Friday, September 20, 2024

ಪ್ರಾಯೋಗಿಕ ಆವೃತ್ತಿ

ಶಾಂತಿಯಿಂದಿದ್ದ ಕೆರಗೋಡಿಗೆ ಕೊಳ್ಳಿಯಿಟ್ಟವರ್‍ಯಾರು ?

ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದಿರುವ ‘ಹನುಮ ಧ್ವಜ’ ವಿವಾದವನ್ನು ಗ್ರಾಮಸ್ಥರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂತು ಮಾತನಾಡಿ ಬಗೆಹರಿಸಬಹುದಿತ್ತು. ಆದರೆ ಅಷ್ಟು ಸುಲಭವಾಗಿ ಬಗೆಹರಿದರೆ ಈ ಘಟನೆಯ ರಾಜಕೀಯ ಲಾಭ ಸಿಗುವುದಿಲ್ಲ ಎಂಬ ಬಿಜೆಪಿ ಮತ್ತು ಜೆಡಿಎಸ್ ನ ರಾಜ್ಯ ನಾಯಕರ ದುರಾಲೋಚನೆಯೇ ಈ ಪ್ರಕರಣ ರಾಜ್ಯಮಟ್ಟದ ಸುದ್ದಿ ಆಗಲು ಕಾರಣ ಎಂದು ಗ್ರಾಮಸ್ಥರೇ ಹೇಳುತ್ತಿದ್ದಾರೆ.

ಸಂಘ ಪರಿವಾರದ ಚಟುವಟಿಕೆ ಸ್ವಲ್ಪ ಹೆಚ್ಚೇ ಇರುವ ಕೆರಗೋಡು ಗ್ರಾಮದ ರಂಗಮಂದಿರದ ಮುಂದೆ ಸ್ಥಾಪಿಸಲಾದ ದ್ವಜಸ್ಥಂಭದಲ್ಲಿ ಭಗವಾ ದ್ವಜ ಹಾರಿಸಿದ ಪ್ರಕರಣದಲ್ಲಿ ಸ್ಥಳೀಯರಿಗಿಂತ ಹೊರಗಿನವರ ಕೈವಾಡವೇ ಎದ್ದು ಕಾಣುತ್ತದೆ. ಗ್ರಾಮ ಪಂಚಾಯಿತಿ ಸದಸ್ಯರು ಪಂಚಾಯಿತಿ ಸಭೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ಅನುಮತಿ ನೀಡಿರುವುದು ನಿಜ. ರಾಮಮಂದಿರ ಉದ್ಘಾಟನೆಯ ದಿನದಿಂದ ಮೂರು ದಿನ ಭಗವಾ ಧ್ವಜ ಹಾರಿಸಿದ್ದು ಕೂಡ ನಿಜ. ಆದರೆ ನಂತರ ಪರಿಸ್ಥಿತಿ ಕೆಡಬಹುದು ಎಂಬ ಹಿನ್ನೆಲೆಯಲ್ಲಿ ಹಾಗೂ ಸರ್ಕಾರಿ ಜಾಗದಲ್ಲಿ ಧ್ವಜ ಹಾರಿಸಿರುವುದು ಕಾನೂನು ಸಮಸ್ಯೆ ಆಗಬಹುದೆಂದು ಅಧಿಕಾರಿಗಳು ತಿಳಿಸಿದ್ದರಿಂದ ಧ್ವಜವನ್ನು ತೆಗೆಯಲು ಒಪ್ಪಿಕೊಂಡಿದ್ದು ನಿಜ. ಆದರೆ ನಂತರ ಘಟನೆಗಳು ನಮ್ಮ ಕೈ ಮೀರಿ ಹೋಗಿ ರಾಜ್ಯದ ಬಿಜೆಪಿ-ಜೆಡಿಎಸ್ ನಾಯಕರ ರಾಜಕೀಯ ಲಾಭಕ್ಕೆ ಬಳಕೆಯಾದದ್ದು ದುರ್ದೈವದ ಸಂಗತಿ ಎಂಬುದು ಕೆರಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಅವರ ಮಾತು.

50 ಕ್ಕೂ ಹೆಚ್ಚು ಮಂದಿ ಮೇಲೆ ಕೇಸ್

nudikarnataka.com

ಭಗವಾ ಧ್ವಜ ಹೆಸರಿನಲ್ಲಿ ಮೊನ್ನೆ ನಡೆದ ಪಾದಯಾತ್ರೆಗೆ ಆಗವಿಸಿದ್ದ ಜೆಡಿಎಸ್ ನಾಯಕ  ಕುಮಾರಸ್ವಾಮಿ, ಸಿ.ಎಸ್.ಪುಟ್ಟರಾಜು, ಬಿಜೆಪಿ ನಾಯಕರಾದ ಸಿ.ಟಿ. ರವಿ, ಪ್ರೀತಂ ಗೌಡ ಎಲ್ಲರೂ ಜನರ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿ ಅದರ ಲಾಭವನ್ನು ಪಡೆಯುವ ಕೀಳು ರಾಜಕಾರಣ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ಇದ್ದ ಯುವಕರನ್ನು ಪ್ರಚೋದಿಸಿ ಅವರಿಂದ ಕಲ್ಲು ತೂರಾಟ ನಡೆಸಿದ್ದಾರೆ. ಪ್ಲೆಕ್ಸ್ ಗಳಿಗೆ ಬೆಂಕಿ ಹಚ್ಚಿಸಿದ್ದಾರೆ. ಈಗ ಪೊಲೀಸರು 50ಕ್ಕೂ ಹೆಚ್ಚು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಮ್ಮ ಮನೆಗಳಿಗೆ ಬಂದು ನಮ್ಮ ಮಕ್ಕಳ ಬಗ್ಗೆ ವಿಚಾರಿಸುತ್ತಿದ್ದಾರೆ.ಇದನ್ನು ನೋಡಿದರೆ ನಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕವಾಗುತ್ತಿದೆ. ನೆಮ್ಮದಿಯಿಂದಿದ್ದ ನಮ್ಮ ಮಕ್ಕಳ ಮೇಲೆ ಕೇಸು ಹಾಕಿಸುವ ಮೂಲಕ ನಮ್ಮ ನೆಮ್ಮದಿಯನ್ನೇ ಕಸಿದುಕೊಂಡಿದ್ದಾರೆ.ಯಾವ ನಾಯಕರು ನಮ್ಮ ಮನೆ ಬಾಗಿಲಿಗೆ ಬರಬೇಡಿ ಎಂದು ಕೆರಗೋಡು ಗ್ರಾಮಸ್ಥರೊಬ್ಬರು ಬಿಜೆಪಿ ಅಧ್ಯಕ್ಷ ಇಂದ್ರೇಶ್ ಹಾಗೂ ಮುಖಂಡ ಅಶೋಕ್ ಜಯರಾಂ ಅವರಿಗೆ ಹೇಳಿದ್ದಾರೆ.

ಪರಸ್ಪರ ಹೊಡೆದಾಟುಕೊಳ್ಳುವಂತೆ ಮಾಡಿದರು

nudikarnataka.com

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಲ್ಲಿ ಗುರುತಿಸಿಕೊಂಡಿರುವ ಕೆರಗೋಡು ಸುತ್ತಮುತ್ತಲಿನ ಗ್ರಾಮಗಳ ಯುವಕರೇ ಇಂದು ಈ ವಿವಾದದಿಂದ ಪರಸ್ಪರ ದೂರವಾಗುವಂತಾಗಿದೆ‌. ನಮ್ಮ ಮಕ್ಕಳೇ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಿ ಹೋದ ರಾಜ್ಯ ನಾಯಕರು ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇಂದು ಕೆರಗೋಡು ಗ್ರಾಮ ರಾಜ್ಯಮಟ್ಟದಲ್ಲಿ ಈ ರೀತಿ ಸುದ್ದಿಯಾಗಲು ನೇರ ಕಾರಣ ಜೆಡಿಎಸ್ ಹಾಗೂ ಬಿಜೆಪಿ ರಾಜ್ಯ ನಾಯಕರು. ಅವರು ಬರದಿದ್ದರೆ ಈ ಪ್ರಕರಣ ಇಲ್ಲೇ ಬಗೆಹರಿಯುತ್ತಿತ್ತು. ಆದರೆ ಇಲ್ಲಿರುವ ಈ ಪಕ್ಷದ ಸ್ಥಳೀಯ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ನಮ್ಮ ಜನರನ್ನು ದಾರಿ ತಪ್ಪಿಸಿ ರಾಜ್ಯ ನಾಯಕರನ್ನು ಕರೆಸಿ ನೆಮ್ಮದಿಗೆ ಭಂಗ ತಂದಿದ್ದಾರೆ ಎಂದು ಪೊಲೀಸರು ಪ್ರಕರಣ ದಾಖಲಿಸಿರುವ ಯುವಕರ ಪೋಷಕರೇ ಕಿಡಿಕಾರುತ್ತಿದ್ದಾರೆ.

ಎಡವಿದ ಶಾಸಕ

ಎಡವಿದ ಶಾಸಕ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂದರ್ಭದಲ್ಲಿ ಕೆರಗೋಡು ಗ್ರಾಮದಲ್ಲಿ ಭಗವಾಧ್ವಜ ಹಾರಿಸಲು ಅನುಮತಿ ಕೇಳಿ ಗೌರಿ ಶಂಕರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಗ್ರಾಮ ಪಂಚಾಯಿತಿಗೆ ಸಲ್ಲಿಸಿದ ಅರ್ಜಿಯ ಬಗ್ಗೆ ಪಿಡಿಓ ಜೀವನ್ ತಮ್ಮ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದುವರಿಯಬಹುದಿತ್ತು. ಆದರೆ ಅವರು ತಾವೇ ನಿರ್ಧಾರ ಕೈಗೊಂಡ ಕಾರಣ ಈ ಘಟನೆ ಬೃಹದಾಕಾರವಾಗಿ ಬೆಳೆಯಿತು. ಅಲ್ಲದೆ ಮಂಡ್ಯ ಕ್ಷೇತ್ರದ ಶಾಸಕ ಗಣಿಗ ರವಿಕುಮಾರ್ ಸ್ವಲ್ಪ ಹುಂಬತನದ ವ್ಯಕ್ತಿ. ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಆರ್ ಎಸ್ ಎಸ್, ಸಂಘ ಪರಿವಾರದ ಹಿಡನ್ ಅಜೆಂಡಾಗಳ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಸಣ್ಣ ಪ್ರಕರಣವನ್ನೇ ದೊಡ್ಡದು ಮಾಡುವ ಸಂಘ ಪರಿವಾರದ ಹುನ್ನಾರಗಳ ಬಗ್ಗೆ ಅವರಿಗೆ ಅರಿವಿದ್ದಿದ್ದರೆ ಗೌರಿ ಶಂಕರ ಟ್ರಸ್ಟ್ ಪದಾಧಿಕಾರಿಗಳು ಹನುಮ ಧ್ವಜ ಹಾರಿಸುತ್ತೇವೆ ಎಂದಾಗ ಅದರ ಬಗ್ಗೆ ಜಿಲ್ಲಾಡಳಿತದೊಂದಿಗೆ ಕೂತು ಮಾತನಾಡಿ ಚರ್ಚಿಸುತ್ತಿದ್ದರು. ಆದರೆ ಅವರು ಹಾಗೆ ಮಾಡದೆ ಯಾಮಾರಿದ್ದೇ ಈ ಘಟನೆಗೆ ಕಾರಣ ಎಂದು ಕ್ಷೇತ್ರದ ಜನರ ಮಾತು.

ಈ ವಿವಾದದ ಹಿಂದೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಮನ್ಮುಲ್ ಮಾಜಿ ಅಧ್ಯಕ್ಷ ಬಿ. ಆರ್. ರಾಮಚಂದ್ರು ಹಾಗೂ ಉಪಾಧ್ಯಕ್ಷ ರಘುನಂದನ್ ಅವರ ನೇರ ಪಾತ್ರವಿದೆ ಎಂದು ಶಾಸಕ ಗಣಿಗ ರವಿ ಕುಮಾರ್ ಆರೋಪಿಸುತ್ತಾರೆ. ರಾಮಚಂದ್ರು ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನನ್ನ ಕ್ಷೇತ್ರದ ಮುಗ್ಧ, ಅಮಾಯಕ ಯುವ ಜನರನ್ನು ಎತ್ತಿ ಕಟ್ಟಿದ್ದಾರೆ. ಕಾಂಗ್ರೆಸ್ ನಾಯಕರ ಭಾವಚಿತ್ರಗಳಿಗೆ ಕಲ್ಲು ಒಡೆಸಿ ಅವರ ಫ್ಲೆಕ್ಸ್ ಗಳನ್ನು ಹರಿಸಿ ಬೆಂಕಿ ಹಚ್ಚಿಸಿದ್ದಾರೆ ಎಂದು ಆರೋಪಿಸುತ್ತಾರೆ.

ಕುರುಬ ಸಮುದಾಯದವರು ಹಿಂದುಗಳಲ್ಲವೇ ?

ಕುರುಬರ ಸಂಘದ ಹಾಸ್ಟೆಲ್ ಮೇಲೆ ದಾಳಿ ನಡೆಸಿ ಕನಕದಾಸರ ಭಾವಚಿತ್ರದ ಮೇಲೆ ಕಲ್ಲುತೂರಾಟ ನಡೆಸಿದ್ದಲ್ಲದೆ, ಸಿಎಂ ಸಿದ್ದರಾಮಯ್ಯನವರ ಫ್ಲೆಕ್ಸ್ ಹಾಗೂ ಕುರುಬರ ಸಂಘದ ಹಾಸ್ಟೆಲ್ ಗಾಜು ಪುಡಿ ಮಾಡಿಸಿದ್ದಾರೆ. ದಾಸ ಶ್ರೇಷ್ಠ ಕನಕದಾಸರು ಹಿಂದೂ ಧರ್ಮಕ್ಕೆ ಸೇರಿಲ್ಲವೇ? ಕುರುಬ ಸಮುದಾಯದವರು ಹಿಂದುಗಳಲ್ಲವೇ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ. ರಾಷ್ಟ್ರಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಕೆ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ನಾಯಕ ಪಿ.ಎಂ. ನರೇಂದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿ ಅವರ ವಿರುದ್ಧ ದೂರು ನೀಡಿದರೆ,ಪ್ರತಿಯಾಗಿ ಭಗವಧ್ವಜ ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸುವ ಸಂದರ್ಭದಲ್ಲಿ ಅಧಿಕಾರಿಗಳು ನಡೆದುಕೊಂಡ ರೀತಿಯು ಸರಿಯಲ್ಲ, ರಾಷ್ಟ್ರಧ್ವಜವನ್ನು ಕ್ರಮಬದ್ಧವಾಗಿ ಹಾರಿಸದೆ ಬೇಕಾಬಿಟ್ಟಿ ಹಾರಿಸಿದ್ದಾರೆ. ಬಾವುಟ ಹಾರಿಸುವ ಸಂದರ್ಭದಲ್ಲಿ ರಾಷ್ಟ್ರಗೀತೆ ಹಾಡಿಲ್ಲ ಎಂದು ಬಿಜೆಪಿ ಮುಖಂಡರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ.

ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ

ಮಂಡ್ಯ ಜಿಲ್ಲೆಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳು ತಾಂಡವವಾಡುತ್ತಿದ್ದು, ಅವುಗಳ ಬಗ್ಗೆ ಎಚ್.ಡಿ ಕುಮಾರಸ್ವಾಮಿ ಮಾತನಾಡುತ್ತಿಲ್ಲ. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದೆ. ಅದರಲ್ಲೂ ಮಂಡ್ಯ ಜಿಲ್ಲೆ ಕೂಡ ತೀವ್ರ ಬರದಿಂದ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ಬರಬೇಕಾಗಿರುವ ಅನುದಾನವನ್ನು ಪ್ರಧಾನಿ ಮೋದಿಯವರಿಗೆ ಹೇಳಿ ಕೊಡಿಸದೆ ಸಂಘ ಪರಿವಾರದವರು ನಾಚುವಂತೆ ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆ ನಡೆಸಿ ಯುವಜನತೆಯನ್ನು ಪ್ರಚೋದಿಸಿರುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮತ್ಯಾವ ತಿರುವು ಪಡೆಯುವುದೋ

ಕುಮಾರಸ್ವಾಮಿ ಗೋಸುಂಬೆಯನ್ನು ಮೀರಿಸುವ ಹಾಗೆ ನಡೆದುಕೊಂಡಿದ್ದಾರೆ. ಜಿಲ್ಲೆಯ ಜನರು ಕೂಡ ಇದೇನಾ ಜಾತ್ಯಾತೀತ ಜನತಾದಳ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡು ನೋಡುತ್ತಿದ್ದಾರೆ. ಪ್ರಸ್ತುತ ಕೆರಗೋಡು ಗ್ರಾಮದಲ್ಲಿ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಕಾವಲು ಕಾಯುತ್ತಿದ್ದು, ಈ ಪ್ರಕರಣ ಮತ್ಯಾವ ತಿರುವು ಪಡೆಯುವುದೋ ಎಂದು ಕೆರಗೋಡಿನ ಜನರು ಭಯ ಆತಂಕದಿಂದ ದಿನದೊಡುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಎಲ್ಲಾ ಸಮುದಾಯದ ಧರ್ಮದ ಜನರು ಶಾಂತಿ, ಸಹ ಬಾಳ್ವೆಯಿಂದ ಜೀವನ ನಡೆಸುತ್ತಿದ್ದರು. ಈಗ ಕೆಲವು ರಾಜ್ಯ ನಾಯಕರ ರಾಜಕೀಯ ಹಿತಾಸಕ್ತಿಗಾಗಿ ನಮ್ಮ ನಮ್ಮ ಮಕ್ಕಳ ಹೊಡೆದಾಡಿಕೊಂಡು ಪ್ರಾಣ ಹಾನಿಯಾದರೆ ನಮ್ಮನ್ನು ಯಾರು ನೋಡುತ್ತಾರೆ ಎಂದು ಪೋಷಕರೇ ಅಳಲು ತೋಡಿಕೊಳ್ಳುತ್ತಿದ್ದಾರೆ.

ಮೊನ್ನೆ ನಡೆದ ಘಟನೆಯಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಹಲವರು ಕಣ್ಣು, ಮೂಗಿಗೆ ಗಾಯವಾಗಿ ರಕ್ತ ಬಂದಿದೆ. ಲಾಠಿ ಏಟಿಗೆ ಹಲವು ಯುವಕರ ಮೇಲೆ ಬಾಸುಂಡೆ ಬಂದಿದೆ. ಹೆಂಗಸರು ಮತ್ತು ಮಕ್ಕಳು ಓಡಿ ಹೋಗುವ ಭರದಲ್ಲಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಶಾಂತಿ- ಸೌಹಾರ್ದತೆಯ ನಾಡಾಗಿದ್ದ ಮಂಡ್ಯದಲ್ಲಿ ಮೇಲಿಂದ ಮೇಲೆ ರಾಜಕೀಯ ಲಾಭಕ್ಕಾಗಿ ಕೋಮುಗಲಭೆಗಳು ನಡೆಯುತ್ತಿರುವುದನ್ನು ಜಿಲ್ಲಾಡಳಿತ ನಿಯಂತ್ರಣಕ್ಕೆ ತರಬೇಕು. ಆ ಮೂಲಕ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಮತ್ತೆ ನಳ ನಡೆಸುವಂತಾಗಲಿ ಎಂಬುದು ಈ ಭಾಗದ ಜನರ ಆಶಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!