Friday, September 20, 2024

ಪ್ರಾಯೋಗಿಕ ಆವೃತ್ತಿ

ಬಂಧನದ ಭೀತಿಯಿಂದ ನಾಪತ್ತೆಯಾದ ನಟ ಉಪೇಂದ್ರ… ಹೈಕೋರ್ಟ್ ಮೊರೆ

ವಿವಾದಾತ್ಮಕ ಹೇಳಿಕೆ ನೀಡಿ ಬಂಧನ ಭೀತಿ ಎದುರಿಸುತ್ತಿರುವ ನಟ ಉಪೇಂದ್ರ, ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಉಪೇಂದ್ರ ಅವರ ವಿರುದ್ಧ ಈಗಾಗಲೇ ಬೆಂಗಳೂರಿನಲ್ಲಿ ಪ್ರತ್ಯೇಕ ಪೊಲೀಸ್ ಠಾಣೆಯಲ್ಲಿ ಎರಡು ಎಫ್ಐಆರ್ ದಾಖಲಾಗಿದೆ. ಮೊದಲ ಎಫ್ಐಆರ್ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಆಗಿದ್ದರೆ, ಎರಡನೇ ಎಫ್‌ಐಆರ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಮೊದಲ ದೂರನ್ನು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂದನ್ ಎಂಬವರು ನೀಡಿದ್ದರೆ, ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷ ಭೈರಪ್ಪ ಹರೀಶ್ ಕುಮಾರ್ ಅವರು ಎರಡನೇ ದೂರು ನೀಡಿದ್ದಾರೆ.

ವಿವಾದಾತ್ಮಕ ಹೇಳಿಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ತಕ್ಷಣ ಉಪೇಂದ್ರ ಅವರು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಜೊತೆಗೆ, ವಾಟ್ಸಪ್‌ನಲ್ಲೂ ಕೂಡ ಕಳುಹಿಸಿ, ಉತ್ತರ ನೀಡುವಂತೆ ಸೂಚಿಸಿದ್ದರು. ಆದರೆ ಅದಕ್ಕೆ ಉಪೇಂದ್ರ ಅವರು ಉತ್ತರಿಸಿಲ್ಲ ಎಂದು ತಿಳಿದುಬಂದಿದೆ.

ಅಲ್ಲದೆ, ವಿವಿಪುರಂ ವಿಭಾಗದ ಎಸಿಪಿ ನಾಗರಾಜ್​ ಅವರ ನೇತೃತ್ವದ ಪೊಲೀಸರ ತಂಡವು ಕತ್ರಿಗುಪ್ಪೆಯಲ್ಲಿರುವ ಉಪೇಂದ್ರ ಅವರ ನಿವಾಸಕ್ಕೆ ತೆರಳಿ ಸ್ಥಳ ಮಹಜರು ಕೂಡ ನಡೆಸಿದ್ದಾರೆ. ‘ಉಪೇಂದ್ರ ಅವರು ಮನೆಯಲ್ಲಿರಲಿಲ್ಲ. ಅವರು ನಾಪತ್ತೆಯಾಗಿರುವುದಾಗಿ’ ಪೊಲೀಸರೊಂದಿಗೆ ಸ್ಥಳ ಮಹಜರಿಗೆ ತೆರಳಿದ್ದ ದೂರುದಾರರಲ್ಲೋರ್ವರಾದ ಸಮತಾ ಸೈನಿಕ ದಳದ ಗೋಪಾಲ ಗಿರಿಯಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಈ ನಡುವೆ ತನ್ನ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

‘ತಾನು ಉದ್ದೇಶಪೂರ್ವಕವಾಗಿ ಯಾರಿಗೂ ನೋವನ್ನುಂಟು ಮಾಡುವಂತೆ ಮಾತನಾಡಿಲ್ಲ. ಗಾದೆ ಮಾತನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಆ ಮಾತು ಬಂದಿದೆ. ಹೇಳಿಕೆ ತಪ್ಪಾಗಿದೆ ಅಂತ ತಿಳಿದ ಕೂಡಲೇ ಕ್ಷಮೆ ಕೇಳಿದ್ದೇನೆ ಹಾಗೂ ವಿಡಿಯೋ ಡಿಲೀಟ್ ಕೂಡ ಮಾಡಿದ್ದೇನೆ. ಎಲ್ಲ ಸಮುದಾಯದ ಬಗ್ಗೆ ಗೌರವಿಟ್ಟುಕೊಂಡಿರುವ ವ್ಯಕ್ತಿ ನಾನು’ ಎಂದು ಹೈಕೋರ್ಟಿಗೆ ಈಗಾಗಲೇ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!