Friday, September 20, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕವನ್ನು ಆಕ್ರಮಿಸುತ್ತಿರುವ ಉತ್ತರದವರು

✍️ ಬಿ ಟಿ ವಿಶ್ವನಾಥ್
    ಪ್ರಗತಿಪರ ವಕೀಲರು

ಇತ್ತಿತ್ತಾ ಬಾ ಅಂದ್ರೆ ಇದ್ದದ್ದು ಕಿತ್ಕಂಡ್ರಂತೆ,ಅನ್ನುವ ಪರಿಸ್ಥಿತಿ ನಮ್ಮ ಕನ್ನಡಿಗರದ್ದಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಜನ ದಕ್ಷಿಣದ ದೇವತೆಗಳಾದ ಮಾರಮ್ಮ ಚೌಡಮ್ಮ ಮುಳ್ಕಟ್ಟಮ್ಮ ಈರಭದ್ರ ಇವರನ್ನೆಲ್ಲ ಬಿಟ್ಟು ಉತ್ತರದ ದೇವರುಗಳನ್ನು ನಡು ಮನೆಯೊಳಕ್ಕೆ ಬಿಟ್ಟುಕೊಳ್ಳುತ್ತಿರುವುದರಿಂದ, ಮತ್ತುಹಿಂದಿ ಹೇರಿಕೆಯ ಪರಿಣಾಮ ಬಹಳ ಗಂಭೀರ ಸ್ವರೂಪದ ಬದಲಾವಣೆಗೆ ಕಾರಣವಾಗುತ್ತಿದೆ.ಬಿಜೆಪಿ ಆಡಳಿತದಿಂದ ಉತ್ತರದರಾಜ್ಯಗಳು ಉದ್ದಾರವಾಗಿದ್ದರೆ, ಉದ್ಯೋಗದ ಭದ್ರತೆ,ಸಿಕ್ಕಿದ್ದರೆ ಅವರೆಲ್ಲ ಏಕೆ ಇಲ್ಲಿ ಪಾನಿಪುರಿ ಮಾರಲು ಬರುತ್ತಿದ್ದರು ಮಂಡ್ಯದ ಆಲೆ ಮನೆಗಳಲ್ಲಿ ಕೆಲಸ ಮಾಡಲು ಕಬ್ಬು ಕಡಿಯಲು ಇಲ್ಲಿನ ಸಣ್ಣ ಸಣ್ಣ ಹೋಟೆಲುಗಳಲ್ಲಿ ಕೆಲಸ ಮಾಡಲು ಬರುತ್ತಿದ್ದರು. ಇತ್ತತ್ತ ಬಾ ಅಂದ್ರೆ ಇದ್ದದ್ದು ಕಿತ್ಕಂಡ್ರು ಅನ್ನುವ ಸ್ಥಿತಿಕನ್ನಡಿಗರಿಗೆ ಬರುವ ದಿನಗಳು ದೂರವಿಲ್ಲ ಎನ್ನುವ ಆತಂಕವಿದೆ.

ಇನ್ನು ಹತ್ತೇ ವರ್ಷ ತಡೆಯಿರಿ. ನಮ್ಮ ಸಮಾಜದ ಮುಸ್ಲಿಮ್ ದ್ವೇಷದ ಮಂಪರು ತಾನಾಗೇ ಇಳಿಯಲಿದೆ. ಇಲ್ಲಿ ಸ್ಥಳೀಯ ವ್ಯಾಪಾರಿ ವರ್ಗ ತನ್ನ ಅಸ್ಥಿತ್ವ ಕಳೆದುಕೊಳ್ಳಲಿದೆ. ಯಾಕೆ ಅಂದ್ರೆ ಕರ್ನಾಟಕದ ಸಣ್ಣ ಗಾತ್ರದ ಪಟ್ಟಣಗಳನ್ನೂ ಬಿಡದೆ ಉತ್ತರದ ವ್ಯಾಪಾರಿ ವರ್ಗ ಆವರಿಸಿಕೊಳ್ತಿದೆ. ಅದು ಎಸ್ಟರ ಮಟ್ಟಿಗೆ ಬೆಳೆಯತ್ತೆ ಅಂದ್ರೆ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯನನ್ನೂ ಬಿಡದಂತೆ ಖರೀದಿಸಿ ಇಲ್ಲಿಯ ಭೂಮಿ ಮತ್ತು ವ್ಯಾಪಾರವನ್ನು ಕಬಳಿಸಲಿದೆ. ಮುಸ್ಲಿಂ ಸಮುದಾಯದ ಮೇಲೆ ದ್ವೇಷ ಸಾಧಿಸುತ್ತಲೇ ಪರಕೀಯರ ಗುಲಾಮರಾಗುವ ಕಾಲ ದೂರವಿಲ್ಲ. ಇದು ಎಸ್ಟರ ಮಟ್ಟಿನ ಬಿಕ್ಕಟ್ಟು ಸೃಷ್ಠಿಸುತ್ತದೆಂದರೆ ಅವರಿಲ್ಲದೆ ಬದುಕಲು ಸಾಧ್ಯವಿಲ್ಲ ಎನ್ನುವಷ್ಟು. ನಮ್ಮ ನಾಡು ನುಡಿ ಎಲ್ಲದರ ಮೇಲೂ ಹಿಡಿತ ಸಾಧಿಸಿ ಕರ್ನಾಟಕದ ಅಸ್ಥಿತ್ವವನ್ನೇ ಹೊಸಕುವಷ್ಟು. ಪರಸ್ಥಳದಿಂದ ಬಂದು ಮೂಲ ನಿವಾಸಿಗಳನ್ನೇ ಪರಕೀಯರನ್ನಾಗಿಸುವ ಗುಣ. ಈ ಕಾಲ ದೂರವಿಲ್ಲ. ಈಗಲೇ ಇದರ ಬಿಸಿ ತಟ್ಟ ತೊಡಗಿದೆ. ಒಂದು ಪಾನಿಪುರಿ ಅಂಗಡಿಯಿಂದ ಚಹಾದ ಅಂಗಡಿಯಿಂದ ಹಿಡಿದು ಜನಜೀವನಕ್ಕೆ, ರೇಷನ್ ಅಂಗಡಿ, ಗಿರವಿ, ಟಯ್ಲೆಟ್, ಕಬ್ಬಿಣ, ಸಿಮೆಂಟ್, ಹಾರ್ಡ್ ವೇರ್ ಹೀಗೆ ಅನಿವಾರ್ಯವಿರುವ ಎಲ್ಲಾ ವ್ಯಾಪಾರ ವ್ಯವಹಾರದಲ್ಲಿಯೂ ಬೇರೆಯವರದ್ದೆ ಪಾರುಪತ್ಯ ಸ್ಥಾಪಿತವಾಗುತ್ತಿದೆ.

ನಾನು ಅಚ್ಚರಿಯಿಂದ ಗಮನಿಸುತ್ತಿದ್ದೇನೆ; ಕಳೆದ ಕೇವಲ ಎಂಟು ವರ್ಷದಲ್ಲಿ ಮಾಯಕ ಮಂತ್ರ ನಡೆಯಿತೋ ಎನ್ನುವ ಹಾಗೆ ಊರಿನ‌ ಓಣಿ ಓಣಿಗಳಲ್ಲಿ ಉತ್ತರದ ರಾಜ್ಯಗಳ, ಅಂಗಡಿಗಳು ಆವರಿಸಿವೆ. ಈ ವ್ಯಾಪಾರದ ಒತ್ತುವರಿ ಸಮರೋಪಾದಿ ತಲುಪಿದೆ. ನಾವಿನ್ನೂ ತಲತಲಾಂತರದಿಂದ ಆರಕ್ಕೇರದೆ ಮೂರಕ್ಕಿಳಿಯದೆ ನಮ್ಮ ವ್ಯಾಪಾರ ವಹಿವಾಟಿನ ಜೀವಾಳವಾಗಿದ್ದ ಮುಸ್ಲಿಮರನ್ನು ದ್ವೇಷಿಸುತ್ತಾ ಮೈ ಮರೆತಿದ್ದೇವೆ. ಅಥವಾ ಮೈ ಮರೆಯುವಂತೆ ಮಾಡಲಾಗಿದೆ. ಮುಸ್ಲಿಮರ ಅಂಗಡಿಯಲ್ಲಿ ಸಾಮಾನು ಸರಂಜಾಮು ಖರೀದಿಸಬಾರದು, ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂಬೆಲ್ಲಾ ಚಿತಾವಣೆಗಳ ಹಿಂದಿರುವುದು ಹಿಂದಿ ವ್ಯಾಪಾರೀ ಲಾಭಿ ಎನ್ನುವುದು ಕನ್ನಡಿಗರಿಗೇಕೊ ಅರ್ಥವಾಗುತ್ತಿಲ್ಲ. ಇದು ಸಾಂಸ್ಕೃತಿಕ ರಾಜಕೀಯ ಸಾಮಾಜಿಕ ಭಾಷಿಕ ಹಾಗೂ ಜೀವನದ ಮೇಲೆ ನಡೆಸುತ್ತಿರುವ ಅಕ್ರಮಣವೇ ಆಗಿದೆ.‌ ಅಲ್ಲದೆ ಬ್ಯಾಂಕಿಂಗ್ ವ್ಯವಾಹರದಲ್ಲೂ,ರೈಲ್ವೆ ಟಿಕೆಟ್ ಕೌಂಟರ್ ನಲ್ಲಿ ಎಲ್ಲೆಲ್ಲಿಯೂ ಕನ್ನಡಿಗರಿಗೆ ಜಾಗವೇ ಇಲ್ಲದಂತಾಗಿದೆ. ಮೈಸೂರು-ಬೆಂಗಳೂರು ಎಕ್ಸಪ್ರೆಸ್ವೇಗಳ ಟೋಲುಗಳಲ್ಲಿ ಟಿಕೆಟ್ ಹರಿಯುವ ವರು ಸಣ್ಣಪುಟ್ಟ ಕೆಲಸಗಾರರು ಎಲ್ಲಾ ಪರರಾಜ್ಯದವರೇ ತುಂಬಿಕೊಂಡಿದ್ದಾರೆ.ಮಂಡ್ಯದ ಪೇಟೆ ಬೀದಿ ಅಡ್ಡಾಡಿ ಬನ್ನಿ ನಮ್ಮೂರ ಶೆಟ್ಟರು ಬಣಜಿಗ ಶೆಟ್ಟರ ಅಂಗಡಿಗಳೀಗ ಒಂದೂ ಕಾಣುವುದಿಲ್ಲ . ಕಾರ್ಮೆಲ ಕಾನ್ವೆಂಟಿನ ರೋಡಿನಲ್ಲಿ ಒಮ್ಮೆ ಓಡಾಡಿ ಅಲ್ಲಿನ ಚಿಕ್ಕ ಚಿಕ್ಕ ಹೋಟೆಲ್ಗಳೊಳಗೆ ಇಣುಕು ಹಾಕಿ ಅಲ್ಲೆಲ್ಲ ಉತ್ತರದ ರಾಜ್ಯದ ಕೆಲಸಗಾರರೇ ತುಂಬಿ ಹೋಗಿದ್ದಾರೆ. ಬನ್ನಿಪರಾವಲಂಬಿಗಳಾಗಿ ತಮ್ಮ ತಾಯ್ನೆಲದಲ್ಲಿ ತಾವೇ ಅನಾಥರಾಗುವ, ನಿರ್ವೀರ್ಯರಾಗುವ ಕಾಲ ಕನ್ನಡಿಗರಿಗೆ ದೂರವಿಲ್ಲ. ಉತ್ತರ ದಕ್ಷಿಣ ಎಂದು ಭೇದ ಮಾಡುವ ಬುದ್ದಿ ಕನ್ನಡಿಗರಿಗೆ ಇಲ್ಲ ಆದರೆ ಸಣ್ಣ ಪುಟ್ಟ ಕೂಲಿ ಕೆಲಸಗಳು ಕೂಡ ಕನ್ನಡಿಗರಿಗೆ ಸಿಗದೇ ಹೋದರೆ ಅವರ ಬದುಕಿನ ಕಥೆ ಏನು!?

ಇದಕ್ಕೆಲ್ಲ ಯಾರು ಕಾರಣ ? ಯಾಕೆ ಕಳೆದ ಎಂಟು ವರ್ಷದಿಂದೀಚೆಗೆ ಇದು ಇಂಥಾ ಉಸಿರುಗಟ್ಟಿಸುವ ಹಂತಕ್ಕೆ ಬಂದು ತಲುಪಿದೆ ಎಂದು ಅರ್ಥ ಮಾಡಿಕೊಳ್ಳುವಲ್ಲಿ ನಮ್ಮವರು ಸೋತಿದ್ದಾರೆ. ನಮ್ಮವರು ಬೆಳೆದ ಮಾವನ್ನು ಹುಣಸೆಯನ್ನು, ರೇಷ್ಮೆಯನ್ನು ನಮ್ಮಿಂದ ಕರೀದಿ ಮಾಡಿ ಮಾರಟ ಮಾಡುತ್ತಾ, ಒಂದು ಸೈಕಲ್ ಚಕ್ರದ ರೀತಿ ಅವರ ಬದುಕಿನಲ್ಲಿ ನಾವು ನಮ್ಮ ಬದುಕಿನಲ್ಲಿ ಅವರು ಬೆಸೆದು ಹೋಗಿರುವ ನಂಟನ್ನು ಈ ದಿನ ದ್ವೇಷವಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿಯ ವ್ಯಾಪಾರೀ ಸಮುದಾಯದ ಎಲ್ಲರೂ ವ್ಯಾಪಾರದ ಸ್ವಾಮ್ಯ ಕಳೆದುಕೊಂಡು ದರಿದ್ರ ಸ್ಥಿತಿ ತಲುಪುವವರೆಗೆ ಇದು ಅರ್ಥವಾಗುವುದಿಲ್ಲ. ಎಲ್ಲಾ ಕಳೆದುಕೊಂಡ ದರಿದ್ರರಿಂದಲೇ‌ ಪಾರದರ್ಶಕವಾದ ವಿಮರ್ಶೆ ಹುಟ್ಟಲು ಸಾಧ್ಯ. ಈಗ ಮಂಪರು ಇರುವುದರಿಂದ ಧರ್ಮ, ಪಾಕಿಸ್ಥಾನ, ಮುಸ್ಲಿಮ್ ದ್ವೇಷ, ದೇವರು, ದಿಂಡರು, ಇಂತವುಗಳ ಕೆಸರು ಗುಂಡಿಯಲ್ಲೇ ಒರಳಾಡುತ್ತಿದ್ದಾರೆ. ಕಾಲ ಮತ್ತು ತಲುಪಿದ ಪರಿಸ್ಥಿತಿ ಒಂದು ದಿನ ಸತ್ಯದರ್ಶನ ಮಾಡಿಸುತ್ತದೆ. ಅಷ್ಟರಲ್ಲಿ ‘ನಾರ್ತ್ ಇಂಡಿಯಾ ಕಂಪನಿ’ ನಮ್ಮನ್ನು ಆಳತೊಡಗಿರುತ್ತದೆ.ಆಗ ತಲೆಯಲ್ಲಿರುವ ಧರ್ಮದ ಅಮಲು ಇಳಿದು ವಾಸ್ತವ ಅರ್ಥವಾಗುವಷ್ಟರಲ್ಲಿ ಗಟ್ಟಿಯಾಗಿ ತಳ ಊರಲು ಸ್ಥಳವೆ ಇಲ್ಲದಂತಾಗಿರುತ್ತದೆ.

ಇದಕ್ಕೊಂದು ಒಳ್ಳೆಯ ಉದಾಹರಣೆ

ಮೊನ್ನೆ ಒಬ್ಬ ಉತ್ತರದ ರಾಜ್ಯದ ಹುಡುಗ ಬೆಡ್ ಷೀಟ್ ಗಳನ್ನು ಮಾರಾಟ ಮಾಡುತ್ತಾ ಒಂದೆರಡಾದರೂ ಖರೀದಿ ಮಾಡಿ ಅಂತ ನಮ್ಮ ಮನೆಯಾಕೆಯ ಬಳಿ ಕೇಳಿಕೊಳ್ಳುತ್ತಿದ್ದ. ನಾನು ಆಚೆ ಬಂದು ವಿಚಾರಿಸಿ ಎಲ್ಲಿಂದ ಬಂದದ್ದು ಅಂತ ಕೇಳಿದಾಗ, ತನ್ನ ಪೂರ್ವ ಪರ ತಿಳಿಸಿದ.ಯಾಕೆ ನಿಮ್ಮಲ್ಲಿಯೇ ಮಾಡಲು ಕೆಲಸವಿಲ್ಲವೆ ..?ಇಷ್ಟು ದೂರ ಬಂದು ವ್ಯಾಪಾರ ಮಾಡಲು ಅಂತಾ ನಾನು ಕೇಳ್ದಾಗ ಅವನಿಂದ ಬಂದ ಉತ್ತರ ಅಯ್ಯೋ ಸಾರ್ ಅಲ್ಲಿ ದಿನ ಬೆಳಗಾದರೆ, ಒಂದು ಸಮುದಾಯದ. ಮೇಲೆಮತ್ತೊಂದು ಸಮುದಾಯದಿಂದ ದಿನ ನಿತ್ಯ ಜನಗಳ ಘರ್ಷಣೆ ಹೊಡೆದಾಟವೆ ಆಗಿದೆ, ನೆಮ್ಮದಿಯೇ ಇಲ್ಲ.ನಾನು ಈ ಊರಿಗೆ ಬಂದಾಗ ನೋಡ್ದೆ ಜನ ಎಷ್ಟು ನೆಮ್ಮದಿಯಾಗಿ ಯಾವ ಜಗಳವು ಇಲ್ಲದೆ ವಾಸ ಮಾಡ್ತಾವ್ರೆ ಅಂತ. ಅದಕ್ಕೆ ನಾನು ನನ್ನ ಜೊತೆಗೆ ಇನ್ನೂ 8 ಜನರನ್ನು ಇಲ್ಲಿಗೆ ಕರ್ಕೊಂಡು ಬಂದೆ ವ್ಯಾಪಾರ ಮಾಡೋಕೆ ಅಂತ ಉತ್ತರ ಕೊಟ್ಟ. ಜಿಲ್ಲೆಯ ಆಲೆಮನೆಗಳಲ್ಲಿ ಕೂಡ ಉತ್ತರದ ಕೆಲಸಗಾರರೇ ತುಂಬಿ ತುಳುಕುತ್ತಿದ್ದಾರೆ.

ಇದು ವಾಸ್ತವ. ನಮ್ಮ ನೆಮ್ಮದಿಯನ್ನು ಹಾಳುಮಾಡಿ, ಒಂದು ಸಮುದಾಯದಮೇಲೆ ಮತ್ತೊಂದು ಸಮುದಾಯ ಎತ್ತಿಕಟ್ಟಿ ದ್ವೇಷದ ಬೀಜಗಳನ್ನು ನಮ್ಮಲ್ಲಿಯೂ ಬಿತ್ತಲಾಗುತ್ತಿದೆ.

ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಕನ್ನಡದ ಅಸ್ಮಿತೆಯನ್ನು ನಮ್ಮ ತನವನ್ನು ಉಳಿಸಿಕೊಳ್ಳಬೇಕಿದೆ.ಬೇರೊಂದು ಕಡೆಯಿಂದ ವಲಸೆ ಬಂದು ಈ ನೆಲದಲ್ಲಿ ವ್ಯಾಪಾರ ವಹಿವಾಟು ಮಾಡಿ ಅಭಿವೃದ್ದಿ ಸಾಧಿಸಲು ಸಾಧ್ಯವಾಗುವುದಾದರೆ, ನಮ್ಮ ಯುವ ಜನತೆಗೆ ನಮ್ಮ ನೆಲದಲ್ಲಿ ಉದ್ಯೋಗ ಸೃಷ್ಟಿಸಿಕೊಂಡು ಯಶಸ್ವಿಯಾಗಲು ಯಾಕೆ ಸಾಧ್ಯವಾಗುತ್ತಿಲ್ಲ,ಬರಿ ಜಾತಿ, ಧರ್ಮ ದೇವರು ಎಂಬಿತ್ಯಾದಿ ಅಮಲಿನಲ್ಲಿ ನಮ್ಮನ್ನು ಮುಳುಗಿಸಲಾಗುತ್ತಿದೆ, ಎಂಬುದನ್ನು ಮನಗಂಡು ನಮ್ಮ ನಮ್ಮ ನಡುವಿನ ಹಿಂದು ಮುಸ್ಲಿಂ ಜಗಳವನ್ನು ಬಿಟ್ಟು ನಮ್ಮ ನೆಲದಲ್ಲಿ ನಮ್ಮ ಭಾಷೆಯ ನಮ್ಮ ಬದುಕಿನ ಅಸ್ಮಿತೆಯ ಉಳಿವಿಗಾಗಿ ನಾವು ಹೋರಾಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!