Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಡವರ ಜೀವಕ್ಕೆ ಇಲ್ಲಿ ಬೆಲೆಯೇ ಇಲ್ಲ

✍️ ನಾಗೇಶ್ ಎನ್. 


  • ಬೀದಿಗೆ ಬಂದ ಕಬ್ಬು ಕಡಿಯುವ ಕೂಲಿಯಾಳುಗಳ ಬದುಕು

  • ಹೊಟ್ಟೆ ಪಾಡಿಗೆ ವಲಸೆ ಬಂದು ಪ್ರಾಣ ಕಳೆದು ಕೊಂಡ ಅಮಾಯಕರು

ಪ್ರಸ್ತುತ ನಮ್ಮ ದೇಶದಲ್ಲಿ ಬಡವರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಬಡವರು ಸತ್ತರೂ ಕೂಡ ಕೇಳಲು ಯಾರು ಮುಂದೆ ಬರೋಲ್ಲ, ಬಡವರನ್ನು ಕಡೆಗಣಿಸುವ ಈ ಸಮಾಜ, ಈ ವ್ಯವಸ್ಥೆ ನೋಡಿದರೆ ಆಕ್ರೋಶ ಉಕ್ಕಿ ಬರುತ್ತದೆ.

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ರಾಜನಹಳ್ಳಿಯ ಬಳಿ ಕಳೆದ ಸೋಮವಾರ (ಅ.31) ಸಂಜೆ 6 ಗಂಟೆ ಸುಮಾರಿಗೆ ಕಬ್ಬು ಕಟಾವು ಮಾಡುವ 30 ಜನರನ್ನು ತುಂಬಿಕೊಂಡು ಬರುತ್ತಿದ್ದ ಟಾಟಾ ಏಸ್ ಮುಗುಚಿದ್ದರಿಂದ ಶಶಿಕಲಾ ಎಂಬ 20 ವರ್ಷದ ಯುವತಿ ಮೃತಪಟ್ಟಿದ್ದಳು.

ಅದಾದ ಮಾರನೇ ದಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಲಕ್ಷ್ಮಣ ಎಂಬ 23 ವರ್ಷದ ಯುವಕ ಮತಪಟ್ಟ. ಅದಾಗಿ ಐದು ದಿನಗಳ ನಂತರ ಕೆ.ಆರ್.ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸಿ ಇನ್ನೂ ಆಗಲ್ಲ ಎಂದು 10 ವರ್ಷದ ಮುಗ್ಧ ಕಂದಮ್ಮ ಅಂಜಲಿ ಇಂದು ಮಧ್ಯಾಹ್ನ 12.30 ರಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರೂ ಯಾವುದೇ ಜನಪ್ರತಿನಿಧಿಗಳಾಗಲಿ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಯಾಗಲಿ ಹೋಗದಿರುವುದು ಬಡವರ ಜೀವಕ್ಕೆ ಯಾವ ಬೆಲೆಯೂ ಇಲ್ಲವೆಂಬುದನ್ನು ಎತ್ತಿ ತೋರಿಸುತ್ತದೆ.

ಕ್ರೀಡಾ ಸಚಿವ ನಾರಾಯಣಗೌಡರ ಕ್ಷೇತ್ರದಲ್ಲಿರುವ ಕೋರಮಂಡಲ್ ಶುಗರ್ ಕಾರ್ಖಾನೆಯ ವ್ಯಾಪ್ತಿಯಲ್ಲಿರುವ ಕಬ್ಬು ಕಡಿಯಲು ಕೂಲಿ ಕಾರ್ಮಿಕರಾಗಿ ದೂರದ ಬಳ್ಳಾರಿ, ಗಂಗಾವತಿ, ಹೊಸಪೇಟೆಯ ವಿವಿಧ ತಾಂಡಾಗಳಿಂದ ಬಂದಿದ್ದ ಮೂವರು ಮುಗ್ಧರು ಪ್ರಪಂಚವನ್ನು ಇನ್ನೂ ಕಂಡಿರಲೇ ಇಲ್ಲ.

ದೂರದ ಊರುಗಳಿಂದ ಕಬ್ಬು ಕಡಿಯಲು ಬಂದ ಮೂವರು ಮಕ್ಕಳು ಸಾವನ್ನಪ್ಪಿದ್ದರೂ ಅವರನ್ನು ಹೋಗಿ ನೋಡುವಷ್ಟು ಮಾನವೀಯತೆ ಇಲ್ಲಿನ ಜನಪ್ರತಿನಿಧಿಗಳಿಗಿಲ್ಲ. ಯಾಕೆಂದರೆ ಅವರ್ಯಾರು ಕೆ.ಆರ್.ಪೇಟೆಯ ಅಥವಾ ಜಿಲ್ಲೆಯ ಮತದಾರರಲ್ಲ, ಆಸ್ತಿವಂತರಂತೂ ಮೊದಲೇ ಅಲ್ಲ. ಹೀಗಿರುವಾಗ ಅವರನ್ನು ನೋಡಿ ಏನು ಪ್ರಯೋಜನ? ಆದರೂ ಸತ್ತವರಿಗೆ ಪರಿಹಾರ, ಚಿಕಿತ್ಸೆಯ ವೆಚ್ಚವನ್ನು ನೀಡಲಾಗುವುದು ಎಂದು ಹೇಳಿ ಸಚಿವ ನಾರಾಯಣಗೌಡ ಕೈ ತೊಳೆದುಕೊಂಡಿದ್ದಾರೆ.

2.50 ಲಕ್ಷ ರೂ. ಅಷ್ಟೇ

ದೂರದ ಹೊಸಪೇಟೆ ಜಿಲ್ಲೆಯ ರಾಂಪುರ ತಾಂಡದ ಶಶಿಕಲಾ, ಗಂಗಾವತಿಯ ವಿರೂಪಾಪುರ ತಾಂಡಾದ ಲಕ್ಷ್ಮಣ, ಬಳ್ಳಾರಿಯ ಬಸರಹಳ್ಳಿ ತಾಂಡಾದ ಅಂಜಲಿ ಮೂವರಿಗೂ ಕೋರಮಂಡಲ್ ಶುಗರ್ಸ್ ಕಾರ್ಖಾನೆ ನೀಡಿರುವುದು ಕೇವಲ ತಲಾ 2.50 ಲಕ್ಷ ಹಾಗೂ ಊರಿಗೆ ತೆಗೆದುಕೊಂಡು ಹೋಗಿ ಶವ ಸಂಸ್ಕಾರ ಮಾಡಲು 10 ಸಾವಿರ ರೂಪಾಯಿಗಳನ್ನು ನೀಡಲಾಗಿದೆ.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ 1 ಲಕ್ಷ ರೂ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಶಿವರಾಜ್ ಸೋಮನಾಯಕ್ ನುಡಿ ಕರ್ನಾಟಕ.ಕಾಮ್ ಗೆ ತಿಳಿಸಿದರು. ಅವರು ಇಂದು ಅಂಜಲಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಊರಿಗೆ ಕಳುಹಿಸುವರೆಗೂ ಎಲ್ಲವನ್ನೂ ನೋಡಿಕೊಂಡರು.

ಇನ್ನು ಪ್ರಪಂಚವನ್ನು ನೋಡಬೇಕಾಗಿದ್ದ ಮೂವರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಾ ಬೇಕಾದ ಜಿಲ್ಲಾಡಳಿತ, ತಾಲೂಕು ಆಡಳಿತ, ಜನಪ್ರತಿನಿಧಿಗಳು ಹೋಗದಿರುವುದು, ಇದೇನಾ ಪ್ರಜಾಪ್ರಭುತ್ವ ಎಂದು ಪ್ರಶ್ನಿಸುವಂತಾಗಿದೆ.

ಇನ್ನು ಕೆ.ಆರ್. ಆಸ್ಪತ್ರೆಯಲ್ಲಿ 10 ವರ್ಷದ ಬಾಲಕಿ ಆಶಾ ಗಂಭೀರವಾಗಿ ಗಾಯಗೊಂಡಿದ್ದು ನರಳುತ್ತಾ ಮಲಗಿದ್ದಾಳೆ. ಗೀತಾ, ಕಾದಂಬರಿ, ಇವರಿಗೆಲ್ಲ ತಲೆಗೆ,ಮೈ-ಕೈಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿದ್ದಾರೆ. ಒಂದು ವರ್ಷದ ಮಗು ಅಪ್ಪು ಕಾಲು ಮುರಿದಿದೆ. ಈ ರೀತಿ ಸುಮಾರು ಇನ್ನು 19 ಜನ ಕೆ.ಆರ್. ಆಸ್ಪತ್ರೆಯಲ್ಲಿ ಗಂಭೀರ ಗಾಯಗಳೊಂದಿಗೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಷ್ಟಿದ್ದರೂ ಕೂಡ ಜಿಲ್ಲಾಡಳಿತ ಅವರತ್ತ ತಿರುಗಿ ನೋಡದಿರುವುದು, ಈ ವ್ಯವಸ್ಥೆಯ ಬಗ್ಗೆ ಆಕ್ರೋಶ ಹುಟ್ಟುವಂತೆ ಮಾಡುತ್ತಿದೆ ಎಂದು ತಾಂಡಾದ ಯುವಕನೊಬ್ಬ ನೊಂದು ನುಡಿಯುತ್ತಾನೆ.

ಏನು ಮಾಡುವುದು ಬಡವರಾಗಿ ಹುಟ್ಟಿದ್ದೇವೆ, ಬಡವರಾಗಿ ಸಾಯ್ತೀವಿ. ನಮಗೆ ಜಮೀನು ಇಲ್ಲ,ಕೂಲಿ ಮಾಡದಿದ್ದರೆ ಹೊಟ್ಟೆ ಕೇಳಬೇಕಲ್ಲ. ಅದಕ್ಕೆ ದೂರದ ಬಳ್ಳಾರಿಯಿಂದ ಇಲ್ಲಿಗೆ ಬಂದಿದ್ದೇವೆ ಎಂದು ಕಬ್ಬು ಕಡಿಯಲು ಜನರನ್ನು ಕರೆತಂದಿರುವ ಚಂದ್ರನಾಯಕ್ ಎಂಬ ಮೇಸ್ತ್ರಿ ಗೋಳಾಡುತ್ತಾರೆ.
ಕೆ.ಆರ್.ಆಸ್ಪತ್ರೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರಿಗೆಉತ್ತಮ ಚಿಕಿತ್ಸೆ ಕೊಡಿಸುವಂತೆ ಸಚಿವರು,ಜಿಲ್ಲಾಡಳಿತ ಕ್ರಮ ವಹಿಸಲಿ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!