ಮದ್ದೂರು ಪುರಸಭೆ ಸದಸ್ಯತ್ವದ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಪುರಸಭಾ ಸದಸ್ಯ ಎಂ.ಬಿ.ಸಚಿನ್ ಮದ್ದೂರಿನ ಜನತೆಗೆ ಹಾಗೂ ಏಳನೇ ವಾರ್ಡಿನ ಜನರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ಬಾರಿ ಮದ್ದೂರು ಪುರಸಭೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ನನ್ನನ್ನು, ಪಟ್ಟಣದ ಏಳನೇ ವಾರ್ಡಿನ ಮತದಾರರು ಹರಸಿ, ಹಾರೈಸಿ ಮತ ನೀಡುವ ಮೂಲಕ ಪುರಸಭೆ ಸದಸ್ಯನಾಗಿ ಆಯ್ಕೆ ಮಾಡುವ ಮೂಲಕ ವಾರ್ಡ್ ಹಾಗೂ ಮದ್ದೂರು ಪಟ್ಟಣದ ಜನರ ಸೇವೆ ಮಾಡಲು ಅವಕಾಶ ಮಾಡಿಕೊಟ್ಟರು. ಜನರ ಅಪೇಕ್ಷೆಯಂತೆ ನನ್ನ ಸದಸ್ಯತ್ವದ ಕಾಲಾವಧಿಯಲ್ಲಿ ಏಳನೆ ವಾರ್ಡಿನ ಹಾಗೂ ಮದ್ದೂರು ಪಟ್ಟಣದ ಜನರ ಸಮಸ್ಯೆಗಳನ್ನು ಅರಿತು ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಸ್ವಚ್ಚತೆ, ಬೀದಿದೀಪ,ವಸತಿ ಯೋಜನೆ, ನಿರುದ್ಯೋಗಿಗಳಿಗೆ ಸಾಲ-ಸೌಲಭ್ಯ, ಪರಿಸರ ಸಂರಕ್ಷಣೆ ಹೀಗೆ ಹಲವಾರು ಕೆಲಸಗಳನ್ನು ಮಾಡುವ ಮೂಲಕ ಜನರ ನೆಮ್ಮದಿಯ ಬದುಕಿಗೆ ಅಳಿಲು ಸೇವೆ ಸಲ್ಲಿಸಿದ್ದೇನೆ. ನನ್ನ ಈ ಎಲ್ಲಾ ಸೇವೆಗಳ ಹಿಂದೆ ಪಟ್ಟಣದ ಏಳನೇ ವಾರ್ಡಿನ ಮತದಾರರು, ಹಿರಿಯರು, ಸ್ನೇಹಿತರು ಹಾಗೂ ಜನಪರ ಸಂಘಟನೆಗಳ ಮುಖಂಡರು ನೀಡಿದ ಸಲಹೆ ಮತ್ತು ಸಹಕಾರವನ್ನು ನಾನು ಎಂದೆಂದಿಗೂ ಮರೆಯುವುದಿಲ್ಲ.ಅವರ ಸಲಹೆ,ಸಹಕಾರದಿಂದ ಇಂದು ನಾನು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ತೃಪ್ತಿ ಇದೆ.ಮುಂದಿನ ದಿನಗಳಲ್ಲೂ ನಾನು ಅಧಿಕಾರ ಇರಲಿ, ಇಲ್ಲದಿರಲಿ ಮದ್ದೂರು ಜನರ ಸೇವೆಗೆ ಸದಾ ಸಿದ್ಧನಿರುತ್ತೇನೆ ಎಂದು ಬಹಳ ಸಂತೋಷದಿಂದ ತಿಳಿಸುತ್ತಿದ್ದೇನೆ ಎಂದಿದ್ದಾರೆ.
ನನಗೆ ಸಹಕಾರ ನೀಡಿದ ಮದ್ದೂರು ಪಟ್ಟಣದ ಜನರ ಬೆಂಬಲ ಮತ್ತು ಸಹಕಾರಕ್ಕೆ ನಾನು ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಎಂದು ಪುರಸಭಾ ಸದಸ್ಯ ಎಂ.ಬಿ.ಸಚಿನ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.




