Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಬ್ಬು ಕಡಿಯಲು ಬಂದವರ ಕರುಣಾಜನಕ ಕಥೆ…

✍️ ನಾಗೇಶ್ ಎನ್.

ಮಂಡ್ಯ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿ ಕಬ್ಬು ಕಡಿಯಲು ಸಾವಿರಾರು ಜನರು ದೂರದ ಬಳ್ಳಾರಿ, ಹೊಸಪೇಟೆ, ಕಲಬುರ್ಗಿ, ಗದಗ ಮೊದಲಾದ ಜಿಲ್ಲೆಗಳಿಂದ ಬಂದಿದ್ದಾರೆ‌.

ಹೊಟ್ಟೆ ಪಾಡಿಗಾಗಿ ಅಷ್ಟು ದೂರದಿಂದ ಬಂದಿರುವ ಸಾವಿರಾರು ಜನರಿಗೆ, ಸಕ್ಕರೆ ಕಾರ್ಖಾನೆಗಳು ಯಾವುದೇ ಮೂಲಭೂತ ಸೌಕರ್ಯವನ್ನು ಒದಗಿಸಿ ಕೊಡುವುದಿಲ್ಲ. ಕಬ್ಬು ಕಟಾವು ಮಾಡಲು ಕಾರ್ಮಿಕರನ್ನು ಕರೆತಂದ ಮೇಸ್ತ್ರಿಯೇ ಕಾರ್ಖಾನೆಯ ವ್ಯಾಪ್ತಿಯ ಹಳ್ಳಿಯೊಂದರ ಹೊರವಲಯದಲ್ಲಿ ಸಣ್ಣ ಸಣ್ಣ ಜೋಪಡಿಗಳನ್ನು ಕಟ್ಟಿಸುತ್ತಾನೆ.

ಇಲ್ಲಿ ಕುಡಿಯುವ ನೀರು, ವಿದ್ಯುತ್ ದೀಪ, ಶೌಚಾಲಯ ಸೇರಿದಂತೆ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಹಳ್ಳಿಯವರ ಬಳಿ ಕಾಡಿಬೇಡಿ ಕುಡಿಯುವ ನೀರು ಪಡೆಯುತ್ತಾರೆ. ಬಹಿರ್ದೆಸೆಗೆ ಬಯಲು ಶೌಚಾಲಯವೇ ಗತಿ. ಹೆಣ್ಣುಮಕ್ಕಳು ಬೆಳಿಗ್ಗೆ ಸೂರ್ಯ ಬರುವ ಮುನ್ನವೇ ಹಾಗೂ ರಾತ್ರಿ ಕತ್ತಲಾದ ಮೇಲೆ ಶೌಚಾಲಯಕ್ಕೆ ಹೋಗಬೇಕಾದ ಹೀನಾಯ ಪರಿಸ್ಥಿತಿ.  ಸ್ಥಳದಲ್ಲಿ ಏನಾದರೂ ಆದರೂ ಅವರನ್ನು ಹೇಳುವವರು ಕೇಳುವವರು ಯಾರು ಇರುವುದಿಲ್ಲ.ಅಕಸ್ಮಾತ್ ಇಲ್ಲಿ ಅಪಘಾತದಲ್ಲಿ ಸತ್ತರೆ ಒಂದೆರಡು ಲಕ್ಷ ಕೊಟ್ಟು ಕೈ ತೊಳೆದುಕೊಂಡುತ್ತಾರೆ ಅಷ್ಟೇ.

ಕಬ್ಬು ಕಡಿಯಲು ಬಂದ ಕಾರ್ಮಿಕರ ಟೆಂಟ್ ಗಳು

ಕೆ.ಆರ್.ಪೇಟೆಯ ಕೋರಮಂಡಲ ಶುಗರ್ಸ್ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಮಾಡಲು ಬಂದಿರುವ ಚಂದ್ರನಾಯಕ್ ಎಂಬ ಮೇಸ್ತ್ರಿ ಕೂಡ 40 ರಿಂದ 50 ಜನರನ್ನು ಕರೆತಂದಿದ್ದಾರೆ. ಒಂದು ಕ್ಯಾಂಪ್ ನಲ್ಲಿ 17 ರಿಂದ 18 ಜನ ಇದ್ದು, ಅವರು ಟನ್ ಕಬ್ಬು ಕಡಿದರೆ ಕಬ್ಬಿನ ಗುಣಮಟ್ಟ ನೋಡಿ ಕೂಲಿ ನಿಗದಿ ಮಾಡಲಾಗುತ್ತದೆ. ಕೂಳೆ ಕಬ್ಬಿಗೆ ಒಂದು ಕೂಲಿ ಇದ್ದರೆ, ತನಿ (ಹೊಸ) ಕಬ್ಬಿಗೆ ಮತ್ತೊಂದು ಕೂಲಿ ನಿಗದಿ ಮಾಡಲಾಗಿರುತ್ತದೆ‌. ಬೆಳಿಗ್ಗೆಯಿಂದ ಸಂಜೆವರೆಗೂ ಮೈಮುರಿದು ಚಳಿ, ಮಳೆ, ಗಾಳಿ, ಬಿಸಿಲೆನ್ನದೆ ಕೆಲಸ ಮಾಡುವ ಇವರ ಬದುಕು ಅಕ್ಷರಶಃ ಕರುಣಾಜನಕವಾಗಿದೆ.

ವರ್ಷದಲ್ಲಿ 6 ರಿಂದ 7ತಿಂಗಳು ಮಾತ್ರ ಕೆಲಸವಿರುತ್ತದೆ. ಉಳಿದ ತಿಂಗಳಲ್ಲಿ ನಾವು ನಮ್ಮ ಸ್ವಂತ ಊರುಗಳಿಗೆ ತೆರಳಿ, ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುತ್ತೇವೆ. ಕಬ್ಬು ಕಡಿಯಲು ಕಾರ್ಖಾನೆಯವರು ಹೇಳಿದಾಗ ಬಂದು ಕ್ಯಾಂಪ್ ಮಾಡುತ್ತೇವೆ. ಕೋರಮಂಡಲ ಶುಗರ್‍ಸ್ ವ್ಯಾಪ್ತಿಯಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದೇವೆ. ನಮ್ಮ ಕ್ಯಾಂಪಿನಲ್ಲಿದ್ದವರು ಕಬ್ಬು ಕಟಾವು ಮಾಡಿ ಬರುತ್ತಿದ್ದಾಗ ಕಳೆದ ಅ.31 ರಂದು ಟಾಟಾ ಏಸ್ ಮುಗುಚಿ ಬಿದ್ದ ಪರಿಣಾಮ ಮೂವರು ಮಕ್ಕಳು ಮೃತರಾಗಿದ್ದಾರೆ.

ಇನ್ನು 15 ಮಂದಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಸತ್ತ ಮೂವರಿಗೆ ಕಾರ್ಖಾನೆ ವತಿಯಿಂದ ತಲಾ 2.50ಲಕ್ಷ ರೂ. ಹಾಗೂ ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ. ಸೇರಿ ಒಟ್ಟು ತಲಾ 3.50 ಲಕ್ಷ ಹಣ ನೀಡಿದ್ದಾರೆ ಎಂಬುದಾಗಿ ಮೇಸ್ತ್ರಿ ಚಂದ್ರ ನಾಯ್ಕ ಹೇಳುತ್ತಾರೆ.

ಜಿಲ್ಲೆಯಲ್ಲಿ ಮೈಷುಗರ್, ಕೋರಮಂಡಲ್, ಕೊಪ್ಪದ ಐಎಸ್ಎಲ್ ಶುಗರ್ಸ್, ಭಾರತೀನಗರದ ಚಾಮ್ಸ್ ಶುಗರ್ಸ್, ಬನ್ನಾರಿಯಮ್ಮ, ಹೇಮಾವತಿ ಶುಗರ್ಸ್ ಸೇರಿದಂತೆ ಬಹುತೇಕ ಕಡೆಗೂ ದೂರದ ಬಳ್ಳಾರಿ, ಹೊಸಪೇಟೆ, ಗದಗ, ಕಲ್ಬುರ್ಗಿ ಮತ್ತಿತರ ಕಡೆಗಳಿಂದ 4-5 ಸಾವಿರ ಕ್ಯಾಂಪ್ ಕಾರ್ಮಿಕರು ಬಂದಿದ್ದಾರೆ. ಏನು ಮಾಡೋದು ಹುಟ್ಟಿದ ಮೇಲೆ ಬದುಕಬೇಕಲ್ಲ.ಅದಕ್ಕಾಗಿ ಅಷ್ಟು ದೂರದಿಂದ ಬಂದಿದ್ದೇವೆ ಎನ್ನುತ್ತಾರೆ.

ಹೊಟ್ಟೆಪಾಡಿಗಾಗಿ ದೂರದ ಉತ್ತರ ಕರ್ನಾಟಕದಿಂದ ಬಂದಿರುವ ಕೂಲಿ ಕಾರ್ಮಿಕರನ್ನು ಮನುಷ್ಯರೆಂದು ಪರಿಗಣಿಸಿ, ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ಉತ್ತಮ ಕೂಲಿ ಹಾಗೂ ಮೂಲಭೂತ ಸೌಕರ್ಯಗಳನ್ನು  ಒದಗಿಸಿ ಕೊಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!