Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೋಮು ದ್ವೇಷ – ಅಸಹಿಷ್ಣುತೆ ವಿರುದ್ದ ಸಮರ ಸಾರಬೇಕಿದೆ : ತೀಸ್ತಾ ಸೆಟಲ್ವಾಡ್

ದೇಶದಲ್ಲಿ ಧರ್ಮ ಧರ್ಮಗಳ ನಡುವೆ ಬೆಂಕಿ ಹೆಚ್ಚಿ ಕೋಮು ದ್ವೇಷ ಹರಡುತ್ತಿರುವವವ ವಿರುದ್ಧ ದೇಶದ ಜನರು ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಕರೆ ನೀಡಿದರು.

ಸಮಾನ ಮನಸ್ಕರ ವೇದಿಕೆ ವತಿಯಿಂದ ಶ್ರೀರಂಗಪಟ್ಟಣದಲ್ಲಿ ಭಾನುವಾರ ನಡೆದ ಗಣರಾಜ್ಯೋತ್ಸವ ಮತ್ತು ಗಾಂಧಿ ನೆನಪಿನಲ್ಲಿ ಸಾಮರಸ್ಯ ಸಹಬಾಳ್ವೆ ಸಂಗಮ ಸಮಾವೇಶನ್ನು ಸಂವಿಧಾನ ಪೀಠಿಕೆ ಓದುವ ಮುಖಾಂತರ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಸ್ವಾತಂತ್ರ ಹೋರಾಟಕ್ಕಾಗಿ ಹಲವಾರು ವರ್ಷಗಳ ಕಾಲ ಹೋರಾಟ ಮಾಡಿ, ಅಮೂಲ್ಯವಾದ ಸ್ವಾತಂತ್ರವನ್ನು ಗಳಿಸಿಕೊಂಡಿದ್ದೇವೆ, ಇತಿಹಾಸಲ್ಲಿ ದೇಶದ ಜನರನ್ನು ಹಿಂದಿನಿಂದಲೂ ಒಡೆದು ಆಳುವ ಶಕ್ತಿಗಳು ಜಾಗೃತವಾಗಿದೆ, ಇಂತಹ ದುಷ್ಟ ಶಕ್ತಿಗಳ ವಿರುದ್ಧ ನಾವು ಜಾಗೃತರಾಗಿ ಒಗ್ಗೂಡಿ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ. ದೇಶದ ಇತಿಹಾಸದ ಹೆಸರಿನಲ್ಲಿ ದೇಶದ ಜನರನ್ನು ಛಿದ್ರ ಛಿದ್ರ ಮಾಡುವ ಕೆಲಸ ನಡೆಯುತ್ತಿದೆ, ಸಂವಿಧಾನ ಕಾಲಾಳುಗಳಾದ ನಾವು ಇಂತಹ ಕೋಮುದ್ವೇಷದ ವಿರುದ್ದ ಮಾತನಾಡಬೇಕಿದೆ ಎಂದು ಹೇಳಿದರು.

nudikarnataka.com

ಬಹುಸಂಖ್ಯಾತರ ಮೇಲೆ ದೊಡ್ಡ ಜವಾಬ್ದಾರಿ ಇದೆ 

ಬಹುಸಂಖ್ಯಾತರ ಮೇಲೆ ದೊಡ್ಡ ಜವಾಬ್ದಾರಿ ಇದೆ, ಮುಸಲ್ಮಾನರು, ಕ್ರಿಶ್ಚಿಯನ್ನರು, ಸಿಖ್ಖರು ಮುಂತಾದ ಧರ್ಮದ ಜನರಿಗೆ ಸುರಕ್ಷತೆಯ ಖಾತ್ರಿಯನ್ನು ಬಹು ಸಂಖ್ಯಾತರು ನೀಡಬೇಕಾಗಿದೆ. ಎಲ್ಲರು ಭಾತೃತ್ವದಿಂದ ಶಾಂತಿ ಸಹನೆಯಿಂದ ಜೀವಿಸುವಂತಹ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ. ಇಂದು ಕೋಮು ದ್ವೇಷವನ್ನು ವ್ಯವಸ್ಥಿತವಾಗಿ ಹರಡಲಾಗುತ್ತಿದೆ, ಇದನ್ನು ನಾವೆಲ್ಲ ಪ್ರತಿರೋಧಿಸಬೇಕಾಗಿದೆ. ಹಿಂಸೆ ಹರಡುವವರ ನಡುವೆ ಸೌಹಾರ್ದತೆಯನ್ನು ಬೆಳೆಸಬೇಕಿದೆ ಎಂದರು.

ಖಾಸಗೀಕರಣದ ವಿರುದ್ಧ ಬೀದಿ ಬೀದಿಯಲ್ಲಿ ಮಾತನಾಡಬೇಕಿದೆ 

ಈಗಿನ ಕೇಂದ್ರ ಸರ್ಕಾರ ಸರ್ಕಾರಿ ಉದ್ಯಮಗಳನ್ನು ಬಂಡವಾಳ ಶಾಹಿಗಳ ಹಿಡಿತಕ್ಕೆ ನೀಡುತ್ತಿದ್ದು, ಖಾಸಗೀಕರಣದ ವಿರುದ್ಧ ಬೀದಿ ಬೀದಿಯಲ್ಲಿ ನಿಂತು ಮಾತನಾಡಬೇಕಿದೆ, ಖಾಸಗೀಕರಣದಿಂದಾಗುವ ಘೋರ ಪರಿಣಾಮಗಳ ಬಗ್ಗೆ ತಿಳಿಸಿ ಹೇಳಬೇಕಾಗಿದೆ. ದೇಶದ ನಿಜವಾದ ಸಮಸ್ಯೆಗಳೇನು ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಛತ್ರಪತಿ ಶಿವಾಜಿ ಮುಸಲ್ಮಾನರ ದ್ವೇ‍ಷಿಯಲ್ಲ

ಮರಾಠ ಸಾಮ್ರಾಜ್ಯದ ಛತ್ತಪತಿ ಶಿವಾಜಿ ಮುಸಲ್ಮಾನ ದ್ವೇಷಿಯಾಗಿರಲಿಲ್ಲ, ಆತ ಹಿಂದೂ ಹೃದಯ ಸಾಮ್ರಾಟನೂ ಆಗಿರಲಿಲ್ಲ, ಆದರೆ ಕೆಲವು ಕೋಮುವಾದಿಗಳು ಶಿವಾಜಿಯನ್ನು ತಮಗೆ ಬೇಕಾದಂತೆ ಚಿತ್ರಿಸಿ ಸುಳ್ಳು ಬಿತ್ತುವ ಕೆಲಸ ಮಾಡುತ್ತಿದ್ದಾರೆ, ಆದರೆ ವಾಸ್ತವವಾಗಿ ಶಿವಾಜಿ ಆಸ್ತಾನದಲ್ಲಿ ಮುಸಲ್ಮಾನರೇ ಹೆಚ್ಚು ಹುದ್ದೆಗಳನ್ನು ಹೊಂದಿದ್ದರು. ಆತ ಔರಂಗಜೇಬನ ವಿರುದ್ದ ಯುದ್ದ ಮಾಡಿದ್ದು, ಸಾಮ್ರಾಜ್ಯ ವಿಸ್ತರಣೆಗಾಗಿಯೇ ಹೊರತು ಧರ್ಮ ದ್ವೇಷದಿಂದಲ್ಲ, ಇದು ಎಲ್ಲಾ ವಿದ್ಯಾವಂತರಿಗೆ ತಿಳಿದಿರುವ ಸತ್ಯವಾಗಿದೆ. ಇತಿಹಾಸದ ಬಗ್ಗೆ ಯಾರೂ ನಮಗೆ ಪಾಠ ಹೇಳುವ ಅವಶ್ಯಕತೆ ಇಲ್ಲ. ಇಂತಹ ಇತಿಹಾಸವನ್ನು ನಾವು ಜನರ ಮುಂದಿಡಬೇಕಿದೆ ಎಂದರು.

ಗಾಂಧಿ ಹತ್ಯೆಯೇ ಸ್ವಾತಂತ್ರ ಭಾರತದ ಮೊದಲ ಭಯೋತ್ಪಾದಕ ಕೃತ್ಯ

ಜನವರಿ 30, 1948ರ ಗಾಂಧಿ ಹತ್ಯೆಯೇ ಸ್ವಾತಂತ್ರ ಭಾರತ ಮೊದಲ ಭಯೋತ್ಪಾದಕ ಕೃತ್ಯ. ಈ ಹತ್ಯೆ ಅಚಾನಕ್ ಆಗಿ ನಡೆದ ಘಟನೆಯಾಗಿರಲಿಲ್ಲ, ಇದಕ್ಕೂ ಮುನ್ನ ಐದು ಬಾರಿ ಗಾಂಧಿಯವರ ಕೊಲೆಗೆ ಸಂಚು ರೂಪಿಸಲಾಗಿತ್ತು. ಈ ಪೈಕಿ ಮೂರು ಸಂಚುಗಳಲ್ಲಿ ನಾಥೂರಾಂ ಗೋಡ್ಸೆ ಭಾಗಿಯಾಗಿದ್ದನು. ಗೋಡ್ಸೆ ಯಾವ ಹಿನ್ನೆಲೆಯಿಂದ ಬಂದವನು ಎಂಬುದು ಜಗತ್ತಿಗೆ ಗೊತ್ತಿರುವ ಸತ್ಯವಾಗಿದೆ, ಇವುಗಳನ್ನು ಜಗತ್ತಿಗೆ ಸಾರಿ ಹೇಳಬೇಕಾಗಿದೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಯಷ್ಟೆ ಆಗಿರಲಿಲ್ಲ, ಅವರು ಆರ್ಥಿಕ ತಜ್ಞ, ಸಾಮಾಜ ಶಾಸ್ತ್ರಜ್ಞ ಹಾಗೂ ಇತಿಹಾಸ ತಜ್ಞರು ಆಗಿದ್ದರು. ಅವರ ಬಗ್ಗೆ ಕೇಂದ್ರ ಸರ್ಕಾರ ಪುಸ್ತಕಗಳನ್ನು ಪ್ರಕಟಿಸಿದೆ, ಆ ಪೈಕಿ ಅಂಬೇಡ್ಕರ್ ಅವರು ಬರೆದಿದ್ದ ‘ಜಾತಿಯ ನಿರ್ಮೂಲನೆ ಹಾಗೂ ಪ್ರಭುತ್ವ ಮತ್ತು ಅಲ್ಪಸಂಖ್ಯಾತರು ಎಂಬ ಅಧ್ಯಯನಗಳನ್ನು ಕೈಬಿಡಲಾಗಿದೆ, ಆದ್ದರಿಂದ ಈಗಿನ ಕೇಂದ್ರ ಸರ್ಕಾರದ ಕಾರ್ಯಸೂಚಿ ಎನಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಿದೆ ಎಂದರು.

ಇಂದು ಕೋಮು ಸೌಹಾರ್ಧಕ್ಕಾಗಿ ಹೋರಾಟ ಮಾಡಿದ ಗೌರಿ ಲಂಕೇಶ್ ಅವರ ಜನ್ಮದಿನವಾಗಿದೆ, ಈ ದಿನ ನಾವು ಅಂಬೇಡ್ಕರ್, ನೇತಾಜಿ, ಭಗತ್ ಸಿಂಗ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಪುಸ್ತಕವನ್ನು ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಬಿಡುಗಡೆ ಮಾಡಿದರು.

ಸಮಾವೇಶದಲ್ಲಿ ಗಾಂಧಿವಾದಿ ಡಾ ಸುಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಶ್ರಾಂತ ಕುಲಪತಿ ಸಬೀಹ ಭೂಮಿಗೌಡ, ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ಶಾಂತಿ ಪ್ರಕಾಶನ ಮುಖ್ಯಸ್ಥ ಮಹಮದ್ ಕುಂಞ, ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್ ಆಶೋಕ್, ಪ್ರೊ.ಹುಲ್ಕೆರೆ ಮಹದೇವು, ಸಮಾನ ಮನಸ್ಕರ ವೇದಿಕೆಯ ಮುಖಂಡ ಲಕ್ಮಣ್ ಚೀರನಹಳ್ಳಿ, ಟಿ.ಎಲ್ ಕೃಷ್ಣೇಗೌಡ, ಮುಖಂಡರಾದ ಟಿ.ಡಿ. ನಾಗರಾಜ್, ಕಲೀಂ ಮೈಸೂರು, ವರದರಾಜೇಂದ್ರ, ವೆಂಕಟೇಶ್, ಕಲೀಂವುಲ್ಲಾ, ಇಜಾಜ್ , ಖದೀರ್, ಮಂಜೇಶ್ ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ಜನಶಕ್ತಿಯ ಜನಶಕ್ತಿಯ ಪೂರ್ಣಿಮ ಸ್ವಾಗತಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!