Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಸಾಮರಸ್ಯಕ್ಕೆ ರಂಗಕಲೆಯ ಕೊಡುಗೆ ಅಪಾರ- ಉಮೇಶ ದಡಮಹಳ್ಳಿ

ಸಮಾಜದ ಸಾಮರಸ್ಯ ಮೂಡಿಸುವಲ್ಲಿ ರಂಗ ಕಲೆಯ ಕೊಡುಗೆ ಅಪಾರವಾದುದು ಎಂದು ಅನಿಕೇತನ ಪ್ರತಿಷ್ಠಾನದ ಅಧ್ಯಕ್ಷ ಡಿ.ಉಮೇಶ ದಡಮಹಳ್ಳಿ ಹೇಳಿದರು.

ಮಳವಳ್ಳಿ ತಾಲ್ಲೂಕು ಸಮೀಪದ ಹುಸ್ಕೂರು ಗ್ರಾಮದಲ್ಲಿ ಹಲಗೂರಿನ ಅನಿಕೇತನ ಪ್ರತಿಷ್ಠಾನ ಬುಧವಾರ ಆಯೋಜಿಸಿದ “ಅನಿಕೇತನ ನಾಟಕೋತ್ಸವ-2024″ದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಟಕ ಕ್ಷೇತ್ರ ಮನುಷ್ಯರ ಜೀವನದ ಮೇಲೆ ತುಂಬಾ ಪ್ರಭಾವ ಬೀರಿದೆ. ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕ್ಷೇತ್ರಗಳ ಬಗೆಗಿನ ಅರಿವನ್ನು ಜನರಿಗೆ ಮೂಡಿಸಿದೆ. ನೊಂದ ಜನರ ಪ್ರತಿಭಟನೆಯ ಅಸ್ತ್ರವಾಗಿದೆ. ಮನುಷ್ಯರ ತುಮುಲವನ್ನು ಹೊರಹೊಮ್ಮಿಸುವ ಕ್ಷೇತ್ರವಾಗಿದೆ. ಶ್ರಮಿಕ ಜೀವಿಗಳಿಗೆ ಮಾನಸಿಕ, ದೈಹಿಕ ಭಾದೆ ನಿವಾರಿಸುವ ಮುಲಾಮು ಆಗಿದೆ. ಮನರಂಜನೆಗಷ್ಟೆ ಸೀಮಿತವಾಗದೆ, ತಿಳುವಳಿಕೆ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿ ಆಗಿದೆ. ಸಹಬಾಳ್ವೆ, ಸಹಜೀವನದ ಪರಿಪಾಠ ಕಲಿಸಿದೆ ಎಂದು ಅಭಿಪ್ರಾಯಿಸಿದರು.

ಸದಾ ಸಾಮರಸ್ಯ ಜೀವನಕ್ಕೆ ಭದ್ರಬುನಾದಿ ಆಗಿದ್ದ ಜನಪದ ಕಲೆಗಳು ಜನರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಬೇಸರ ತರಿಸಿದೆ. ಮೊಬೈಲ್ ದುರ್ಬಳಕೆಯ ಚಟದಿಂದ ಜನಪದ ಕಲೆಗಳು ಮಸುಕಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು. ಜನರ ಆರೋಗ್ಯ, ಆಯಸ್ಸು ವೃದ್ಧಿಸುವಲ್ಲಿಯೂ ಸಹಕಾರಿಯಾಗಿರುವ ಜನಪದ ಕಲೆಗಳು ಪುನರ್ ಚೇತನಗೊಳ್ಳಬೇಕು. ಈ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ರಂಗಕಲೆ ಸೇರಿದಂತೆ ಜನಪದ ಕಲೆಗಳ ಜೀವಂತಿಕೆಯನ್ನು ಕಾಪಾಡಿಕೊಳ್ಳಬೇಕು. ಮುಂದಿನ ಪೀಳಿಗೆಯ ಜನರಿಗೂ ತಲುಪುವ ಕೆಲಸಗಳು ನಿರಂತರವಾಗಿ ಸಾಗಬೇಕು ಎಂದು ಆಶಿಸಿದರು.

ಮಳವಳ್ಳಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆಂಬೂತಗೆರೆ ದ್ಯಾಪೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಹಳ್ಳಿಗಳಲ್ಲಿ ಹೆಚ್ಚು, ಹೆಚ್ಚು ನಾಟಕಗಳು ಆಯೋಜನೆಗೊಳ್ಳಬೇಕು. ಈ ಮೂಲಕ ಸಮಾಜ ತಿದ್ದುವ ಕೆಲಸ ಯಾವಾಗಲೂ ನಡೆಯಬೇಕು. ಜನರು ಕೂಡ ನಾಟಕಗಳ ಬಗ್ಗೆ ಆಸಕ್ತಿ ಕಳೆದುಕೊಳ್ಳಬಾರದು ಎಂದರು.

ಭಾರತೀನಗರ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಲಕ್ಷ್ಮೀಶ್ ಹೊನ್ನಲಗೆರೆ ಮಾತನಾಡಿದರು. ಬಳ್ಳಾರಿ ಜಿಲ್ಲೆಯ ಸಿರಿಗೇರಿಯ ಧಾತ್ರಿ ರಂಗಸಂಸ್ಥೆ ಕಲಾವಿದರಿಂದ ಶ್ರೀಕೃಷ್ಣ ಸಂಧಾನ (ನಗೆನಾಟಕ) ಪ್ರದರ್ಶನಗೊಂಡಿತು. ಜನಪದೋತ್ಸವ, ರಂಗಗೀತೋತ್ಸವ, ರಂಗೋತ್ಸವ ಕಾರ್ಯಕ್ರಮ ಜರುಗಿದವು.

ಭಾರತೀನಗರ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಲಕ್ಷ್ಮೀಶ್ ಹೊನ್ನಲಗೆರೆ, ಹಿರಿಯ ಮುಖಂಡರಾದ ಹುಸ್ಕೂರು ಶಿವಲಿಂಗೇಗೌಡ, ಕೆಂಪೇಗೌಡ, ಅಪ್ಪಾಜಯ್ಯನದೊಡ್ಡಿ ಮರೀರೇಗೌಡ, ಅಗಸನಪುರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ದಡಮಹಳ್ಳಿ ಚಿಕ್ಕಮಾದೇಗೌಡ, ರವಿವೆಂಕಟೇಗೌಡ, ದಡಮಹಳ್ಳಿ ಮಾದೇವ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!