Friday, September 20, 2024

ಪ್ರಾಯೋಗಿಕ ಆವೃತ್ತಿ

ಜಮ್ಮು ಮತ್ತು ಕಾಶ್ಮೀರ| ಸೈನಿಕರ ವಶದಲ್ಲಿದ್ದ ಮೂವರು ನಾಗರೀಕರ ಸಾವು ?

ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನೆಯ ವಶದಲ್ಲಿದ್ದ ವೇಳೆ ಮೂವರು ನಾಗರಿಕರು  ಸಾವನ್ನಪ್ಪಿದ್ದಾರೆ. ಕಸ್ಟಡಿ ಹಿಂಸೆಯಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಮೃತರ ಸಂಬಂಧಿಗಳು ಮತ್ತು ಸ್ಥಳೀಯರು ಆರೋಪಿಸಿದ್ದು, ಈ ಬಗ್ಗೆ ಜಮ್ಮು-ಕಾಶ್ಮೀರದ ಆಡಳಿತವಾಗಲೀ, ಸೇನೆಯಾಗಲಿ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ ಪೂಂಛ್‌ನಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಐವರು ಯೋಧರು, ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಘಟನೆಗೆ ಸಂಬಂಧಿಸಿ ವಶಕ್ಕೆ ತೆಗೆದುಕೊಂಡ ಮೂವರು ನಾಗರಿಕರ ಹತ್ಯೆಗೆ ಯಾರು ಹೊಣೆ ಎಂದು ಸೇನೆ ಮತ್ತು ಜಮ್ಮು-ಕಾಶ್ಮೀರ ಹೇಳಿಲ್ಲವಾದರೂ, ಸೇನಾ ಕಸ್ಟಡಿಯಲ್ಲಿ ಪುರುಷರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಡಿ.21ರಂದು ಪೂಂಛ್‌ನಲ್ಲಿ ಭಯೋತ್ಪಾದಕರು ನಡೆಸಿದ್ದ ಹೊಂಚುದಾಳಿಯಲ್ಲಿ ಸೇನೆಯ ನಾಲ್ವರು ಯೋಧರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ 8 ಮಂದಿಯನ್ನು ವಿಚಾರಣೆಗಾಗಿ ಸೇನೆಯು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಸೇನೆಯು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದ 8 ಜನರಲ್ಲಿ ಮೂವರು ನಾಗರಿಕರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸಫೀರ್ ಹುಸೇನ್ (48), ಮೊಹಮ್ಮದ್ ಶೋಕತ್ (28) ಮತ್ತು ಶಬ್ಬೀರ್ ಅಹ್ಮದ್ (25) ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತರ ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರು ಸೇನಾ ಸಿಬ್ಬಂದಿಗಳು ಥಳಿಸಿ ಹತ್ಯೆ ಮಾಡಿದ್ದಾರೆಂದು ಆರೋಪಿಸಿದ್ದು, ಸಂಸತ್ರಸ್ತರು ಸಮವಸ್ತ್ರಧಾರಿ ಸಿಬ್ಬಂದಿಗಳ ಬಳಿ ಜೀವಕ್ಕಾಗಿ ಅಂಗಲಾಚುವ ವಿಡಿಯೋಗಳನ್ನು ನೋಡಿರುವುದಾಗಿ ಹೇಳಿದ್ದಾರೆ.

“>

ಕೇಂದ್ರಾಡಳಿತ ಪ್ರದೇಶದ ಆಡಳಿತವು ಕೇಂದ್ರ ಗೃಹ ಸಚಿವಾಲಯದ ಮೇಲ್ವಿಚಾರಣೆಯಡಿಯಲ್ಲಿ ಬರುತ್ತದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯವೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾನುವಾರ ರಾತ್ರಿ ಅಪರಿಚಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರ ಅಡಿಯಲ್ಲಿ ಎಫ್‌ಐಆರ್‌ನ್ನು ದಾಖಲಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಗ್ರಾಮದ ಮುಖ್ಯಸ್ಥ ಮೆಹಮೂದ್ ಅಹ್ಮದ್,  ಶಬ್ಬೀರ್ ಮತ್ತು ಶೋಕತ್ ಅವರನ್ನು ವೈರಲ್ ವೀಡಿಯೊದಲ್ಲಿ ಗುರುತಿಸಿರುವುದಾಗಿ ಹೇಳಿದ್ದಾರೆ. ಇದರಲ್ಲಿ ಸೈನಿಕರು ಸೆರೆಯಾಳುಗಳನ್ನು ಕ್ರೂರವಾಗಿ ಥಳಿಸುವುದನ್ನು ಮತ್ತು ಕೆಲವರು ಪೃಷ್ಠದ ಮೇಲೆ ಮೆಣಸಿನ ಪುಡಿಯನ್ನು ಎರಚುವುದನ್ನು ಕಾಣಬಹುದು ಎಂದು ಹೇಳಿದ್ದಾರೆ.

ಸೇನಾ ಕಸ್ಟಡಿಯಲ್ಲಿ ಕೊಲ್ಲಲ್ಪಟ್ಟರು ಎಂದು ಹೇಳಲಾದ ಮೂವರು ನಾಗರಿಕರಲ್ಲಿ ಒಬ್ಬರಾದ ಮೊಹಮ್ಮದ್ ಶೌಕಾತ್‌ನ ಚಿಕ್ಕಪ್ಪ ಮೊಹಮ್ಮದ್ ಸಿದ್ದಿಕ್ ಮಾತನಾಡಿದ್ದು, ವೀಡಿಯೊದಲ್ಲಿ ಕಾಣಿಸಿಕೊಂಡಿರುವುದು ತನ್ನ ಸೋದರಳಿಯನೇ. ಲಾಠಿ ಬೀಸುವ ಸೈನಿಕನನ್ನು ಆತ ಕೈಮುಗಿದು ಬಿಟ್ಟು ಬಿಡುವಂತೆ ಬೇಡಿಕೊಂಡಿದ್ದಾನೆ. ಆದರೆ ಅವರ ಮನಕರಗಲಿಲ್ಲ. ವಿಡಿಯೋದಲ್ಲಿ ಕಾಣಿಸಿಕೊಂಡ ಕಪ್ಪು ಬಟ್ಟೆಯನ್ನು ಧರಿಸಿರುವ ವ್ಯಕ್ತಿ ಸಫೀರ್. ಅವರ ಸಹೋದರ ಗಡಿ ಭದ್ರತಾ ಪಡೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದಾರೆ. ವಿಡಿಯೋದಲ್ಲಿ ಕಂಡು ಬಂದ ಕೆಂಪು ಟೀ ಶರ್ಟ್ ಧರಿಸಿರುವ ಮೂರನೇ ಯುವಕ ಇರ್ಫಾನ್ ಅಹ್ಮದ್. ಅವರು 16 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಡೀ ಘಟನೆಯು ಬಡತನ ಮತ್ತು ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಮುದಾಯಕ್ಕೆ ಆಘಾತ ಉಂಟುಮಾಡಿದೆ ಎಂದು ಸಿದ್ದಿಕ್ ಹೇಳಿದರು.

ಮೃತ ನಾಗರಿಕರ ದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಿದಾಗಿನಿಂದ ಪೂಂಚ್‌ನ ಟೋಪಾ ಪೀರ್ ಗ್ರಾಮದಲ್ಲಿ ಕರ್ಪ್ಯೂ ವಿಧಿಸಲಾಗಿದೆ. ಸಂಪೂರ್ಣವಾಗಿ ಮಿಲಿಟರಿ ನಿಯೋಜಿಸಲಾಗಿದೆ. ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಸೇನೆಯು ಸುತ್ತುವರಿದಿರುವುದರಿಂದ ಗ್ರಾಮಸ್ಥರು ದುಃಖದ ಸಮಯದಲ್ಲಿ ಮೂರು ಕುಟುಂಬಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಸರಪಂಚ್ ಅಹ್ಮದ್ ಹೇಳಿದ್ದಾರೆ.

ಮೃತ ಯುವಕ ಮೊಹಮ್ಮದ್ ಶಬ್ಬೀರ್ ಅವರ ತಂದೆ ವಾಲಿ ಮೊಹಮ್ಮದ್ ಅವರು ತಮ್ಮ ಮಗನ ಹತ್ಯೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದು, ಅವರು ನನ್ನ ಸುಂದರವಾಗಿದ್ದ ಮಗನನ್ನು ಎಲ್ಲೆಡೆ ಹೊಲಿಗೆಗಳಿಂದ ತುಂಬಿದ ದೇಹವನ್ನಾಗಿ ಮಾಡಿದರು. ನನಗೆ 60 ವರ್ಷ, ನನ್ನ 27 ವರ್ಷದ ಮಗನನ್ನು ದೇಹದಾದ್ಯಂತ ಹೊಲಿಗೆಗಳಿಂದ ನನ್ನ ಬಳಿಗೆ ತಂದರು. ತಲೆ ಮತ್ತು ಎದೆಗೆ ಸಹ ಹೊಲಿಗೆಗಳನ್ನು ಹಾಕಲಾಗಿತ್ತು. ಮಗನಿಗೆ ಎಲೆಕ್ಟ್ರಿಕ್‌ ಶಾಕ್‌ ಕೂಡ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸೇನೆಯು, ಈ ವಿಷಯವು ತನಿಖೆಯ ಹಂತದಲ್ಲಿದೆ ಮತ್ತು ತನಿಖೆ ನಡೆಸುವಲ್ಲಿ ಸಂಪೂರ್ಣ ಬೆಂಬಲ ಮತ್ತು ಸಹಕಾರವನ್ನು ನೀಡುವುದಾಗಿ ಹೇಳಿದೆ. ಆದರೆ ಸ್ಥಳೀಯರು, ನಮ್ಮ ಮತ್ತು ಸೇನೆಯ ನಡುವಿನ ಬಾಂದವ್ಯವನ್ನು ಪುನರ್ನಿರ್ಮಿಸಲು ಬಹಳ ಸಮಯ ತೆಗೆದುಕೊಳ್ಳಬಹದು ಎಂದು ಹೇಳುತ್ತಿದ್ದಾರೆ.

ಜಮ್ಮು-ಕಾಶ್ಮೀರದ ಆಡಳಿತವು ಮೂವರು ನಾಗರಿಕರ ಸಾವಿಗೆ ಕಾರಣವನ್ನು ಹೇಳಿಲ್ಲ. ಆದರೆ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಮತ್ತು ಪರಿಹಾರವನ್ನು ಘೋಷಿಸಲಾಗಿದೆ ಎಂದು ಹೇಳಿಕೊಂಡು ಘಟನೆಯಿಂದ ನುಣುಚಿಕೊಂಡಿದೆ.

ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮೂವರು ಯುವಕರ ಹತ್ಯೆಯನ್ನು ಖಂಡಿಸಿದ್ದಾರೆ. ಇದು ಬೇರೆ ಯಾವುದೇ ಸರ್ಕಾರದ ಅಡಿಯಲ್ಲಿ ಸಂಭವಿಸಿದ್ದರೆ, ಗೋದಿ ಮಾದ್ಯ ಮವು ಪ್ರಶ್ನೆಗಳನ್ನು ಎತ್ತುತ್ತಿತ್ತು. ಅವರು ಚಿತ್ರಹಿಂಸೆಗೊಳಗಾದ 15 ಜನರನ್ನು ತಮ್ಮ ಮನೆಗಳಿಂದ ಎಳೆದುಕೊಂಡು ಹೋಗಿದ್ದರು. ಅವರಲ್ಲಿ ಮೂವರು ಈಗಾಗಲೇ ಸಾವನ್ನಪ್ಪಿದ್ದಾರೆ. ಈ ನಯಾ ಕಾಶ್ಮೀರ ಹೇಗಿದೆ? ಅಲ್ಲಿ ಸೈನಿಕರಾಗಲಿ ಅಥವಾ ಸಾಮಾನ್ಯ ಜನರಾಗಲಿ ಸುರಕ್ಷಿತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಕೂಡ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನೆಯ ವಶದಲ್ಲಿದ್ದ ಮೂವರು ನಾಗರಿಕರನ್ನು ಕ್ರೂರವಾಗಿ ಹತ್ಯೆಗೈದಿರುವುದು ಬಲವಾಗಿ ಖಂಡಿಸಿದೆ. ಮೃತರ ಕುಟುಂಬಗಳಿಗೆ ಕೇವಲ ಪರಿಹಾರ ಘೋಷಿಸಿದರೆ ಸಾಕಾಗುವುದಿಲ್ಲ, ತ್ವರಿತ ತನಿಖೆಯಾಗಬೇಕು ಮತ್ತು ಹೊಣೆಗಾರರಿಗೆ ಶಿಕ್ಷೆ ವಿಧಿಸಬೇಕು ಎಂದು ಹೇಳಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!