Saturday, May 18, 2024

ಪ್ರಾಯೋಗಿಕ ಆವೃತ್ತಿ

ದರ್ಶನ್ ಪುಟ್ಟಣ್ಣಯ್ಯ ಬೆಂಬಲಿಗರ ಅಪಪ್ರಚಾರ : ಜೆಡಿಎಸ್ ಖಂಡನೆ

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು ಅವರ ವಿರುದ್ಧ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹಾಗೂ ಅವರ ಬೆಂಬಲಿಗರು ಮಾಡುತ್ತಿರುವ ಅಪಪ್ರಚಾರವನ್ನು ಮೇಲುಕೋಟೆ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಖಂಡಿಸುತ್ತೇವೆಂದು ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ತಾಲೂಕಿನ ದುದ್ದ ಹೋಬಳಿ ಮತದಾರರು ಸಮಾಜಮುಖಿ ಕಳಕಳಿಯುಳ್ಳ ಅನೇಕ ನಾಯಕರಿಗೆ ರಾಜಕೀಯ ಸ್ಥಾನಮಾನ ಕಲ್ಪಿಸಿದ್ದಾರೆ. ಆ ಪೈಕಿ ದಿ.ಜಿ ಎಸ್ ಬೊಮ್ಮೇಗೌಡ, ಎಚ್ ಡಿ ಚೌಡಯ್ಯ, ಜಿ ಬಿ ಶಿವಕುಮಾರ್, ಎನ್.ತಮ್ಮಣ್ಣ ಸೇರಿದಂತೆ ಹಾಲಿ ಶಾಸಕ ಸಿ ಎಸ್ ಪುಟ್ಟರಾಜು ಹಾಗೂ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ರಾಜಕೀಯ ಏಳಿಗ್ಗೆ  ಈ ಹೋಬಳಿ ಮತದಾರರ ಆಶೀರ್ವಾದ ದೊರೆತಿದೆ ಎಂದರು.

2018ರ ಚುನಾವಣೆಯಲ್ಲಿ ಜಯಗಳಿಸಿದ ಹಾಲಿ ಶಾಸಕ ಪುಟ್ಟರಾಜು ಅವರು ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವರಾಗಿ ದುದ್ದ ಏತ ನೀರಾವರಿ ಯೋಜನೆ, ಶ್ಯಾದನಹಳ್ಳಿ ಏತ ನೀರಾವರಿ ಯೋಜನೆ, ಬಳೆತಗುಪ್ಪೆ, ಏತ ನೀರಾವರಿ ಯೋಜನೆ, ಮಲ್ಲಿಗೆರೆ ಏತ ನೀರಾವರಿ ಯೋಜನೆ, ಸುಂಕಾ ತೊಣ್ಣೂರು ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸಿದ್ದಾರೆ. ಈ ಮೂಲಕ ನೂರಾರು ಕೆರೆ-ಕಟ್ಟೆಗಳನ್ನು ತುಂಬಿಸಲು ಮತ್ತು ಸಾವಿರಾರು ಎಕರೆ ಮಳೆಯಾಶ್ರಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹತ್ತರ ಯೋಜನೆ ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದರು.

ದುದ್ದ ಹೋಬಳಿ ವ್ಯಾಪ್ತಿಯ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಶಾಲಾ ಹಾಗೂ ಕಾಲೇಜು ಕಟ್ಟಡಗಳ ನಿರ್ಮಾಣ, ಕುಡಿಯುವ ನೀರಿನ ಸಂಪರ್ಕಕ್ಕೆ ಶ್ರಮಿಸಿದ್ದಾರೆ. ತಮ್ಮ ದುಡಿಮೆಯ ಪಾಲಿನ ಹಣದಲ್ಲಿ ದುದ್ದ ವ್ಯಾಪ್ತಿಯ ಹತ್ತಾರು ದೇವಾಲಯಗಳ ಜೀರ್ಣೋದ್ದಾರಕ್ಕೆ ಲಕ್ಷಾಂತರ ರೂಪಾಯಿ ಹಣ ನೀಡಿ, ತಮ್ಮ ಧಾರ್ಮಿಕ ಪ್ರೀತಿಯನ್ನು ಸಾಬೀತು ಮಾಡಿದ್ದಾರೆ.

ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ಪಕ್ಷದ ಸ್ಥಳೀಯ ಮುಖಂಡರು ಕ್ಷೇತ್ರ ಅಭಿವೃದ್ಧಿ ಜೊತೆಗೆ ವೈಯಕ್ತಿಕ ಸಂಕಷ್ಟಗಳಿಗೆ ನೆರವಾಗಿ ಅನೇಕ ಬಡ ವಿದ್ಯಾವಂತ ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಹಾಗೂ ಇಂಜಿನಿಯರ್ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ನೆರವಾಗಿದ್ದಾರೆ. ಇಂತಹವರ ಬಗ್ಗೆ ಲಘು ಟೀಕೆ ಯಾರಿಗೂ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.

ದಿನದ ಬಹುಪಾಲು ವೇಳೆಯನ್ನು ಕ್ಷೇತ್ರದ ಜನರ ಅಭ್ಯುದಯಕ್ಕೆ ಮೀಸಲಿಟ್ಟಿರುವ ಶಾಸಕರ ಬಗ್ಗೆ ಸರ್ವೋದಯ ಕರ್ನಾಟಕ ಪಕ್ಷದ ಕಾರ್ಯಕರ್ತರು ಅಪಪ್ರಚಾರಗೈದು ‘ದುಡ್ಡಿಗಾಗಿ ಅಲ್ಲ, ದುದ್ದ ಸ್ವಾಭಿಮಾನಕ್ಕೆ ಸಿದ್ದ’ ಎಂಬ ಶೀರ್ಷಿಕೆಯಡಿ ಪಾದಯಾತ್ರೆಗೆ ಮುಂದಾಗಿ ಕ್ಷೇತ್ರದಲ್ಲಿ ಪ್ರಚೋದನಾ ರಾಜಕಾರಣಕ್ಕೆ ಮುಂದಾದರೆ ಅದರ ಪರಿಣಾಮವನ್ನು ಎದುರಿಸಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮೇಲುಕೋಟೆ ಕ್ಷೇತ್ರದಲ್ಲಿ 2013ರಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯು ಜಯಗಳಿಸಿ ಕಾರ್ಯನಿರ್ವಹಿಸಿರುತ್ತಾರೆ. ಇದು ದುದ್ದ ಜನರ ತೀರ್ಪೇ ಹೊರತು, ಮತ ಮಾರಾಟವಲ್ಲ ಎಂಬುವುದು ನಮ್ಮ ಅಚಲ ನಂಬಿಕೆ. ಇದನ್ನು ಅವಮಾನಿಸುವುದಾದರೆ ದುದ್ದ ಹೋಬಳಿಯ ಮತದಾರರನ್ನ ಅಣಕಿಸುವ ನಿಮ್ಮ ಪಾದಯಾತ್ರೆಯ ಶೀ‍‍ರ್ಷಿಕೆಯನ್ನು ಹಿಂಪಡೆಯಿರಿ ಎಂಬುದು ನಮ್ಮೆಲ್ಲರ ಒಕ್ಕೊರಲ ಒತ್ತಾಯವಾಗಿದೆ ಎಂದರು.

ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಮಾಜಿ ಉಪಾಧ್ಯಕ್ಷ ಹೆಚ್.ಎಲ್.ಶಿವಣ್ಣ ಮಾತನಾಡಿ, ಕಳೆದ 5 ವರ್ಷಗಳ ಕ್ಷೇತ್ರದ ಅಭಿವೃದ್ಧಿ ಮತದಾರರಿಗೆ ಮನವರಿಕೆಯಾಗಿದೆ. ರಸ್ತೆ, ಸಮುದಾಯ ಭವನ, ದೇವಾಲಯ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿಗೆ ಮನಸೋತ ಜನತೆ ಗ್ರಾ.ಪಂ.ವಾರು ಸಿ.ಎಸ್.ಪುಟ್ಟರಾಜು ಅವರನ್ನು ಅಭಿನಂದಿಸಲು ಮುಂದಾಗಿರುವುದು ವಿರೋಧಿಗಳಿಗೆ ಸಹಿಸಲಸಾಧ್ಯವಾಗಿದೆ ಎಂದರು.

ಕೋವಿಡ್ ವೇಳೆ ತಮ್ಮ ಪ್ರಾಣದ ಹಂಗು ತೊರೆದು ಜನರ ರಕ್ಷಣೆ ಹಾಗೂ ಆರೋಗ್ಯ ಸೇವೆಗೆ ಒತ್ತು ನೀಡಿದ ಪುಟ್ಟರಾಜು ಅವರು ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಪೋಷಕರಾಗಿದ್ದು, ತಾಯಿ ಹೃದಯದ ವ್ಯಕ್ತಿತ್ವದ ನಾಯಕರಿಗೆ ತೇಜೋವಧೆ ಮಾಡುವುದು ಸಮಂಜಸವಲ್ಲ ಎಂದು ತಿರುಗೇಟು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಸಿ.ಮಾದಪ್ಪ, ಮುಖಂಡರಾದ ಬೆಟ್ಟಸ್ವಾಮಿ, ಬಾಲರಾಜು, ಬದ್ರಿ ನಾರಾಯಣ್, ಕೃಷ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!