ವಿಶ್ವ ವಿಖ್ಯಾತ ಕೆಆರ್‌ಎಸ್ ಹಾಗೂ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಶೀಘ್ರ ದುರಸ್ತಿ ಪಡಿಸುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿ ಪ್ರತಿಭಟಿಸಿದ ಪ್ರತಿಭಟನಾಕಾರರು ಲೋಕೋಪಯೋಗಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಐತಿಹಾಸಿಕ ಪಾರಂಪರ್ಯವುಳ್ಳ ಶ್ರೀರಂಗಪಟ್ಟಣದ ಪ್ರವಾಸಿತಾಣಗಳ ವೀಕ್ಷಣೆಗೆ ಪ್ರತಿ ನಿತ್ಯ ದೇಶ- ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲದೆ ಸ್ಥಳೀಯ ಗ್ರಾಮಗಳ ಜನರು ಕೂಡ ಶ್ರೀರಂಗಪಟ್ಟಣ- ಕೆಆರ್‌ಎಸ್ ಮಾರ್ಗದ ರಸ್ತೆಯ ಉದ್ದಕ್ಕೂ ಗುಂಡಿಬಿದ್ದಿದೆ. ಮೈಸೂರು ರಸ್ತೆ ಕೂಡ ಸಂಪೂರ್ಣವಾಗಿ ಗುಂಡಿಗಳಾಗಿದ್ದು, ವಾಹನ ಹಾಗೂ ಬೈಕ್ ಸವಾರರು ರಸ್ತೆಯಲ್ಲಿ ಸಂಚರಿಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.
ವಾಹನ ಸವಾರರಿಗೆ ನಿತ್ಯ ಮೃತ್ಯಕೂಪವಾಗಿ ಮಾರ್ಪಟಿರುವ ರಸ್ತೆಗಳಿಂದ ಸಾವು ನೋವುಗಳೇ ಹೆಚ್ಚಾಗುತ್ತಿದೆ. ಇಷ್ಟೊಂದು ಅವ್ಯವಸ್ಥೆಯಿಂದ ಕೂಡಿರುವ ರಸ್ತೆ ದುರಸ್ಥಿಗಾಗಿ ಸ್ಥಳೀಯರು ಸೇರಿದಂತೆ ಇತರರು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮವಹಿಸಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ಲೊಕೊಪಯೋಗಿ ಇಲಾಖೆ ಕಣ್ಣಿದ್ದರೂ ಕುರುಡಾದಂತೆ ಕಣ್ಣುಮುಚ್ಚಿ ಕುಳಿತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ರಸ್ತೆ ದುರಸ್ತಿ ಗೊಳಿಸಿ ಸುಗಮಸಂಚಾರಕ್ಕೆ ಅನುವುಮಾಡಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು, ಶೀಘ್ರ ಗುಂಡಿ ಬಿದ್ದ ರಸ್ತೆಯನ್ನು ದುರಸ್ತಿ ಮಾಡಿ ಪ್ರವಾಸಿಗರು ಹಾಗೂ ಸ್ಥಳೀಯರ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಲ್ಲೇನಹಳ್ಳಿ ಕೃಷ್ಣೇಗೌಡ, ಉಂಡವಾಡಿ ಮಹದೇವು, ಬೆಳಗೊಳ ಸುನೀಲ್, ಮೇಳಾಪುರ ಜಯರಾಮು, ಮಂಜುನಾಥ್, ರಮೇಶ್, ಮಹದೇವಪುರ ಕೃಷ್ಣ, ಫಿಲಿಪ್ಸ್, ರವಿ ,ಲಕ್ಷ್ಮಣ, ಪುರುಷೋತ್ತಮ, ಮಹದೇವು ಸೇರಿದಂತೆ ಬಿಜೆಪಿ ಹಾಗೂ ರೈತ ಮುಖಂಡರು ಹಾಜರಿದ್ದರು.