Thursday, September 19, 2024

ಪ್ರಾಯೋಗಿಕ ಆವೃತ್ತಿ

ಸೃಷ್ಟಿಯ ಸಹಜತೆ ಮತ್ತು ವಿಸ್ಮಯ…..

✍️ ವಿವೇಕಾನಂದ ಎಚ್.ಕೆ 

ಅಲೆಗ್ಸಾಂಡರ್ ದಿ ಗ್ರೇಟ್ ‌ವಿಶ್ವ ಗೆಲ್ಲುವ ಕನಸಿನ ಚಕ್ರವರ್ತಿ ರೋಗಕ್ಕೆ ಬಲಿಯಾದ….

ಶಾಂತಿ ದೂತ ಅಹಿಂಸೆಯ ಪ್ರತಿಪಾದಕ ಗಾಂಧಿ ಗುಂಡೇಟಿಗೆ ಹತ್ಯೆಯಾದರು….

ಸಮಾನತೆಯ ಶ್ರೇಷ್ಠ ಹರಿಕಾರ ಬಸವಣ್ಣ ಕೊಲೆಯಾಗಿರಬಹುದು ಅಥವಾ ಆತ್ಮಹತ್ಯೆಗೆ ಶರಣಾದರು…….

ಬೃಹತ್ ದೇಶದ ಬಲಿಷ್ಠ ಪ್ರಧಾನಿ ಇಂದಿರಾಗಾಂಧಿ ಅಂಗರಕ್ಷಕರ ಗುಂಡಿಗೆ ಬಲಿಯಾದರು…

ಆಧ್ಯಾತ್ಮದ ಮೇರು ಶಿಖರ, ಕಾಳಿ ಮಾತೆಯೊಂದಿಗೆ ಸಂಪರ್ಕ ಸಾಧಿಸಿದ್ದರು ಎಂದು ಹೇಳಲಾದ ರಾಮಕೃಷ್ಣ ಪರಮಹಂಸರು ಗಂಟಲು ಕ್ಯಾನ್ಸರ್‌ ಗೆ ಬಲಿಯಾದರು…

ಅದ್ಬುತ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಚಿಕ್ಕ ವಯಸ್ಸಿನಲ್ಲೇ ನೇಣುಗಂಬ ಏರಿದರು….

ನರರಾಕ್ಷಸ ಜರ್ಮನಿಯ ಅಡಾಲ್ಫ್ ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡ….

ಅಭಿಮಾನಿಗಳ ಆರಾಧ್ಯದೈವ ಆರೋಗ್ಯ ವಂತ ಪುನೀತ್ ರಾಜ್‍ಕುಮಾರ್ ಕ್ಷಣಾರ್ಧದಲ್ಲಿ ಇಲ್ಲವಾದರು…

ಅತ್ಯಂತ ಬಲಿಷ್ಠ ವ್ಯಕ್ತಿ ಬ್ರೂಸ್‌ ಲೀ ಸಹ ಕೊಲೆಯಾದರು…

ಭಾರತದ ಬಲಿಷ್ಠ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು…..

ಎಷ್ಟೊಂದು ಸಹಜತೆ ಎಷ್ಟೊಂದು ವಿಸ್ಮಯ……..

ಕೊಲೆ ಪಾತಕ ದಾವೂದ್ ಇಬ್ರಾಹಿಂ ಇನ್ನೂ ಬದುಕಿದ್ದಾನೆ…..

ವಿಕೃತ ಕಾಮಿ ಕೊಲೆಗಡುಕ ಉಮೇಶ್ ರೆಡ್ಡಿ ಇನ್ನೂ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾನೆ…..

ಸುಮಾರು 16 ವರ್ಷಗಳಷ್ಟು ದೀರ್ಘಕಾಲ ಸರ್ಕಾರ ಬಲವಂತವಾಗಿ ಮೂಗಿನ ಮೂಲಕ ನೀಡಿದ ಗ್ಲುಕೋಸ್ ಅನ್ನು ಮಾತ್ರ ಸೇವಿಸಿ ಉಪವಾಸ ಸತ್ಯಾಗ್ರಹ ಮಾಡಿದ ಮಣಿಪುರದ ಶರ್ಮಿಳಾ ಇರೋಮ್ ಈಗಲೂ ತನ್ನ ಕುಟುಂಬದೊಂದಿಗೆ ಆರೋಗ್ಯವಾಗಿದ್ದಾರೆ.

90 ವರ್ಷಕ್ಕಿಂತ ಹೆಚ್ಚಿನ ಅನೇಕ ಅನಾಥ ಭಿಕ್ಷುಕರು ಈಗಲೂ ಬಸ್ ರೈಲು ನಿಲ್ದಾಣಗಳಲ್ಲಿ ಜೀವಂತವಿದ್ದಾರೆ…

ಅತ್ಯಂತ ಒತ್ತಡದ ಬದುಕಿನ ಅನೇಕ ರಾಜಕಾರಣಿಗಳು 80 ವಯಸ್ಸಿನ ನಂತರವೂ ಬಹಳಷ್ಟು ಚಟುವಟಿಕೆಯಿಂದ ಮಹತ್ವಾಕಾಂಕ್ಷೆಯಿಂದ ಈಗಲೂ ಅಧಿಕಾರ ದಾಹ ಹೊಂದಿದ್ದಾರೆ…..

ಬಿಸಿಲು ಚಳಿ ಗಾಳಿಯಲ್ಲಿ ಹೊಲದಲ್ಲಿ ದುಡಿಯುತ್ತಾ, ಹಸಿವಾದಾಗ ಮಾತ್ರ ಸಿಕ್ಕಿದ್ದನ್ನು ತಿನ್ನುತ್ತಾ ಆಸ್ಪತ್ರೆಗಳಿಗೆ ಅಲೆದಾಡದೆ 90 ರ ನಂತರವೂ ಆರಾಮವಾಗಿರುವ ರೈತರು ಹಳ್ಳಿಗಳಲ್ಲಿ ಈಗಲೂ ವಾಸಿಸುತ್ತಿದ್ದಾರೆ…….

ಮೋರಿಗಳಲ್ಲಿ, ಕೊಳಚೆ ಗುಂಡಿಗಳಲ್ಲಿ, ಪಾಯಿಖಾನೆಗಳಲ್ಲಿ ಯಾವುದೇ ರಕ್ಷಾಕವಚ ಇಲ್ಲದೆ ಕೆಲಸ ಮಾಡುತ್ತಾ ಇದ್ದರು ರೋಗ ಮುಕ್ತರಾಗಿ 80 ವಯಸ್ಸಿನ ನಂತರವೂ ಆರೋಗ್ಯವಾಗಿರುವ ಅಜ್ಜಂದಿರು ಈಗಲೂ ಇದ್ದಾರೆ….

ಬಹುಶಃ ಸೃಷ್ಟಿಯ ಈ ವೈವಿಧ್ಯತೆಯೇ ಅಮೋಘ ಅದ್ಬುತ ಕುತೂಹಲ ಭರಿತ ಮತ್ತು ಕಠೋರ ಸತ್ಯ….

ಏಕೆಂದರೆ……

ಸರಳ – ಸಹಜ – ಸಾಮಾನ್ಯ‌ – ಸಾರ್ವತ್ರಿಕ ವಿಷಯಗಳಿಗೆ ಅನ್ವಯಿಸಿ ಮಾತ್ರ,…….

ನಮ್ಮೆಲ್ಲರ ಬದುಕಿನ ಆಯಸ್ಸು ……

ನೀವು ಮಹಾನ್ ದೈವಭಕ್ತರಾಗಿದ್ದರೂ ನಿಮ್ಮ ಆಯಸ್ಸು ಸುಮಾರು 60 ರಿಂದ 80 ,

ನೀವು ಉಗ್ರ ದೈವ ವಿರೋಧಿಯಾಗಿದ್ದರೂ ನಿಮ್ಮ ಆಯಸ್ಸು ಸುಮಾರು ಇಷ್ಟೆ,

ನೀವು ಅತ್ಯುಗ್ರ ಯೋಗ ಧ್ಯಾನದ ಮಹರ್ಷಿಗಳಾಗಿದ್ದರೂ ಬದುಕುವುದು ಇಷ್ಟೆ,

ನೀವು ಲಫಂಗ – ವಂಚಕ – ದುಷ್ಟರಾಗಿದ್ದರೂ ನಿಮ್ಮ ಆಯಸ್ಸು ಇಷ್ಟೆ,

ನೀವು ಗಿಡಮೂಲಿಕೆ – ಸಸ್ಯಾಹಾರ – ಆಯುರ್ವೇದದ ರೀತಿಯಲ್ಲಿ ಆಹಾರ ಸೇವಿಸಿದರೂ ಅಷ್ಟೆ,

ನೀವು ಸಿಕ್ಕಸಿಕ್ಕ ಪ್ರಾಣಿ – ಪಕ್ಷಿ – ಮಾಂಸಾಹಾರ ತಿಂದರೂ ಅಷ್ಟೇ ಆಯಸ್ಸು.

ನೀವು ವಿಶ್ವದ ಬಹುದೊಡ್ಡ ಶ್ರೀಮಂತರಾದರೂ ಅಷ್ಟೆ,

ನೀವು ಬೀದಿಯಲ್ಲಿ ಅಲೆದು ತಿನ್ನುವ ಭಿಕ್ಷುಕರಾದರೂ ಅಷ್ಟೆ,

ನೀವು ಪ್ರಖ್ಯಾತ – ಪ್ರಖಾಂಡ – ಸಕಲಕಲಾವಲ್ಲಭ – ಮೇಧಾವಿಗಳಾದರೂ ಅಷ್ಟೆ,

ನೀವು ನನ್ನಂತ ದಡ್ಡ – ಅಪ್ರಯೋಜಕರಾದರೂ ಬದುಕುವುದು ಅಷ್ಟೆ ,

ನೀವು ಯಾವ ಧರ್ಮ – ಜಾತಿ – ಭಾಷೆ – ಲಿಂಗ – ಪ್ರದೇಶದವರಾದರೂ ಅಷ್ಟೆ,

ನೀವು ಮನುಷ್ಯನ ಎಲ್ಲಾ ಖಾಯಿಲೆಗಳನ್ನು ಗುಣಪಡಿಸುವ ವೈಧ್ಯರಾದರೂ ಅಷ್ಟೆ,

ನೀವು ಬುದ್ದ – ಯೇಸು – ಪೈಗಂಬರ್ – ಗುರುನಾನಾಕ್ – ಶಂಕರಾಚಾರ್ಯ – ಬಸವ – ವಿವೇಕಾನಂದ – ಗಾಂಧಿ ಅಂಬೇಡ್ಕರ್ ಆಗಿದ್ದರೂ ಅಷ್ಟೆ,

ನೀವು ನರೇಂದ್ರ ಮೋದಿ – ಸಿದ್ದರಾಮಯ್ಯ – ಯಡಿಯೂರಪ್ಪ – ಕುಮಾರಸ್ವಾಮಿ – ಮಮತಾ ಬ್ಯಾನರ್ಜಿ – ಮಾಯಾವತಿ – ರಾಹುಲ್ ಗಾಂಧಿ ಆಗಿದ್ದರೂ ಅಷ್ಟೆ,

ನೀವು ಯಂಕ – ಸೀನ – ನಾಣಿ – ಲಕ್ಷ್ಮೀ – ಕಮಲ – ವಿಮಲ – ನಿರ್ಮಲ ಆಗಿದ್ದರೂ ಅಷ್ಟೆ,

ನೀವು ಒಮ್ಮೆಯೂ ಸುಳ್ಳಾಡದ – ಮೋಸ ಮಾಡದ – ಅತ್ಯಂತ ಕರುಣಾಮಯಿ ಆಗಿದ್ದರೂ ಅಷ್ಟೆ,

ನೀವು ಭ್ರಷ್ಟ – ವಂಚನೆ – ಸುಳ್ಳಗಳನ್ನೇ ಜೀವನ ಮಾಡಿಕೊಂಡಿದ್ದರೂ ಅಷ್ಟೇ ನಿಮ್ಮ ಆಯಸ್ಸು……

ಇದೇ ಸೃಷ್ಟಿಯ ಅದ್ಭುತ – ಆಶ್ಚರ್ಯಕರ ನಿಯಮ,

ಹುಟ್ಟು ಸಾವಿನಲ್ಲಿ ಸೃಷ್ಟಿ ಮಾಡಿರುವ ಸಮಾನತೆ ಇದು,

ಹಾಗಾದರೆ ಜೀವನ ಮಟ್ಟಗಳಲ್ಲಿ ವ್ಯತ್ಯಾಸ ಇಲ್ಲವೇ ?

ಖಂಡಿತ ಇದೆ……

ಕೆಲವರು ಅತ್ಯುತ್ತಮ ಮಟ್ಟದ ಸುಖಕರ ಜೀವನ ನಡೆಸಿದರೆ,

ಇನ್ನೂ ಕೆಲವರು ಅತ್ಯಂತ ಕೆಟ್ಟ – ಕಷ್ಟಕರ ಜೀವನ ಸಾಗಿಸುತ್ತಾರೆ,

ಇಲ್ಲೂ ಇರುವ ಮತ್ತೊಂದು ಆಶ್ಚರ್ಯಕರ ಸಂಗತಿ,

ವ್ಯಕ್ತಿಯ ಮಾನಸಿಕ ಸ್ಥಿತಿ….

ಅಜ್ಞಾನ‌ – ಮೌಡ್ಯ – ನಂಬಿಕೆ – ಭಕ್ತಿ – ತಿಳಿವಳಿಕೆ ಎಂಥಾ ಬಡವರಿಗೂ ಸ್ವಲ್ಪ ನೆಮ್ಮದಿ ನೀಡಿದರೆ,

ಹಣ – ಅಧಿಕಾರ – ಅರಿವು – ಆರೋಗ್ಯ – ಎಲ್ಲಾ ಇದ್ದರೂ ನೆಮ್ಮದಿ ಇಲ್ಲದವರ ಬದುಕೂ ಇಲ್ಲಿದೆ,

ಬದುಕಿಗೆ ನಿರ್ದಿಷ್ಟವಾದ ಮಾನದಂಡಗಳು ಇಲ್ಲವೆನಿಸುತ್ತದೆ,

ಕೆಲವು ಅಸಹಜ ಖಾಯಿಲೆ – ಅಪಘಾತ – ಕೊಲೆ – ಪ್ರಾಕೃತಿಕ ವಿಕೋಪ ಇತ್ಯಾದಿಗಳನ್ನು ಹೊರತುಪಡಿಸಿದರೆ
ಮನುಷ್ಯನ ಆಯಸ್ಸು ಸುಮಾರು ಇಷ್ಟೇ ಎಲ್ಲಾ ಕಡೆಯೂ.

ಹಾಗಾದರೆ ಇದಕ್ಕೆ ಉತ್ತರ – ಪರಿಹಾರ ?

ಅವರವರ ತಿಳಿವಳಿಕೆಯ ವ್ಯಾಪ್ತಿಗೆ……

ಅತಿಮಾನುಷ ಶಕ್ತಿಯ ಪ್ರತಿಕ್ರಿಯೆ ನೀಡದೆ,
ನಿಮ್ಮ ಇಂದಿನ ವಾಸ್ತವಿಕ ಅರಿವಿನ ಮಿತಿಯಲ್ಲಿ ಮಾಹಿತಿ ಹಂಚಿಕೊಂಡರೆ ಸ್ವಲ್ಪ ಮಟ್ಟಿಗೆ ಅರ್ಥಮಾಡಿಕೊಳ್ಳಬಹುದು……….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!