Sunday, May 19, 2024

ಪ್ರಾಯೋಗಿಕ ಆವೃತ್ತಿ

ಧಾರವಾಡ| ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ವಿರುದ್ದ ತಿರುಗಿಬಿದ್ದ ಲಿಂಗಾಯತ ಮಠಾಧೀಶರು

ಲೋಕಸಭೆ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ಕೈಬಿಟ್ಟು, ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಕರ್ನಾಟಕದ ಪ್ರಮುಖ ಲಿಂಗಾಯತ ಮಠಾಧೀಶರು ಬಿಜೆಪಿ ಹೈಕಮಾಂಡ್‌ ಅನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫಕ್ಕೀರೇಶ್ವರ ಮಠದ ಪೀಠಾಧ್ಯಕ್ಷ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ, “ಧಾರವಾಡ ಕ್ಷೇತ್ರದ ಸಂಸದ (ಬಿಜೆಪಿಯ ಪ್ರಲ್ಹಾದ ಜೋಶಿ) ಬಗ್ಗೆ ಕರ್ನಾಟಕದ ಮಠಾಧೀಶರು ಚರ್ಚೆ ನಡೆಸಿದ್ದಾರೆ, ಸಂಸದರನ್ನು ಬದಲಾಯಿಸಲು ಎಲ್ಲ ಮಠಾಧೀಶರು ನಿರ್ಧರಿಸಿದ್ದಾರೆ. ಇದಕ್ಕಾಗಿ ನಾಲ್ಕು ದಿನಗಳ ಕಾಲಾವಕಾಶ ನೀಡಿದ್ದಾರೆ. ಮಾರ್ಚ್ 31ರ ವರೆಗೆ ಕಾಯುತ್ತೇವೆ, ಈ 4 ದಿನಗಳಲ್ಲಿ ಹೈಕಮಾಂಡ್ ಏನು ಮಾಡುತ್ತದೆ ಎಂದು ಕಾದು ನೋಡುತ್ತೇವೆ” ಎಂದು ಹೇಳಿದ್ದಾರೆ.

“ಆ ನಂತರ, ಏಪ್ರಿಲ್ 2 ರಂದು ನಾವು ಒಟ್ಟಾಗಿ ಬಂದು ನಮ್ಮ ನಿರ್ಧಾರದ ಬಗ್ಗೆ ಹೇಳುತ್ತೇವೆ; ನಾವು ವ್ಯಕ್ತಿಯ ಜಾತಿ ಬಗ್ಗೆ ಮಾತನಾಡುವುದಿಲ್ಲ. ಆದರೆ, ಆ ವ್ಯಕ್ತಿಯ ವ್ಯಕ್ತಿತ್ವ ನಿಜವಾಗಿಯೂ ಕೆಟ್ಟದು. ಲಿಂಗಾಯತ, ದಲಿತ, ಹಿಂದುಳಿದ ಪ್ರತಿಯೊಂದು ಸಮುದಾಯವೂ ಅವರ ಬಗ್ಗೆ ಅತೃಪ್ತಿ ಹೊಂದಿದೆ. ಹೀಗಾಗಿ, ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾವು ಏಪ್ರಿಲ್ 2 ರವರೆಗೆ ಕಾಯಬೇಕಾಗಿದೆ. ನಾವು ಪಕ್ಷದ ಬಗ್ಗೆ ಮಾತನಾಡುತ್ತಿಲ್ಲ, ನಾವು ಪ್ರಲ್ಹಾದ್ ಜೋಶಿ ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

“ಉತ್ತರದಂತೆ, ದಕ್ಷಿಣದ ಸ್ವಾಮೀಜಿಗಳು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು” ಎಂದು ಹೇಳಿದ ಅವರು, ಮಠಾಧಿಶರೊಬ್ಬರಿಗೆ ಟಿಕೆಟ್ ನೀಡಬೇಕು ಎಂಬ ಪರೋಕ್ಷ ಬೇಡಿಕೆ ಇಟ್ಟಿದ್ದಾರೆ. ಧಾರವಾಡ ಭಾಗದಲ್ಲಿ ಲಿಂಗಾಯತರು ಹೆಚ್ಚಿನ ಮತದಾರರಿದ್ದರೆ, ಜೋಶಿ ಬ್ರಾಹ್ಮಣರಾಗಿದ್ದಾರೆ.

ಶ್ರೀಗಳ ಬೇಡಿಕೆಗೆ ಪ್ರತಿಕ್ರಿಯಿಸಿರುವ ಜೋಶಿ, “ದಿಂಗಾಲೇಶ್ವರ ಸ್ವಾಮೀಜಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ, ಶ್ರೀಗಳು ಮತ್ತು ಮಠದೊಂದಿಗೆ 30 ವರ್ಷಗಳ ಒಡನಾಟವಿದೆ. ಅವರ ಟೀಕೆಗಳನ್ನು ನಾನು ಆಶೀರ್ವಾದ ಎಂದು ಪರಿಗಣಿಸುತ್ತೇನೆ. ತಪ್ಪು ತಿಳುವಳಿಕೆ ಇದ್ದರೆ ಮುಂದಿನ ದಿನಗಳಲ್ಲಿ ಅದನ್ನು ಸ್ಪಷ್ಟಪಡಿಸಲು ಪ್ರಯತ್ನಿಸುತ್ತೇನೆ” ಎಂದು ಸಚಿವರು ಹೇಳಿದರು.

ಜೋಶಿ ಅವರನ್ನು ಅಭ್ಯರ್ಥಿಯನ್ನಾಗಿ ಬದಲಾಯಿಸುವ ಯಾವುದೇ ಯೋಜನೆಯನ್ನು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ತಳ್ಳಿಹಾಕಿದ್ದಾರೆ. “ಅವರು ಹಿರಿಯ ನಾಯಕರಾಗಿದ್ದಾರೆ ಮತ್ತು ಭಾರಿ ಅಂತರದಿಂದ ಗೆಲ್ಲುತ್ತಾರೆ” ಎಂದು ಲಿಂಗಾಯತ ಬಿಜೆಪಿ ನಾಯಕ ಹೇಳಿದ್ದಾರೆ. ಅವರು ವೈಯಕ್ತಿಕವಾಗಿ ಮಠಾಧೀಶರೊಂದಿಗೆ ಮಾತನಾಡುತ್ತಾರೆ; ತಪ್ಪು ತಿಳುವಳಿಕೆಯನ್ನು ಸ್ಪಷ್ಟಪಡಿಸುತ್ತಾರೆ” ಎಂದರು.

ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಕ್ರಮವಾಗಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ದೇಶದಾದ್ಯಂತ ಮತ ಎಣಿಕೆ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!