ಲಿ ರೈತರು ತಮ್ಮ ಹಸು, ಎತ್ತು,ಕುರಿ, ಕೋಳಿ, ಗಾಡಿ, ಟ್ಯಾಕ್ಟರ್ ಅನ್ನು ರಸ್ತೆಗಳಿಸಿ ಬೃಹತ್ ಚಳುವಳಿಯನ್ನು ಮಾಡುವುದಾಗಿ ರೈತ ಸಂಘ ಎಚ್ಚರಿಕೆ ನೀಡಿತ್ತು.

ಈ ಮಾಹಿತಿ ಪಡೆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಅವರು ಇಂದು ಮೈಸೂರು ಜಿಲ್ಲಾಡಳಿತದ ನೇತೃತ್ವದಲ್ಲಿ ರೈತ ನಾಯಕರೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಎ. ಎಲ್. ಕೆಂಪೂಗೌಡ, ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ಮುಖಂಡರಾದ ಎಚ್. ಸಿ. ಮಧುಚಂದ್ರನ್, ಪ್ರಸನ್ನ ಗೌಡ,ಚಿಕ್ಕಾಡೆ ಹರೀಶ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸಚಿವ ಸೋಮಶೇಖರ್ ಅವರೊಂದಿಗೆ ನಡೆದ ಮಾತುಕತೆಯು ವಿಫಲವಾಗಿದ್ದು, ನಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸುವ ತನಕ ಹೋರಾಟವನ್ನು ಕೈ ಬಿಡುವ ಮಾತೇ ಇಲ್ಲ ಎಂದು ರೈತ ನಾಯಕರು ಸಚಿವರಿಗೆ ತಿಳಿಸಿ ಹೊರಬಂದರು.

ಅದರಂತೆ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ತಡೆಯುವ ಹೋರಾಟಕ್ಕೆ ಸಾರ್ವಜನಿಕರು ಹಾಗೂ ರೈತ ಮಕ್ಕಳು ಬೆಂಬಲಿಸ ಬೇಕು.ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ರೈತ ನಾಯಕರು ಕರೆ ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!