Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿನಿಮಾದಲ್ಲಿ ಹೀರೋ ನಿಜ ಜೀವನದಲ್ಲಿ ವಿಲನ್ !

ತನ್ನ ಆಪ್ತ ಗೆಳತಿ ಪವಿತ್ರಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ ಕಾರಣಕ್ಕೆ ಸಿಟ್ಟಾದ ಚಿತ್ರನಟ ದರ್ಶನ್ ಅತನನ್ನು ತನ್ನ ಬೆಂಬಲಿಗರ ಮೂಲಕ ಅಪಹರಿಸಿಕೊಂಡು ಬಂದು ಚಿತ್ರಹಿಂಸೆ ನೀಡಿ, ಕ್ರೂರವಾಗಿ ಕೊಲೆ ಮಾಡಿಸಿದ ಆರೋಪದಲ್ಲಿ ಬಂಧಿತನಾಗಿದ್ದಾನೆ.

ದರ್ಶನ್ ಅವರ ತಂದೆ ತೂಗುದೀಪ ಶ್ರೀನಿವಾಸ ಕನ್ನಡ ಚಲನಚಿತ್ರ ರಂಗದಲ್ಲಿ ತಮ್ಮ ಅಭಿನಯದಿಂದಲೇ ದೊಡ್ಡ ಹೆಸರು ಮಾಡಿದ್ದರು. ತೂಗುದೀಪ ಶ್ರೀನಿವಾಸ್ ಅವರು ಮಾಡಿರುವ ಬಹುತೇಕ ಚಿತ್ರಗಳಲ್ಲಿ ವಿಲನ್ ಪಾತ್ರವೇ ಹೆಚ್ಚು. ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದ ತೂಗುದೀಪ ಶ್ರೀನಿವಾಸ್ ನಿಜ ಜೀವನದಲ್ಲಿ ಹೆಂಡತಿ ಮಕ್ಕಳೊಂದಿಗೆ ಪ್ರೀತಿಯಿಂದ ವರ್ತಿಸುತ್ತಾ ಸಮಾಜದ ಕಣ್ಣಲ್ಲಿ ನಿಜವಾದ ಹೀರೋ ಆಗಿದ್ದರು.

ಆದರೆ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ಸಿನಿಮಾದಲ್ಲಿ ಹೀರೋ ಆಗಿ ನಿಜ ಜೀವನದಲ್ಲಿ ವಿಲನ್ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಕ್ಕೆ ರೇಣುಕಾ ಸ್ವಾಮಿ ಬರ್ಬರ ಕೊಲೆಯೇ ಸಾಕ್ಷಿ. ಇಂದು ಕೊಲೆಯ ಕಾರಣಕ್ಕಾಗಿ ಜೈಲು ಪಾಲಾಗಿರುವುದು ದುರಂತದ ಸಂಗತಿ.

ಕೊಲೆಯಾದ ರೇಣುಕಾಸ್ವಾಮಿ

ತನ್ನ ಆಪ್ತ ಗೆಳತಿ ಪವಿತ್ರ ಗೌಡನಿಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಮರ್ಮಾಂಗದ ಫೋಟೋ ಕಳಿಸಿ ದರ್ಶನ್ ಗಿಂತ ನಾನೇನು ಕಡಿಮೆ ಬಾ ಎಂದು ಕರೆದಿದ್ದ ಎಂಬ ಮೆಸೇಜ್ ನೋಡಿ ಕೆರಳಿದ್ದ ದರ್ಶನ್, ತನ್ನ ಬೆಂಬಲಿಗರ ಮೂಲಕ ಆತನನ್ನು ಚಿತ್ರದುರ್ಗದಿಂದ ಅಪಹರಿಸಿ ತಂದು, ಬೆಂಗಳೂರಿನ ಪಟ್ಟಣಗೆರೆಯಲ್ಲಿರುವ ತನ್ನ ಬೆಂಬಲಿಗರ ಗೋಡಾನ್ ನಲ್ಲಿಟ್ಟುಕೊಂಡು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿಸಿ ಬರ್ಬರವಾಗಿ ಕೊಂದು ಹಾಕಿ ಸುಮನಹಳ್ಳಿಯ ರಾಜಕಾಲುವೆಗೆ ಎಸೆಸಿದ್ದ ಕೃತ್ಯ ಒಬ್ಬ ವಿಕೃತ ರೌಡಿಗಿಂತ ಕಡಿಮೆ ಏನಲ್ಲ.

ರೇಣುಕಾ ಸ್ವಾಮಿಯ ಮುಖ, ಮೈ, ಕೈಗಳ ಮೇಲಿರುವಂತಹ ಗಾಯಗಳನ್ನು ನೋಡಿದರೆ ಒಬ್ಬ ವಿಕೃತ ಹಂತಕನಿಂದ ಮಾತ್ರ ಇವೆಲ್ಲ ಸಾಧ್ಯ ಎಂಬ ಭಾವನೆ ಯಾರಿಗಾದರೂ ಬರುತ್ತದೆ. ದೈಹಿಕವಾಗಿ ಕೃಶಕಾಯನಾಗಿದ್ದ ರೇಣುಕಾ ಸ್ವಾಮಿಯ ದವಡೆ ಉದುರಿ ಹೋಗಿತ್ತು. ದೇಹದ ಹಲವೆಡೆ ಸಿಗರೇಟಿನಲ್ಲಿ ಸುಟ್ಟಿದ ಕಾರಣದಿಂದ ಮೂಡಿದ ಗಾಯಗಳು, ದೇಹದ ಮೇಲೆ ಹರಿತವಾದ ಆಯುಧದಿಂದ ಚುಚ್ಚಿರುವ ಗಾಯಗಳು, ಕಿವಿ,ಮೂಗು ಮುಖದಲ್ಲಾದಂತಹ ಗಾಯಗಳನ್ನು ನೋಡಿದರೆ ಆತನಿಗೆ ಯಾವ ರೀತಿ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬುದು ಪ್ರತಿಯೊಬ್ಬರ ಕಣ್ಣಿಗೂ ಕಾಣುತ್ತದೆ. ಒಬ್ಬ ಹೀರೋ ನಟನಲ್ಲಿ ಇಷ್ಟೊಂದು ಕ್ರೌರ್ಯ ಹೇಗೆ ಮಿಳಿತವಾಗಿದೆ ಎಂಬುದು ಗೊತ್ತಾಗುತ್ತದೆ.

ನಟ ದರ್ಶನ್ ಸಾಕಷ್ಟು ಪರಿಶ್ರಮ ಪಟ್ಟು ಸಿನಿಮಾ ನಟನಾಗಿ ಇಂದು ಚಿತ್ರರಂಗದಲ್ಲಿ ಹಣ,ಹೆಸರು ಸಂಪಾದಿಸಿದ್ದು ಉತ್ತಮ ಸಂಗತಿ. ಹಾಗೆ ಹಣ,ಹೆಸರುವಬಂದ ಮೇಲೆ ಅಹಂಕಾರ ಹೆಚ್ಚಾಗಿ ಇಂದು ಕೊಲೆಯಂತಹ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಬಂಧನವಾಗುವಂತೆ ಮಾಡಿದೆ.

ದರ್ಶನ್ ಮೇಲೆ ಹಲವು ಅಪಾದನೆ

2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ಕೆಟ್ಟ ಕೆಟ್ಟ ಮಾತುಗಳಿಂದ ಪತ್ನಿ ಹಾಗೂ ಆಕೆಯ ತಾಯಿಗೆ ಬೈದಿದ್ದ ಆಡಿಯೋ ವೈರಲ್ ಆಗಿ ದರ್ಶನ್ ಎಂತಹ ವಿಕೃತ ಮನಸ್ಥಿತಿಯವ ಎಂಬುದನ್ನು ನಾಡಿನ ಜನರು ನೋಡಿದ್ದರು. ಈ ಪ್ರಕರಣದಲ್ಲಿ 28 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ದರ್ಶನ್ ನಂತರ ಪತ್ನಿಯೊಂದಿಗೆ ರಾಜಿ ಮಾಡಿಕೊಂಡ ಪರಿಣಾಮ ಕೇಸು ರಾಜಿ ಹಂತದಲ್ಲಿ ಮುಗಿದು ಹೋಗಿತ್ತು.

2019 ರಲ್ಲಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಸಹ ನಟನ ಮೇಲೆ ದರ್ಶನ್ ಹಲ್ಲೆ ನಡೆಸಿದ್ದರು.
2021 ರಲ್ಲಿ ರಾಬರ್ಟ್ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹಾಗೂ ದರ್ಶನ್ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದು, ದರ್ಶನ್ ಏಯ್ ತಗಡು, ಗುಮ್ಮಿಸ್ಕೋತಿಯ ಎಂದೆಲ್ಲ ಸಾರ್ವಜನಿಕವಾಗಿಯೇ ಹೇಳಿಕೆ ನೀಡಿದ್ದರು.

ನಟ ,ನಿರ್ದೇಶಕ ಪ್ರೇಮ್ ಗೆ ಅವನೇನ್ ದೊಡ್ ಪುಡಂಗಾ, ಅವನಿಗೇನ್ ಕೊಂಬೈತ ಎಂದು ಮಾತನಾಡಿ ಸುದ್ದಿಯಾಗಿದ್ದರು. ಕಾಟೇರ ಸಿನಿಮಾ ಯಶಸ್ವಿಯಾದ ಹಿನ್ನೆಲೆಯಲ್ಲಿ ಜೆಟ್ ಲ್ಯಾಗ್ ಪಬ್ ನಲ್ಲಿ ಅನುಮತಿ ಪಡೆಯದೆ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿ ಸುದ್ದಿಯಾಗಿದ್ದರು. ಮಾಧ್ಯಮಗಳಲ್ಲಿ ತನ್ನ ವಿರುದ್ಧ ಸುದ್ದಿ ಮಾಡಿದ್ದಾರೆ ಎಂಬ ಕಾರಣಕ್ಕೆ ಬಾಯಿಗೆ ಬಂದಂತೆ ಕೆಟ್ಟದಾಗಿ ಬೈದು ಒಂದು ವರ್ಷಗಳಿಗೂ ಹೆಚ್ಚು ಅವಧಿ ಮೀಡಿಯಾಗಳಲ್ಲಿ ಈತನ ಸುದ್ದಿಯನ್ನು ಬ್ಯಾನ್ ಮಾಡಲಾಗಿತ್ತು.ವರ್ಷದ ಹಿಂದಷ್ಟೇ ಮಾಧ್ಯಮಗಳ ಕ್ಷಮೆ ಕೇಳಿದ್ದರು.

ಒಂದು ವರ್ಷದ ಹಿಂದೆ ಮೈಸೂರಿನ ಸಂದೇಶ ಪ್ರಿನ್ಸ್ ಹೋಟೆಲ್ ನಲ್ಲಿ ಆಹಾರ ಮತ್ತು ಮದ್ಯ ಸರಬರಾಜು ಮಾಡದ ಕಾರಣಕ್ಕೆ ಸಪ್ಲೈಯರ್ ಮೇಲೆ ಹಲ್ಲೆ ದರ್ಶನ ಹಲ್ಲೆ ಮಾಡಿದ್ದ ಪ್ರಕರಣ ನಡೆದಿತ್ತು. ಆದರೆ ಯಾವುದೇ ದೂರು ದಾಖಲಾಗದ ಕಾರಣ ಈ ಪ್ರಕರಣ ಬಯಲಿಗೆ ಬಂದಿರಲಿಲ್ಲ.

ದರ್ಶನ್ ಸಿನಿಮಾದಲ್ಲಿ ಉತ್ತಮ ನಟನೆ ಮೂಲಕ ಯಾವ ರೀತಿ ಹೀರೋ ಆಗಿ ಅಭಿಮಾನಿಗಳನ್ನು ಸಂಪಾದಿಸಿದ್ದನೋ, ನಿಜ ಜೀವನದಲ್ಲಿ ತನ್ನ ಕ್ರೂರ ವರ್ತನೆಯ ಮೂಲಕ ವಿಲನ್ ಆಗಿರುವುದು ಅಷ್ಟೇ ಸತ್ಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!