Thursday, September 19, 2024

ಪ್ರಾಯೋಗಿಕ ಆವೃತ್ತಿ

ಬದಲಾವಣೆಯೆಂದರೆ…

-ಶಿವಸುಂದರ್

ಬದಲಾವಣೆಯೆಂದರೆ
ರೂಪಾಂತರೀ ಕರೋನದ
ಹಾವಳಿಗೆ ಹೆದರಿ
ಮೂಲ ಕರೋನಾಗೆ
ಹಾತೊರೆಯುವುದಲ್ಲ

ಬದಲಾವಣೆಯೆಂದರೆ..

ಸಕಲ ವೈರಸ್ಸುಗಳನ್ನು
ಸದೆಬಡೆಯುವ
ಪ್ರತಿರೋಧ ಪಡೆಯುವುದು…

ಬದಲಾವಣೆಯೆಂದರೆ..

ಕಚ್ಚುವ ಹೊಸ ಚಪ್ಪಲಿಯ
ಬದಲಿಗೆ..
ಹರಿದ ಹಳೆ ಚಪ್ಪಲಿಗೆ
ಮರಳುವುದಲ್ಲ..

ಬದಲಾವಣೆಯೆಂದರೆ..

ಚಪ್ಪಲಿಗೆ ತಕ್ಕ ಪಾದವನ್ನು
ಕತ್ತರಿಸಿಕೊಳ್ಳುವುದಲ್ಲ…
ಪಾದಕ್ಕೆ ತಕ್ಕ ಪಾದರಕ್ಷೆ ಹೊಲಿದುಕೊಳ್ಳುವುದು…

ಬದಲಾವಣೆಯೆಂದರೆ..

ಇಂದಿನ ಕತ್ತಲಿಗೆ ಬದಲು
ಮುಂಚಿನ ಮಬ್ಬುಗತ್ತಲಿಗೆ
ಹಂಬಲಿಸುವುದಲ್ಲ..

ಬದಲಾವಣೆಯೆಂದರೆ..

ಕತ್ತಲ ಕಾರಾಸ್ಥಾನ ಬೇಧಿಸಿ
ಬೆಳಕ ಪಡೆಯುವುದು…

ಬದಲಾವಣೆಯೆಂದರೆ..

ಏರಿಕೂತ ಮರಕುದುರೆಯ
ಬದಲು
ಕಟ್ಟಿ ಬಂದ
ಕುಂಟುಕುದುರೆಯ
ಅರಸುವುದಲ್ಲ…

ಬದಲಾವಣೆಯೆಂದರೆ

ಗಮ್ಯಗಮನದ
ಸಾರೋಟಿಗೆ
ಕುದುರೆಗಳು ನಾವೇ
ಸಾರಥಿಗಳೂ ನಾವೇ
ಆಗುವುದು..

ಬದಲಾವಣೆಯೆಂದರೆ…

ಅದಲು ಬದಲಾಗುವುದಲ್ಲ..

ತಳಕುಸಿವಾಗ ಹೊಸಹೆಂಚು
ಹೊಂದಿಸುವುದಲ್ಲ…

ಹರಿದಬಟ್ಟೆಯ ಮೇಲೆ
ಕಡತಂದ ಕೋಟು ಮುಚ್ಚುವುದಲ್ಲ..

ಬದಲಾವಣೆಯೆಂದರೆ
ಪುನರಾವರ್ತನೆಯಲ್ಲ..

ಇಂದು ನಿನ್ನೆಯ ಸುತ್ತ
ಸುತ್ತುಸುತ್ತುವುದಲ್ಲ..

ಬದಲಾವಣೆಯೆಂದರೆ…

ನಿನ್ನೆಯ ಚಿಮ್ಮುಹಲಗೆಯ
ಮೇಲೆ ನಿಂತು
ನಾಳೆಗೆ ಜಿಗಿವುದು…

ನಿನ್ನೆಯಿಲ್ಲದ ನಾನು
ನಾಳೆಯ ‘ನಾವಾಗುವುದು’..

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!