Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಹಾರದಂತೆ ದೇಶದಾದ್ಯಂತ ಜಾತಿಗಣತಿ ನಡೆಸಬೇಕು; ತೇಜಸ್ವಿ ಯಾದವ್

ದೇಶದಾದ್ಯಂತ ಬಿಹಾರ ಮಾದರಿಯ ಜಾತಿಗಣತಿ ನಡೆಸುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು, ಜನಸಂಖ್ಯೆ ಕುರಿತ ನಿಜವಾದ ಮಾಹಿತಿ ತಿಳಿದಾಗ ಮಾತ್ರ ಸಮಾಜದ ಎಲ್ಲಾ ವರ್ಗಗಳಿಗೆ ನೀತಿಗಳನ್ನು ಸರಿಯಾಗಿ ರೂಪಿಸಲು ಸಾಧ್ಯ ಎಂದು ಹೇಳಿದ್ದಾರೆ.

ಬಿಹಾರ ಸರ್ಕಾರವು ಮಾನವೀಯ ಕಾರ್ಯವನ್ನು ಕೈಗೊಂಡು ಜಾತಿ ಗಣತಿಯನ್ನು ನಡೆಸಿದೆ. ಇತರ ರಾಜ್ಯಗಳು ಕೂಡ ಇದನ್ನು ಮಾಡಬೇಕು ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಅ.2 ರಂದು ಬಿಹಾರ ಸರ್ಕಾರವು ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚು ಹಿಂದುಳಿದ ವರ್ಗದ ಜನರು(ಇಬಿಸಿ), ಹಿಂದುಳಿದ ವರ್ಗದ ಜನರು (ಒಬಿಸಿಗಳು) ಮತ್ತು ಪರಿಶಿಷ್ಟ ಜಾತಿಗಳು (ಎಸ್‌ಸಿ) ಜನರು ಒಟ್ಟು ಬಿಹಾರದ ಜನಸಂಖ್ಯೆಯ 84 ಪ್ರತಿಶತದಷ್ಟು ಇದ್ದಾರೆ ಎಂದು ವರದಿ ತಿಳಿಸಿದೆ. ಈ ವರದಿಯು ಸ್ವಾತಂತ್ರ್ಯಾ ನಂತರ ಬಿಡುಗಡೆಯಾದ ಮೊದಲನೆಯ ಜಾತಿಗಣತಿ ವರದಿಯಾಗಿದೆ.

ಬಿಹಾರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿದ ಬೆನ್ನಲ್ಲೇ ರಾಜಸ್ಥಾನದ ಕಾಂಗ್ರೆಸ್‌ ನಾಯಕ ಅಶೋಕ್ ಗೆಹ್ಲೋಟ್ ಅವರು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮತ್ತೆ ಗೆದ್ದು ಅಧಿಕಾರಕ್ಕೆ ಬಂದರೆ ಬಿಹಾರದ ರೀತಿ ಜಾತಿಗಣತಿ ಮಾಡುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಛತ್ತೀಸ್‌ಗಢ ಚುನಾವಣೆಯಲ್ಲೂ ಇದೇ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಾತಿಗಣತಿ ವರದಿ ನವೆಂಬರ್‌ನಲ್ಲಿ ಕೈಸೇರುವ ಸಾಧ್ಯತೆ ಇದ್ದು, ಆ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ.

ಜಾತಿ ಆಧಾರಿತ ಸಮೀಕ್ಷೆಯ ಬಗ್ಗೆ ಬಿಜೆಪಿಯ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿ ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ತೇಜಸ್ವಿ ಯಾದವ್‌, ಸಮೀಕ್ಷೆ ಅಥವಾ ಸಮೀಕ್ಷೆಯ ಡೇಟಾದ ಬಗ್ಗೆ ಬಿಜೆಪಿಗೆ ಪ್ರಶ್ನೆಗಳು, ಸಂಶಯಗಳು ಇದ್ದರೆ ಯಾಕೆ ನರೇಂದ್ರ ಮೋದಿಯವರಲ್ಲಿ ರಾಷ್ಟ್ರ ಮಟ್ಟದಲ್ಲಿ ಸರ್ವೆ ಮಾಡಲು ಆಗ್ರಹಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪ್ರಾದೇಶಿಕ ಪಕ್ಷಗಳು ಶೀಘ್ರದಲ್ಲೇ ಅಂತ್ಯ ಕಾಣಲಿದೆ ಎಂದು ಹೇಳಿದ್ದಾರೆ. ಮೋದಿ ಮತ್ತು ನಡ್ಡಾ ಇಬ್ಬರೂ ಹೊರಗಿನವರು, ನಮಗಿಂತ ಬಿಹಾರದ ಬಗ್ಗೆ ಅವರು ಹೆಚ್ಚು ತಿಳಿದಿದ್ದಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!