Thursday, September 19, 2024

ಪ್ರಾಯೋಗಿಕ ಆವೃತ್ತಿ

ಇದು ಕಾಲ್ಪನಿಕ ದಾಮೋದರನ ಕಥೆ….

✍️ ಗಿರೀಶ್ ತಾಳಿಕಟ್ಟೆ

ಸೋಫಾದ ಮೇಲೆ ಕೂತಿದ್ದ ದಾಮೋದರನ ಕೈಯಲ್ಲಿ ಚೆಂದನೆಯ ವುಲನ್ ಬಟ್ಟೆಯ ಪುಟಾಣಿ ಸ್ವೆಟ್ಟರ್ ನಳನಳಿಸುತ್ತಿತ್ತು. ಆಗಷ್ಟೇ ಪಟ್ಟಣದಿಂದ ಬರುವಾಗ, ತನ್ನ ಎರಡೂವರೆ ತಿಂಗಳ ಮಗನಿಗೆ ತೊಡಿಸುವುದಕ್ಕೆಂದು ಪೇಟೆಯಲ್ಲಿ ಸುತ್ತಾಡಿ, ಸಾಕಷ್ಟು ಚೌಕಾಶಿ ಮಾಡಿ, ತುಂಬಾ ಇಷ್ಟಪಟ್ಟು ಆ ಸ್ವೆಟ್ಟರ್ ತಂದಿದ್ದ. ಒಂದು ವಾರ ಕಾಲ ಸತತ ಗೋಳಾಡಿದ ಮಡದಿಯ ಮನವಿಗೆ ಕೊನೆಗೂ ಕಿವಿಗೊಟ್ಟು ಪೇಟೆಗೆ ಹೋಗಬೇಕಾಗಿತ್ತು. ಮನೆಗೆ ಬಂದಾಗ ಮಗು ಇನ್ನೂ ಮಲಗಿತ್ತು. ಸ್ವಲ್ಪಹೊತ್ತು ಅದರ ಮದ್ದಾದ ಮುಖ ನೋಡಿ, ಸಂತೃಪ್ತಗೊಂಡ ನಂತರ, ಸೋಫಾದಲ್ಲಿ ಮೈಚೆಲ್ಲಿ ಆಯಾಸವನ್ನು ಆರಿಸಿಕೊಳ್ಳುತ್ತಾ, ತಾನು ತಂದಿದ್ದ ಆ ಸ್ವೆಟ್ಟರ್ ಅನ್ನು ತಿರುಗಾ-ಮುರುಗಾ ನೋಡುತ್ತಾ ಕೂತಿದ್ದ. ಆ ಸ್ವೆಟ್ಟರಿನಲ್ಲಿ ತನ್ನ ಮಗು ಹೇಗೆಲ್ಲ ಕಾಣಬಹುದೆಂದು ಕಲ್ಪಿಸಿಕೊಂಡು ಆನಂದಪಡುತ್ತಿದ್ದ.

ಆಗ ಇದ್ದಕ್ಕಿದ್ದಂತೆ ಅಡುಗೆ ಮನೆಯಿಂದ ಅವನ ಅಮ್ಮ ಭಾರತಿ ಚಿಟ್ಟನೆ ಚೀರಿದ ಕೂಗು ದಾಮೋದರನ ಕಿವಿಗೆ ಬಿತ್ತು. ಮಗ ದಣಿದು ಬಂದಿದ್ದಾನೆಂದು, ಲಗುಬಗೆಯಿಂದ ಅಡುಗೆ ಮಾಡಿ, ಅವನಿಗೆ ಊಟ ಬಡಿಸೋಣವೆಂಬ ಆತುರದಲ್ಲಿದ್ದ ತಾಯಿ ಭಾರತಮ್ಮನ ಸೀರೆಯ ಅಂಚಿಗೆ ಅಕಸ್ಮಾತ್ತಾಗಿ ಬೆಂಕಿ ಹತ್ತಿಕೊಂಡಿತ್ತು. ದಾಮೋದರನ ಅಪ್ಪ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಣಿಪುರದಿಂದ ತಂದುಕೊಟ್ಟಿದ್ದ ಸೀರೆ. ಎಲ್ಲಿಂದ ತಂದ ಸೀರೆಯಾದರೇನು, ಹಬ್ಬಿ ಉರಿಯುವ ಬೆಂಕಿಗೆ ಅದೆಲ್ಲ ಎಲ್ಲಿ ಅರ್ಥವಾದೀತು? ತೆಕ್ಕೆಗೆ ಸಿಕ್ಕಿದ್ದನ್ನೆಲ್ಲ ಸುಟ್ಟು ಭಸ್ಮ ಮಾಡುವುದಷ್ಟೇ ಅದರ ಗುಣಧರ್ಮ. ಈಗಲೂ ಮಣಿಪುರದ ಸೀರೆಯ ಸಮೇತ, ಭಾರತಿಯ ಇಡೀ ದೇಹಕ್ಕೆ ತನ್ನ ಕೆನ್ನಾಲಿಗೆ ವ್ಯಾಪಿಸುವ ಆತುರದಲ್ಲಿತ್ತು ಬೆಂಕಿ. ಧಿಗ್ಗನೆ ಎದ್ದು ಒಳ ಓಡಿದ ದಾಮೋದರನಿಗೆ, ಎದುರಿನ ದೃಶ್ಯ ಕಂಡು ಆಘಾತ! ಅವನಮ್ಮ ಬೆಂಕಿಯ ಜ್ವಾಲೆಗಳ ನಡುವೆ ಒದ್ದಾಡುತ್ತಿದ್ದಾಳೆ. ಕೂಡಲೇ ತನ್ನ ಕೈಯಲ್ಲಿದ್ದ ಮಗನ ಸ್ವೆಟ್ಟರ್ ಅನ್ನು ದೂರಕ್ಕೆಸೆದು, ಅಮ್ಮನ ಸೀರೆಗೆ ಹತ್ತಿದ್ದ ಬೆಂಕಿಯನ್ನು ಆರಿಸಲು ಮುಂದಾದ. ಕಡೆಗೂ ಬೆಂಕಿಯನ್ನು ನಂದಿಸಿ, ಅಮ್ಮನನ್ನು ಬಚಾವು ಮಾಡಿಕೊಂಡ. ಆಘಾತದಿಂದ ಸುಧಾರಿಸಿಕೊಂಡು ನೋಡುತ್ತಾನೆ, ಆತುರದಲ್ಲಿ ತಾನು ಎಸೆದಿದ್ದ ಮಗನ ಸ್ವೆಟ್ಟರು, ಸೀದಾ ಒಲೆಯ ಸೌದೆ ಉರಿಯ ಮೇಲೆ ಬಿದ್ದು ಸಂಪೂರ್ಣ ಸುಟ್ಟುಹೋಗಿತ್ತು. ಆದರೂ ಅವನಿಗೆ ಬೇಸರವೆನಿಸಲಿಲ್ಲ. ಯಾಕೆಂದರೆ ತನಗೆ ಜನ್ಮಕೊಟ್ಟ ಅಮ್ಮನನ್ನು ಬೆಂಕಿಯಿಂದ ಬಚಾವು ಮಾಡಿದ್ದ, ಒಬ್ಬ ಜವಾಬ್ಧಾರಿಯುತ ಮಗನಾಗಿ!

ಇದು ಕಾಲ್ಪನಿಗೆ ದಾಮೋದರನ ಕಥೆ. ಆದರೆ ಇವತ್ತಿನ ವಾಸ್ತವಿಕ ‘ದಾಮೋದರ’ಗಳು ಹೀಗೆಯೇ ವರ್ತಿಸುತ್ತಿದ್ದಾರೆಯೇ? ತಾಯಿ ಭಾರತಿಯ ಸೀರೆಗೆ ಬೆಂಕಿ ಬಿದ್ದು, ಧಗಧಗಿಸುತ್ತಿದ್ದರೂ ಅದರತ್ತ ನಿರ್ಲಕ್ಷ್ಯ ವಹಿಸಿ ತಾನು ಕೊಂಡುತಂದ ಮಗನ ಪುಟಾಣಿ ಸ್ವೆಟ್ಟರ್‌ನ ಮೋಹದಲ್ಲೇ ಕಳೆದುಹೋಗುವಂತಹ ಮಕ್ಕಳೇ ಹೆಚ್ಚಾಗಿದ್ದಾರೆ. ನಾವು ಸಹಾ ಅಂತವರ ವರ್ತನೆಯನ್ನು ‘ತಂದೆಗೆ ತನ್ನ ಮಗನ ಮೇಲೆ ಎಂಥಾ ಪ್ರೀತಿ’ ಎಂಬ ಕುರುಡು ತರ್ಕದಲ್ಲಿ, ಅಂಥಾ ಹೊಣೆಗೇಡಿ ಮಕ್ಕಳನ್ನು ಮೆಚ್ಚಿಕೊಳ್ಳುತ್ತಿದ್ದೇವೆ. ಒಬ್ಬ ತಾಯಿಗೆ ಮಗನಾದ ನಂತರವೇ, ಆತ ಒಂದು ಮಗುವಿಗೆ ತಂದೆಯಾದದ್ದು ಎನ್ನುವುದನ್ನು ಮರೆತುಬಿಡುತ್ತಿದ್ದೇವೆ. ಹಾಗಾಗಿ ಇವತ್ತಿನ ಕಾಲದಲ್ಲಿ ತಾಯಿ ಭಾರತಿ ಬೆಂಕಿಯಲ್ಲಿ ಬೆಂದು, ಚೀರಾಡುತ್ತಿರುತ್ತಾಳೆ; ಮಗ ‘ದಾಮೋದರ’ ತನ್ನ ಮೋಹದಲ್ಲಿ ಕಳೆದುಹೋಗಿರುತ್ತಾನೆ!!

(ಸೂಚನೆ: ಈ ಕಥೆಯಲ್ಲಿ ಬರುವ ಪಾತ್ರ, ಸಂದರ್ಭ, ರೂಪಕಗಳೆಲ್ಲವೂ ಕಾಲ್ಪನಿಕ. ಯಾವುದೇ ಜೀವಂತ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಹಾಗೊಂದು ವೇಳೆ ಸಂಬಂಧವಿರುವಂತೆ ಓದುಗರಿಗೆ ಭಾಸವಾದರೂ ಅದು ಕೇವಲ ಕಾಕತಾಳೀಯ…..)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!