Saturday, July 13, 2024

ಪ್ರಾಯೋಗಿಕ ಆವೃತ್ತಿ

ಮೇ.14 ರಂದು ಉಡುಪಿಯಲ್ಲಿ ಸಾಮರಸ್ಯ ನಡಿಗೆ

ಇಂದು ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಘಟನೆಗಳು ನಡೆಯುತ್ತಿವೆ. ದೇಶದ ಐಕ್ಯತೆ,ಸಾಮರಸ್ಯ ಹಾಳಾಗುತ್ತಿರುವ ಸಂದರ್ಭದಲ್ಲಿ ಶಾಂತಿ, ಸಹಬಾಳ್ವೆ ಸಾರುವ ಸಾಮರಸ್ಯ ನಡಿಗೆ ಮೇ. 14ರಂದು ಉಡುಪಿಯಲ್ಲಿ ನಡೆಯಲಿದೆ ಎಂದು ಕರ್ನಾಟಕ ಜನಶಕ್ತಿಯ ಸಂಚಾಲಕ ಸಿದ್ದರಾಜು ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜ್ಯಮಟ್ಟದ ಸಾಮರಸ್ಯ ನಡಿಗೆ ಸಹಬಾಳ್ವೆ ಸಮಾವೇಶಕ್ಕೆ ಮೇ. 14 ರ ಶನಿವಾರ ಮಧ್ಯಾಹ್ನ ಎರಡು ಗಂಟೆಗೆ ಉಡುಪಿಯ ಅಜ್ಜರಕಾಡು ಹುತಾತ್ಮ ಚೌಕದಲ್ಲಿ ವಿವಿಧ ರಾಜ್ಯ ಸಂಘಟನೆಗಳ ನಾಯಕರಿಂದ ದ್ವೇಷ ಕಳೆಯೋಣ- ಕೂಡಿ ಬಾಳೋಣ ಘೋಷಣೆಯೊಂದಿಗೆ ಚಾಲನೆ ನೀಡಲಾಗುವುದು ಎಂದರು.

ಇಂದು ದೇಶದಲ್ಲಿ ನಮ್ಮ ಪರಸ್ಪರ ನಂಬಿಕೆಯ ಬದುಕಿನಲ್ಲಿ, ಅಪನಂಬಿಕೆಯ ಬೀಜ ಬಿತ್ತಿ ದ್ವೇಷದ ವಾತಾವರಣ ಹುಟ್ಟು ಹಾಕುವ ಆತಂಕಕಾರಿ ಶಕ್ತಿಗಳ ಕೈವಾಡ ಹೆಚ್ಚುತ್ತಿದೆ. ಈ ಮೂಲಕ ನಮ್ಮ ನಾಡಲ್ಲಿ ಶಾಂತಿಯುತ, ಸಮಾನತೆಯ ಆಧಾರದ ಸೌಹಾರ್ದ ಬದುಕಿನ ಕನಸು ನಾಶವಾಗಿ, ಒಬ್ಬರು ಮತ್ತೊಬ್ಬರನ್ನು ದ್ವೇಷಿಸುವ ವಾತಾವರಣ ನಿರ್ಮಾಣವಾಗಿದ್ದು ಇದನ್ನು ನಾವು ಅರಿಯಬೇಕು ಮತ್ತು ತಡೆಯಬೇಕು. ತಡೆಯದೇ ಹೋದಲ್ಲಿ ಜಾತಿ-ಮತ-ಲಿಂಗ ದಬ್ಬಾಳಿಕೆಯ ಸಮಾಜದಲ್ಲಿ ಬದುಕಬೇಕಾಗುತ್ತದೆ ಎಂದರು.

ರೈತ ಸಂಘದ ಮಧುಚಂದನ್ ಮಾತನಾಡಿ, ಇಂದು ದೇಶದಲ್ಲಿ ಕೋಮುವಾದಿ ಶಕ್ತಿಗಳು ಜಾತಿ-ಧರ್ಮಗಳ ನಡುವೆ ಸಾಮರಸ್ಯ ಕೆಡಿಸುತ್ತಿವೆ. ಸಹಬಾಳ್ವೆಯ ಒಂದು ಸಮಾಜವನ್ನು ಕಟ್ಟುವತ್ತ ಈ ಸೌಹಾರ್ದ ನಡಿಗೆ-ಸಹಬಾಳ್ವೆ ಸಮಾವೇಶವು ಮಹತ್ವದ ಹೆಜ್ಜೆಯಾಗಿದೆ ಎಂದರು.

14ರ ಸಂಜೆ 4 ಗಂಟೆಗೆ ಕ್ರಿಶ್ಚಿಯನ್ ಶಾಲೆ ಮೈದಾನದಲ್ಲಿ ಸಹಬಾಳ್ವೆ ಸಮಾವೇಶ ನಡೆಯಲಿದೆ. ಖ್ಯಾತ ಗಾಯಕಿ ಎಂ.ಡಿ. ಪಲ್ಲವಿಯವರ ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಸಮಾವೇಶದಲ್ಲಿ ವಿವಿಧ ಧರ್ಮಗುರುಗಳಾದ ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದೇವರು, ಪುತ್ತೂರು ಮಲಂಕರ ಕ್ಯಾಥೋಲಿಕ್ ಚರ್ಚ್ ಬಿಷಪರಾದ ವರ್ಗಿಸ್ ಮಾರ್ ಮಕರಿಯೊಸ್, ಮೈಸೂರು ಬಸವಜ್ಞಾನ ಮಂದಿರದ ಡಾ. ಮಾತೆ ಬಸವಾಂಜಲಿ ದೇವಿ, ಲೋಕ ರತ್ನ ಬುದ್ಧ ವಿಹಾರದ ಭಂತೆ ಮಾತೆ ಮೈತ್ರಿ, ಮೌಲಾನ ಇಫ್ತಿಕಾರ್ ಅಹಮದ್ ಕಾಸ್ಮಿ, ಫಾದರ್ ಚೇತನ್ ಲೋಬೋ, ಜ್ಞಾನಿ ಬಲರಾಜ್ ಸಿಂಗ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ವಿಶೇಷ ಅತಿಥಿಗಳಾಗಿ ಪ್ರಸಿದ್ಧ ಮಾನವ ಹಕ್ಕು ಹೋರಾಟಗಾರರು ಯೋಗೇಂದ್ರ ಯಾದವ್, ಕರ್ನಾಟಕ ಕ್ರೈಸ್ತ ಸಂಘ ಸಂಸ್ಥೆಗಳ ಅಂತರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ ರೊನಾಲ್ಡ್ ಕೊಲಾಸೋ, ನಿವೃತ್ತ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಮುಖ್ಯ ಅತಿಥಿಗಳಾಗಿ ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಮೋಹನ್ ರಾಜ್, ರೈತ ಮುಖಂಡರಾದ ಬಸವರಾಜಪ್ಪ,ಚಾಮರಸ ಮಾಲಿ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಜನಶಕ್ತಿಯ ರಾಜ್ಯ ಸಮಿತಿ ಸದಸ್ಯೆಯಾದ ಪೂರ್ಣಿಮಾ, ನಮ್ಮ ದೇಶವು ಸರ್ವಧರ್ಮಗಳ ಒಂದು ಶಾಂತಿಯ ತೋಟವಾಗಿದ್ದು ಹಲವಾರು ವ‍ರ್ಷಗಳಿಂದ ಶಾಂತಿ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಇಂತಹ ಒಂದು ಸಂದರ್ಭದಲ್ಲಿ ದಿನಬೆಳಗಾದರೆ ಗೊಂದಲಗಳು, ಗಲಾಟೆಗಳು, ಗಲಭೆಗಳು ನಡೆದುಕೊಂಡು ಬರುತ್ತಿದೆ.

ಈ ನಾಡಿನಲ್ಲಿ ಬದುಕುತ್ತಿರುವ ಪ್ರತಿಯೊಬ್ಬರಿಗೂ ಜಾತಿ ಧರ್ಮ, ಲಿಂಗ ಎಲ್ಲವನ್ನೂ ಮೀರಿದಂತಹ ಪ್ರತಿಯೊಂದು ಜೀವಿಗೂ ಕೂಡಾ ಸಮಾನವಾಗಿ ಬದುಕುವಂತಹ ಅವಕಾಶದ ಹಕ್ಕು ಎಲ್ಲರಿಗೂ ಇದೆ. ನಾವೆಲ್ಲ ಅಣ್ಣ-ತಮ್ಮಂದಿರ ರೀತಿಯಲ್ಲಿ, ಸಹೋದರತೆಯಿಂದ ಬದುಕುತ್ತಿರುವಂತಹ ಸಾಮರಸ್ಯವನ್ನು ಕದಡುವಂತಹ ಯಾವುದೇ ಶಕ್ತಿಗಳಿಗೆ ಮುಂದಿನ ದಿನದಲ್ಲಿ ಅವಕಾಶ ಇರೋದಿಲ್ಲ, ಕದಡಿದಷ್ಟು ಕೂಡಾ ನಾವು ಗಟ್ಟಿಯಾಗುತ್ತಾ ಹೋಗುತ್ತೇವೆ. ಬಿರುಕನ್ನು ಮೂಡಿಸಿದಷ್ಟು ನಾವು ಒಂದಾಗುತ್ತೇವೆ ಎನ್ನುವಂತಹ ಸಂದೇಶ ಕೊಡುವುದಕ್ಕೆ ಉಡುಪಿ ಜಿಲ್ಲೆಯಲ್ಲಿ ಸಾಮರಸ್ಯ ನಡಿಗೆ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದರು.

ಈ ನಾಡನ್ನು ಒಡೆಯುತ್ತಿರುವುದು ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೋಮುಶಕ್ತಿಗಳು ಜಾತಿ-ಧರ್ಮದ ಹೆಸರಲ್ಲಿ ಜನರನ್ನು ಒಡೆಯುತ್ತಿದ್ದಾರೆ. ಈ ದೇಶಕ್ಕೆ ಬೇಕಿರುವುದು, ಜಾತಿಯ ರಾಜಕಾರಣವು ಅಲ್ಲಾ, ಧರ್ಮದ ರಾಜಕಾರಣವು ಅಲ್ಲಾ. ಈ ದೇಶವನ್ನು ಅಭಿವೃದ್ದಿಯ ಪಥದ ಕಡೆಗೆ ತೆಗೆದುಕೊಂಡು ಹೋಗುವ ರಾಜಕಾರಣ ಇಂದಿಗೆ ಅಗತ್ಯವಿರುವುದು, ಜನರ ನೆಮ್ಮದಿಯನ್ನು ಹಾಳು ಮಾಡುತ್ತಿರುವ ಯಾವುದೇ ಶಕ್ತಿಗಳನ್ನು ನಾವು ವಿರೋಧಿಸುತ್ತೇವೆ ಎಂದು ಉತ್ತರಿಸಿದರು.

ಈ ಕಾರ್ಯಕ್ರಮಕ್ಕೆ ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯಿಂದ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಲಿದ್ದು, ನಾಡಿನ ಪ್ರಗತಿಪರ ಚಿಂತಕರು, ಬುದ್ದಿಜೀವಿಗಳು, ಹೋರಾಟಗಾರರು ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ಕರ್ನಾಟಕ ಜನಶಕ್ತಿ ಸಂಘಟನೆಯ ಹಾಗೂ ಇತರೆ ಪ್ರಗತಿಪರ ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಎಸ್ಡಿಪಿಐನ ಮಹಮದ್ ತಾಹಿರ್, ಸೈಯದ್ ಇಕ್ಬಾಲ್, ರೈತಸಂಘದ ಶಿವಳ್ಳಿ ಚಂದ್ರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!