Wednesday, July 24, 2024

ಪ್ರಾಯೋಗಿಕ ಆವೃತ್ತಿ

ಹಾಡುಹಗಲೇ ಮಹಿಳೆಯ ಭೀಕರ ಹತ್ಯೆ

ಹಾಡುಹಗಲೇ ಮಹಿಳೆಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಕಿಕ್ಕೇರಿ ಪಟ್ಟಣದಲ್ಲಿರುವ ಮೈಸೂರು- ಚನ್ನಾರಾಯಪಟ್ಟಣ ರಸ್ತೆಯಲ್ಲಿರುವ ಶ್ರೀಕಾಂತ್ ಮೆಡಿಕಲ್ ಸ್ಟೋರ್ ಮಾಲೀಕರಾದ ಪುಷ್ಪಲತಾ (50) ಅವರನ್ನು ಅವರ ಮನೆಯಲ್ಲಿಯೇ ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಹಾಡು ಹಗಲೇ ನಡೆದಿರುವ ಭೀಕರ ಹತ್ಯೆಯಿಂದ ಕಿಕ್ಕೇರಿ ಪಟ್ಟಣ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ.
ಕಿಕ್ಕೇರಿ ಪಟ್ಟಣದ ಮುಖ್ಯರಸ್ತೆಯಲ್ಲಿ ಶ್ರೀಕಾಂತ್ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದ ಪುಷ್ಪಲತಾ ಅವರ ಪತಿ ನಿಧನದ ಬಳಿಕ ಅವರೇ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು.

ಇಂದು ಬೆಳಿಗ್ಗೆ ಕೂಡ ಅವರೇ ಮೆಡಿಕಲ್ ತೆರೆದು ವ್ಯಾಪಾರ ಮಾಡಿ, ತಿಂಡಿ ತಿನ್ನಲು ಅಂಗಡಿಯ ಎದುರುಗಡೆ ಇರುವ ಮನೆಗೆ ಹೋಗಿದ್ದರು. ಮಧ್ಯಾಹ್ನವಾದರೂ ಮೆಡಿಕಲ್ ಸ್ಟೋರ್ ಗೆ ಬರದ ಹಿನ್ನೆಲೆಯಲ್ಲಿ ಮನೆಗೆ ಹೋಗಿ ನೋಡಿದಾಗ ಪುಷ್ಪಲತಾ ಅವರು ಬರ್ಬರವಾಗಿ ಕೊಲೆಯಾಗಿದ್ದರು.

ಕಿಕ್ಕೇರಿ ಹೋಬಳಿಯ ಗಾಣನಹಳ್ಳಿ ಗ್ರಾಮದ ಪುಷ್ಪಲತಾ ಅವರು ಪತಿಯ ನಿಧನದ ನಂತರ ತಾವೇ ಮೆಡಿಕಲ್ ಸ್ಟೋರ್ ನಡೆಸುತ್ತಿದ್ದರು. ಎಲ್ಲರೊಂದಿಗೂ ಸ್ನೇಹದಿಂದ ಇದ್ದ ಪುಷ್ಪಲತಾ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವುದು ಪಟ್ಟಣದ ನಾಗರಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಮನೆಯಲ್ಲಿರುವ ಚಿನ್ನಾಭರಣ, ಹಣವನ್ನು ಮುಟ್ಟಿಲ್ಲದ ಕಾರಣ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಹಾಗೂ ಕೆ. ಆರ್. ಪೇಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಪುಷ್ಪಲತಾ ಅವರ ಮೃತ ಶರೀರವನ್ನು ಪಂಚನಾಮೆಗಾಗಿ ಹಾಸನಕ್ಕೆ ಕಳಿಸಲಾಗಿದ್ದು,ಕಿಕ್ಕೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!