Friday, September 20, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳಿದ್ದು, ಮಂಡ್ಯ ಜಿಲ್ಲೆಯನ್ನು ಟೂರಿಸಂ ಹಬ್ ಮಾಡಲು ಪಣ ತೊಟ್ಟಿರುವುದಾಗಿ ರೇಷ್ಮೆ ಮತ್ತು ಕ್ರೀಡಾ ಸಚಿವ ಡಾ. ನಾರಾಯಣಗೌಡ ತಿಳಿಸಿದರು.

ಶ್ರೀರಂಗಪಟ್ಟಣದ ಕೆಆರ್‌ಎಸ್‌ ಹಿನ್ನೀರಿನಲ್ಲಿ ರಾಷ್ಟ್ರ ಮಟ್ಟದ ಮಲ್ಟಿ ಕ್ಲಾಸ್ ಯೂತ್ ಸೈಲಿಂಗ್ ಅಂಡ್ ಕೈಟ್ ಬೋರ್ಡ್ ಚಾಂಪಿಯನ್‌ಶಿಪ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದಿನಿಂದ ಆಗಸ್ಟ್ 13 ರವರೆಗೆ ಮಂಡ್ಯ ಜಿಲ್ಲಾಡಳಿತದ ಸಹಕಾರದೊಂದಿಗೆ, ಭಾರತೀಯ ಸೇನೆಯ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್(MEG) ಮತ್ತು ಜನರಲ್ ತಿಮ್ಮಯ್ಯ ರಾಷ್ಡ್ರೀಯ ಸಾಹಸ ಅಕಾಡೆಮಿ (GETHNAA) ಸಹಭಾಗಿತ್ವದಲ್ಲಿ ಸೈಲಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ ಎಂದರು.

ದೇಶದ ವಿವಿಧೆಡೆಯಿಂದ 12೦ಕ್ಕೂ ಹೆಚ್ಚು ಸೈಲರ್ಸ್ ಪಾಲ್ಗೊಂಡಿದ್ದಾರೆ. ಯುವ ಸೈಲರ್ಸ್‌ಗೆ ಇದೊಂದು ಅದ್ಭುತ ಅವಕಾಶವಾಗಿದ್ದು, ತಮ್ಮ ಪ್ರತಿಭೆಯನ್ನು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ತೋರಲು ಉತ್ತಮ ವೇದಿಕೆ ಇದಾಗಿದೆ. ನಾನು ಕ್ರೀಡಾ ಸಚಿವನಾಗಿ, ನಮ್ಮ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ನನ್ನ ಭಾಗ್ಯ ಎಂದರು.

ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 15 ಲಕ್ಷ ರೂಪಾಯಿ ಅನುದಾನ ನೀಡುವ ಮೂಲಕ ಸೈಲಿಂಗ್ ಚಾಂಪಿಯನ್ ಶಿಪ್‌ಗೆ ಮತ್ತಷ್ಟು ಉತ್ತೇಜನ ನೀಡಲಾಗಿದೆ. ಅಲ್ಲದೆ ಈ ಸೈಲಿಂಗ್ ಸ್ಪರ್ಧೆ ಆಯೋಜಿಸಿರುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ. ಈ ಭಾಗವನ್ನು ಟೂರಿಸಂ ಹಬ್ ಮಾಡಬೇಕು ಎಂಬ ಕನಸಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಿನ ಶಕ್ತಿಯನ್ನು ತುಂಬಲಾಗುವುದು ಎಂದರು.

ಅಂತರಾಷ್ಟ್ರೀಯ ಸೈಲಿಂಗ್ ಚಾಂಪಿಯನ್ ಶಿಪ್

ಕೆ.ಆರ್.ಎಸ್ ಹಿನ್ನೀರಿನಲ್ಲಿ ಆಯೋಜಿಸಿರುವ ಮಲ್ಟಿಕ್ಲಾಸ್ ಯೂತ್ ಸೈಲಿಂಗ್ ಅಂಡ್ ಕೈಟ್ ಬೋಡ್೯ ಚಾಂಪಿಯನ್ ಶಿಪ್ ಕಾರ್ಯಕ್ರಮವನ್ನು ಮುಂದಿನ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುವುದು ಎಂದು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರು ತಿಳಿಸಿದರು.

ಕ್ರೀಡಾ ಸಚಿವರು ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ.ದೇಶದ ವಿವಿಧ ಭಾಗಗಳಿಂದ 120 ಕ್ಕಿಂತ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಕಳೆದ ವರ್ಷ ಈ ಕ್ರೀಡಾ ಕೂಟದಲ್ಲಿ ಭಾಗವಹಿಸಿದ 4 ಕ್ರೀಡಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಈ ಚಾಂಪಿಯನ್ ಶಿಪ್ ನಲ್ಲಿ ಉದ್ಯೋಗ ಸೃಷ್ಠಿ ಸಹ ಆಗುತ್ತದೆ ಎಂದರು.

ಈ ಕ್ರೀಡೆಗೆ ಉತ್ತೇಜನ ನೀಡಲು ಬೇಕಿರುವ ವ್ಯವಸ್ಥೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಚಾಂಪಿಯನ್ ಶಿಪ್ ಪ್ರತಿವರ್ಷ ಕೆ.ಆರ್.ಎಸ್ ನಲ್ಲಿ ನಡೆಯುವುದರಿಂದ ಸ್ಥಳೀಯವಾಗಿ ಉದ್ಯೋಗ ಸಿಗಲಿದೆ ಎಂದರು.

ಶಾಸಕ ಸಿಎಸ್ ಪುಟ್ಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!