Thursday, September 19, 2024

ಪ್ರಾಯೋಗಿಕ ಆವೃತ್ತಿ

ಟಿಪ್ಪೂ, ‘ಹಕೀಂ ನಂಜುಂಡ’ನ ಕಥೆ ಮತ್ತು ಅಸಲೀ ಪ್ರಶ್ನೆಗಳು

✍️ ಮಾಚಯ್ಯ ಎಂ ಹಿಪ್ಪರಗಿ


ಒಮ್ಮೆ ಹೀಗಾಯ್ತು. ಟಿಪ್ಪೂ ತುಂಬಾ ಇಷ್ಟಪಟ್ಟು ಸಾಕಿದ್ದ ಅರಮನೆಯ ಪಟ್ಟದಾನೆಗೆ ಕಣ್ಣಿನ ಬೇನೆ ಬಂದು, ಆನೆ ವಿಪರೀತ ನರಳಾಡಲು ಶುರು ಮಾಡಿತು. ವೈದ್ಯರನ್ನು ಕರೆಸಿ ಚಿಕಿತ್ಸೆ ಮಾಡಿಸಿದ. ಆದರೂ ಆನೆಯ ಬೇನೆ ಗುಣವಾಗಲಿಲ್ಲ. ತನ್ನ ಪ್ರೀತಿಪಾತ್ರ ಆನೆ ಹೀಗೆ ನರಳಾಡುತ್ತಿರುವುದನ್ನು ನೋಡಲು ಟಿಪ್ಪೂಗೆ ಸಾಧ್ಯವಾಗದೆ ಅವನೂ ಪರಿತಪಿಸಲು ಶುರು ಮಾಡಿದ. ಒಡೆಯನ ಈ ಕಕ್ಕುಲಾತಿಯನ್ನು ಹತ್ತಿರದಿಂದ ಕಂಡ ಆ ಆನೆಯ ಮಾವುತ ಅದೊಂದು ದಿನ ಹಿಂಜರಿಕೆಯಿಂದಲೇ ಸುಲ್ತಾನನ ಮುಂದೆ ನಿಂತು “ಸುಲ್ತಾನರೇ, ತಾವು ತಪ್ಪು ತಿಳಿಯದೆ ಹೋದ್ರೆ ಒಂದು ಸಲಹೆ ಕೊಡ್ತೀನಿ. ನಂಜನಗೂಡಿನ ನಂಜುಂಡಸ್ವಾಮಿ ರೋಗಗಳನ್ನು ಗುಣಪಡಿಸೋದ್ರಲ್ಲಿ (ಈಗಲೂ ಜನ ನಂಜನಗೂಡಿನ ನಂಜುಂಡೇಶ್ವರನನ್ನು ವೈದ್ಯ ನಂಜುಂಡಸ್ವಾಮಿ ಅಂತ ಕರೆಯೋದುಂಟು) ಎತ್ತಿದ ಕೈ. ಆ ಸ್ವಾಮಿಗೆ ಹರಕೆ ಹೊತ್ತು, ದೇವಸ್ಥಾನದಿಂದ ತೀರ್ಥ ತಂದು ಆನೆಯ ಕಣ್ಣು ತೊಳೆದರೆ ರೋಗ ವಾಸಿಯಾಗಬಹುದು” ಎಂದ. ತನ್ನ ಪ್ರೀತಿಯ ಆನೆ ಗುಣವಾಗುವುದಾದರೆ ಏನು ಮಾಡುವುದಕ್ಕೂ ತಯಾರಿದ್ದ ಟಿಪ್ಪೂ ಅದಕ್ಕೆ ಸಮ್ಮತಿಸಿದ.

ನಂಜುಂಡೇಶ್ವರನಿಗೆ ಹರಕೆ ಕಟ್ಟಲಾಯಿತು. ಒಂದು ಮಂಡಲದ ಕಾಲ ನಂಜನಗೂಡಿನ ದೇವಸ್ಥಾನದಿಂದ ತಂದ ತೀರ್ಥದಿಂದ ಆನೆಯ ಕಣ್ಣು ತೊಳೆದರು. ಅದೇನು ಕಾಕತಾಳೀಯವೋ ಏನೋ, (ಬಹುಶಃ ಅಲ್ಲಿಯವರೆಗೆ ನೀಡಿದ್ದ ಚಿಕಿತ್ಸೆಗಳು ಆಗ ಫಲ ಕೊಡಲಾರಂಭಿಸಿದ್ದವು ಅನ್ನಿಸುತ್ತೆ) ಆನೆಯ ಕಣ್ಣಿನ ಬೇನೆ ವಾಸಿಯಾಯಿತು. ಈ ಪವಾಡವನ್ನು ಕಂಡು ನಂಜುಂಡೇಶ್ವರ ಸ್ವಾಮಿಯ ಮಹಿಮೆಗೆ ಭಕ್ತನಾದ ಟಿಪ್ಪೂ, ದೇವಸ್ಥಾನಕ್ಕೆ ಪಚ್ಚೆ ಲಿಂಗವನ್ನು ಉಡುಗೊರೆಯಾಗಿ ಕೊಟ್ಟ. ಅಲ್ಲದೇ, ನಂಜುಂಡೇಶ್ವರನನ್ನು “ಹಕೀಂ ನಂಜುಂಡ” ಎಂದು ಕರೆದ. ಅರೇಬಿಕ್ ಭಾಷೆಯಲ್ಲಿ ಹಕೀಂ ಎಂದರೆ ವೈದ್ಯ, ಗುಣಪಡಿಸುವವ, ಚಿಕಿತ್ಸಕ ಎಂಬ ಅರ್ಥವಿದೆ.

ಟಿಪ್ಪೂ ಮತ್ತು ನಂಜುಂಡೇಶ್ವರನ ನಂಟು ಅಷ್ಟಕ್ಕೇ ಮುಗಿಯುವುದಿಲ್ಲ. ಸ್ವಾಮಿಯ ಅಲಂಕಾರಕ್ಕಾಗಿ ‘ಮಕರ ಕಂಠೀ ಹಾರ’ವನ್ನೂ ಉಡುಗೊರೆಯಾಗಿ ನೀಡಿದ. ಇವತ್ತಿಗೂ ಸಹಾ ವರ್ಷಕ್ಕೊಮ್ಮೆ, ಆಷಾಢ ತಿಂಗಳಿನಲ್ಲಿ ನಡೆಯುವ ಗಿರಿಜಾಕಲ್ಯಾಣದ ಸಂದರ್ಭದಲ್ಲಿ ಆ ಕಂಠೀಹಾರವನ್ನು ಸ್ವಾಮಿಗೆ ಧಾರಣೆ ಮಾಡಲಾಗುತ್ತೆ. ತಾನು ದಾನವಾಗಿ ನೀಡಿದ ಪಚ್ಚೆ ಲಿಂಗದ ಪೂಜೆ ಖರ್ಚಿಗಾಗಿ ತನ್ನ ರಾಜಧಾನಿಯಾದ ಶ್ರೀರಂಗಪಟ್ಟಣ ತಾಲ್ಲೂಕಿನ ಚಂಡೇಗಾಳ ಎಂಬಲ್ಲಿ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಹೆಸರಿಗೆ ಒಂದಿಷ್ಟು ಜಮೀನನ್ನೂ ಬಿಟ್ಟುಕೊಟ್ಟಿದ್ದ.

ಹೀಗೆಲ್ಲ ಧರ್ಮಸಹಿಷ್ಣುವಾಗಿದ್ದ ಟಿಪ್ಪೂವಿಗೆ ಇವತ್ತಿನ ಕೋಮುವಾದಿ-ಸನಾತನವಾದಿ ಕೂಟ ‘ದೇಶದ್ರೋಹಿಯ’ ’ಧರ್ಮಾಂಧನ’ ಪಟ್ಟಕಟ್ಟಲು ಹೆಣಗಾಡುತ್ತಿರುವುದನ್ನು ನೋಡಿದಾಗ, ಅವರಿಗೆ ಈ ಮೇಲಿನ ಘಟನೆಯ ಜೊತೆಗೆ ಇನ್ನೂ ಒಂದಷ್ಟು ಚಾರಿತ್ರಿಕ ಸಂಗತಿಗಳನ್ನು ಹೇಳಬೇಕೆನಿಸುತ್ತದೆ.

  • ತನ್ನ ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಮದ್ಯಸೇವನೆ (ಹೆಂಡದ) ಸೇವನೆಯನ್ನು ರದ್ದು ಮಾಡಿದ್ದು ಟಿಪ್ಪೂ ಸುಲ್ತಾನ್
  • ಯುದ್ಧದಲ್ಲಿ ರಾಕೆಟ್ ತಂತ್ರಜ್ಞಾನವನ್ನು ಮೊಟ್ಟಮೊದಲ ಬಾರಿಗೆ ಪರಿಚಯಿಸಿದ್ದು ಟಿಪ್ಪೂ ಸುಲ್ತಾನ್. ಅದರ ನೆನಪಿಗಾಗಿ ಇಸ್ರೋದಲ್ಲಿ ಇವತ್ತಿಗೂ ಟಿಪ್ಪೂವನ್ನು ಸ್ಮರಿಸಲಾಗುತ್ತದೆ. ಫೋಟೊವಿದೆ.
  • ಮೈಸೂರು ಸಂಸ್ಥಾನಕ್ಕೆ ಮೊಟ್ಟಮೊದಲ ಬಾರಿ ರೇಷ್ಮೆ ಕೃಷಿಯನ್ನು ಪರಿಚಯಿಸಿದ್ದು ಟಿಪ್ಪೂ ಸುಲ್ತಾನ್. ಇವತ್ತಿಗೂ ಇಡೀ ಇಂಡಿಯಾದಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕವೇ ಮೊದಲ (32%) ಸ್ಥಾನದಲ್ಲಿದೆ.
  • ಮೇಲ್ಜಾತಿಗಳ (ಶ್ಯಾನುಭೋಗರ) ಕೈಯಲ್ಲಿದ್ದ ಜಮೀನುಗಳನ್ನು ವಶಕ್ಕೆ ಪಡೆದು ಶ್ರಮಿಕ ಶೂದ್ರ ಸಮುದಾಯಗಳಿಗೆ ವಿತರಣೆ ಮಾಡಿದ್ದು ಟಿಪ್ಪೂ ಸುಲ್ತಾನ್. ಮಂಡ್ಯ-ಮೈಸೂರು ಪ್ರಾಂತ್ಯದಲ್ಲಿ ಒಕ್ಕಲಿಗರು, ಕರಾವಳಿ ಭಾಗದಲ್ಲಿ ಬಿಲ್ಲವ, ಭಂಟರು ಮತ್ತು ಕೊಡಗಿನಲ್ಲಿ ವೀರಶೈವ ರೈತರು ಹಾಗೂ ಸಣ್ಣ ಪ್ರಮಾಣದಲ್ಲಿ ದಲಿತರು ಸಹಾ ಭೂಮಿಯ ಹಕ್ಕನ್ನು ಮೊದಲ ಸಲ ಪಡೆದದ್ದು ಟಿಪ್ಪೂವಿನ ಈ ಕ್ರಾಂತಿಕಾರಿ ಭೂಸುಧಾರಣೆ ನಿಯಮಗಳಿಂದ. ಅಲ್ಲಿಯವರೆಗೆ ಜಮೀನುಗಳೆಲ್ಲ ಶ್ಯಾನಭೋಗರ ಹೆಸರಿನಲ್ಲಿದ್ದವು.
  • ಮಲಬಾರ್ ಪ್ರಾಂತ್ಯದಲ್ಲಿ ಅಸ್ತಿತ್ವದಲ್ಲಿದ್ದ ಕೆಳಜಾತಿಯ ಹೆಣ್ಮಕ್ಕಳು ಎದೆ ಮೇಲೆ ಸೆರಗು ಹೊದೆಯಬಾರದು, ಬೆತ್ತಲಾಗಿರಬೇಕು ಎಂಬ ಅನಿಷ್ಠ ಬ್ರಾಹ್ಮಣಶಾಹಿ ಪದ್ಧತಿಯನ್ನು ರದ್ದು ಮಾಡಿದ್ದು ಟಿಪ್ಪೂ ಸುಲ್ತಾನ್.
  • ಪ್ರತಿವರ್ಷ 156 ಹಿಂದೂ ದೇವಸ್ಥಾನಗಳಿಗೆ ದಾನದತ್ತಿ ನೀಡುತ್ತಿದ್ದುದು ಇದೇ ಟಿಪ್ಪೂ ಸುಲ್ತಾನ್.
  • ಕಂಚಿ ದೇವಸ್ಥಾನದ ನಿರ್ಮಾಣ ಕಾರ್ಯಕ್ಕೆ 10000 ಚಿನ್ನದ ನಾಣ್ಯಗಳನ್ನು ಕೊಟ್ಟಿದ್ದು; ಕಳಲೆಯ ಲಕ್ಷ್ಮೀಕಾಂತ ಸ್ವಾಮಿಗೆ ಉಡುಗೊರೆ ನೀಡಿದ್ದು; ಕೊಲ್ಲೂರಿನ ಮೂಕಾಂಬಿಕೆ ದೇವಿಗೆ ಸಲಾಂ ಆರತಿ ಸಲ್ಲುವಂತೆ ವ್ಯವಸ್ಥೆ ಮಾಡಿದ್ದು; ಮರಾಠರು ಧ್ವಂಸ ಮಾಡಿಹೋದ ಶೃಂಗೇರಿಯ ಶಾರದಾ ಮಠಕ್ಕೆ ಧನಸಹಾಯ ಮಾಡಿ ಜೀರ್ಣೋದ್ಧಾರ ಮಾಡಿದ್ದು ಇದೇ ಟಿಪ್ಪೂ ಸುಲ್ತಾನ್.
  • ಇವತ್ತು ನಾವು ಹೆಮ್ಮೆಯಿಂದ, ಕನ್ನಡಿಗರ ಜೀವನಾಡಿ ಎಂದು ಕರೆಯುವ ಕೆಆರ್‌ಎಸ್ ಡ್ಯಾಂ ಇರುವ ಜಾಗದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಬೇಕೆಂದು ಮೊದಲ ಬಾರಿ ಕನಸು ಕಂಡು, ಪ್ರಯತ್ನಶೀಲನಾದದ್ದು ಟಿಪ್ಪೂ ಸುಲ್ತಾನ್. ಅದಾದ ನೂರು ವರ್ಷಗಳ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಟಿಪ್ಪೂ ಕನಸನ್ನು ಸಾಕಾರಗೊಳಿಸಿದರು.
  • ಕೃಷಿ ಮತ್ತು ತೋಟಗಾರಿಕೆಯ ಅಭಿವೃದ್ಧಿಯಲ್ಲಿ ಸಸ್ಯೋದ್ಯಾನದ ಮಹತ್ವವನ್ನು ಅರಿತು ತನ್ನ ತಂದೆ ಹೈದರ್ ಅಲಿ ಹಾಕಿದ್ದ ಅಡಿಗಲ್ಲಿನನ್ವಯ ಬೆಂಗಳೂರಿನ ಹೃದಯಭಾಗದಲ್ಲಿ ಲಾಲ್‌ಭಾಗ್ ಅನ್ನು ಸ್ಥಾಪಿಸಿದ್ದು ಟಿಪ್ಪೂ ಸುಲ್ತಾನ್.
  • ಮೈಸೂರಿನಲ್ಲಿ ಮೊಟ್ಟಮೊದಲ ಚರ್ಚ್ ಸ್ಥಾಪನಗೆ ಅಡಿಗಲ್ಲು ಹಾಕಿದ್ದು ಟಿಪ್ಪೂ ಸುಲ್ತಾನ್.

ಪಟ್ಟಿ ಬೆಳೆಯುತ್ತಾ ಸಾಗುತ್ತೆ. ಆದರೆ ಇಂತಹ ಚಾರಿತ್ರಿಕ ವಾಸ್ತವಗಳನ್ನು ಸುಳ್ಳುಗಳೆಂದು ಅಳಿದು, ವ್ಯಾಟ್ಸಪ್ ಯೂನಿವರ್ಸಿಟಿಯ ಸುಳ್ಳುಗಳನ್ನೇ ಸತ್ಯವೆಂದು ಸಾಬೀತು ಮಾಡುವ ಹುಂಬರಿಗೆ ಇದೆಲ್ಲ ಅರ್ಥವಾಗುವಂತದ್ದಲ್ಲ. ಮಲಬಾರ್‌ನಲ್ಲಿ ನಾಯರ್‌ಗಳನ್ನು, ಕೊಡಗಿನಲ್ಲಿ ಕೊಡವರನ್ನು ಮತ್ತು ಕರಾವಳಿಯಲ್ಲಿ ಕ್ರೈಸ್ತರನ್ನು ದಮನ ಮಾಡಿದ ತುಂಡುಸತ್ಯಗಳನ್ನಷ್ಟೇ ಕಲೆಹಾಕಿಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಈ ದಮನಗಳು ಮತ್ತು ಮತಾಂತರಗಳು ಸಹಾ, ಒಬ್ಬ ರಾಜನಾಗಿ ರಾಜದ್ರೋಹಿಗಳನ್ನು ಮಟ್ಟಹಾಕಲು ಕೈಗೊಳ್ಳುವ ರಾಜಕೀಯ ತಂತ್ರಗಾರಿಕೆಯ ಭಾಗವಾಗಿದ್ದವೇ ವಿನಾ, ಮತಾಂಧತೆಯಿಂದ ಕೂಡಿರಲಿಲ್ಲ. ಟಿಪ್ಪೂವಿನ ಆಳ್ವಿಕೆಗೆ ಒಳಪಟ್ಟಿದ್ದರೂ ಮಲಬಾರ್‌ನಲ್ಲಿ ನಾಯರ್ ಸಮುದಾಯ ಬ್ರಿಟಿಷರೊಂದಿಗೆ ಕೈಜೋಡಿಸಿ ಟಿಪ್ಪೂವನ್ನು ಪದಚ್ಯುತಿಗೊಳಿಸಲು ಯತ್ನಿಸುತ್ತಿತ್ತು. ಅದನ್ನು ಯಾವ ರಾಜ ತಾನೇ ಸಹಿಸಿಕೊಂಡಾನು.

ಇನ್ನು ಕೊಡಗಿನಲ್ಲಿ ಹಾಲೇರಿ ವೀರಶೈವ ಪಾಳೇಗಾರರ ಸ್ವಾರ್ಥದ ಕುಮ್ಮಕ್ಕಿನಿಂದ, ರಾಜಕೀಯ ಹುನ್ನಾರವನ್ನು ಅರ್ಥ ಮಾಡಿಕೊಳ್ಳದೆ ಕೊಡವರು ಪದೇಪದೇ ಟಿಪ್ಪೂ ವಿರುದ್ಧ ಬಂಡೇಳುತ್ತಲೇ ಇದ್ದರು. ಯಾವುದೇ ರಾಜನಾದವನು ತನ್ನ ಅಧಿಪತ್ಯದಲ್ಲಿ ಭುಗಿಲೇಳುವ ಬಂಡಾಯವನ್ನು ಹತ್ತಿಕ್ಕುವುದು ಸಹಜ. ಇನ್ನು ಕರಾವಳಿ ಭಾಗದ ಕ್ರಿಶ್ಚಿಯನ್ನರು ಪೋರ್ಚುಗೀಸರು ಮತ್ತು ಬ್ರಿಟಿಷರಿಗೆ ನೆರವು ನೀಡಿ, ಟಿಪ್ಪೂವನ್ನು ಮಣಿಸಲು ಹುನ್ನಾರ ನಡೆಸಿದ್ದರೆಂಬ ಮಾಹಿತಿಯ ಆಧಾರದಲ್ಲಿ ಅವರನ್ನು ದಮನ ಮಾಡಿದ.

ಇವತ್ತಿನ ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಬದುಕುತ್ತಿರುವ ನಾವೇ, ಯಾವುದಾದರು ಒಬ್ಬ ಶಾಸಕ ಅಥವಾ ಸಂಸದ ತನ್ನ ಪಕ್ಷದ ವಿರುದ್ಧ ಚಟುವಟಿಕೆ ನಡೆಸಿದರೆ ಅವನನ್ನು ಪಕ್ಷವಿರೋಧಿ ಕಾಯ್ದೆಯನ್ವಯ ಶಿಕ್ಷಿಸುವ, ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಅಧಿಕಾರವನ್ನು ಹೊಂದಿರುವಾಗ, ಇನ್ನೂರು ವರ್ಷಗಳ ಹಿಂದೆ ಒಬ್ಬ ರಾಜನಾಗಿ ತನ್ನ ವಿರುದ್ಧ ಬಂಡೆದ್ದ ಇವರುಗಳ ವಿರುದ್ಧ ಟಿಪ್ಪೂ ನೋಡಿಕೊಂಡು ತೆಪ್ಪಗಿರಬೇಕಿತ್ತೇ?

ಟಿಪ್ಪೂ ಒಬ್ಬ ಅಪ್ರತಿಮ ಆಡಳಿತಗಾರ. ಆಳ್ವಿಕೆ ಮಾಡಿದ ಹದಿನೇಳು ವರ್ಷಗಳ ಪೈಕಿ ಬಹುಪಾಲು ಯುದ್ಧದಲ್ಲೇ ಕಳೆದವನು. ಅಂತಹ ನಿರಂತರ ಆಂತರಿಕ ಮತ್ತು ಬಾಹ್ಯ ಪ್ರತಿರೋಧಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಬ್ರಿಟಿಷರ ಪಾಲಿಗೆ ವ್ಯಾಘ್ರಸ್ವಪ್ನವಾಗಿದ್ದವನು. ಬ್ರಾಹ್ಮಣಶಾಹಿ ಕುತಂತ್ರಗಳಿಗೆ ಇತಿಶ್ರೀ ಹಾಡಿದವನು.

ಶೂದ್ರರು, ದಲಿತರ ಪಾಲಿಗೆ ನೆರವಾದವನು. ಆ ಕಾಲಕ್ಕೇ ವಿದೇಶಾಂಗ ನೀತಿಗಳ ಮೂಲಕ ಪೋರ್ಚುಗೀಸು, ಫ್ರೆಂಚರ ನೆರವು ಪಡೆದು ಬ್ರಿಟಿಷರನ್ನು ಮಣಿಸಲು ಯತ್ನಿಸಿದ್ದ ಅಪ್ಪಟ ದೇಸೀ ದೊರೆ. 1780ರಲ್ಲಿ ತನ್ನ ತಂದೆ ಹೈದರ್ ಅಲಿ ಬರೆದಿದ್ದ ಪತ್ರದಲ್ಲಿ “ಜನರ ಪುಕ್ಕುಲುತನದಿಂದ ನಾವು ಸಿಂಹಾಸನವನ್ನು ಗೆಲ್ಲಬಹುದು. ಆದರೆ ಶೀಘ್ರವಾಗಿ ಅದನ್ನು ಜನರ ಪ್ರೀತಿಗೆ ಒಪ್ಪಿಸದೆ ಹೋದಲ್ಲಿ ಆ ರಾಜ್ಯವು ನಮ್ಮ ಕೈಬಿಟ್ಟು ಹೋಗಬಹುದು” ಎಂಬ ಪಿತೃವಾಕ್ಯಕ್ಕೆ ಕಟ್ಟುಬಿದ್ದು, ಹೆತ್ತಮಕ್ಕಳನ್ನೇ ಅಡವಿಡುವ ಸಂದರ್ಭ ಬಂದಾಗಲೂ ರಾಜ್ಯದ ಹಿತದ ಬಗ್ಗೆ ಚಿಂತಿಸಿದವನು ಟಿಪ್ಪೂ.

ಅಂತಹ ಟಿಪ್ಪೂವಿಗೆ ಮತಾಂಧನ ಮಸಿ ಬಳಿಯಲು ಪರಿವಾರದವರು ಯತ್ನಿಸಿದಷ್ಟೂ ಆತ ಚಾರಿತ್ರಿಕ ಸತ್ಯಗಳಿಂದ ಜನರಿಗೆ ಸನಿಹವಾಗುತ್ತಾ ಸಾಗುತ್ತಾನೆ. ಯಾಕೆಂದರೆ ಟಿಪ್ಪೂ ಸುಲ್ತಾನ್, ಮುಸ್ಲಿಂ ದೊರೆ ಎನ್ನುವುದು ಎಷ್ಟು ನಿರ್ವಿವಾದವೋ, ಆತ ಚಿಸ್ತಿ ಬಂದೇನವಾಜ್ ಸೂಫಿ ಪಂಥಕ್ಕೆ ಸೇರಿದವನು ಎಂಬುದೂ ಅಷ್ಟೇ ಸತ್ಯ. ಕಟ್ಟರ್ ಇಸ್ಲಾಂ ಧೋರಣೆಗೆ ವ್ಯತಿರಿಕ್ತವಾಗಿ ಇಸ್ಲಾಂ ಆಧ್ಯಾತ್ಮ ಮತ್ತು ಮನುಷ್ಯ ಪ್ರೀತಿಯ ಸುತ್ತ ತನ್ನ ರೂಹನ್ನು ಕಟ್ಟಿಕೊಂಡ ಸೂಫಿ ಪಂಥದ ಬಗ್ಗೆ ತಿಳಿದವರಿಗೆ ಮಾತ್ರ ಟಿಪ್ಪೂ ಸುಲ್ತಾನನ ವ್ಯಕ್ತಿತ್ವ ಅರ್ಥವಾಗುತ್ತೆ.

ಕೊನೆಯದಾಗಿ, ಕೋಮುವಾದಿ ಮನಸ್ಸುಗಳಿಗೆ ಒಂದು ಪ್ರಶ್ನೆ. ನೀವು ಆರೋಪಿಸುತ್ತಿರುವಂತೆ ಟಿಪ್ಪೂ ಮತಾಂಧನೇ ಆಗಿದ್ದರೆ, ಬಲವಂತದ ಇಸ್ಲಾಂ ಮತಾಂತರವೇ ಅವನ ಉದ್ದೇಶವಾಗಿದ್ದರೆ, ಹಿಂದೂ ದೇವಸ್ಥಾನಗಳನ್ನು ನಾಶ ಮಾಡುವಷ್ಟು ಧರ್ಮದ ಪಿತ್ತ ಅವನಿಗೇರಿದ್ದರೆ, ಅವನ ಕೊನೆಯ ಉಸಿರಿನವರೆಗೂ ಆತನ ರಾಜಧಾನಿಯಾಗಿದ್ದ, ಈಗಲೂ ಆತನ ಸಮಾಧಿಯಿರುವ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನವನ್ನೇಕೆ ಆತ ನಾಶ ಮಾಡಲಿಲ್ಲ? ಅಡ್ಡಂಡ ಎಂಬ ಅವಿವೇಕಿ ಬರೆದ ನಾಟಕದ ಮುಖಪುಟದಲ್ಲಿ ಚಿತ್ರಿಸಲಾದ ವಿಕೃತ ಮುಖಭಾವದ ಟಿಪ್ಪೂವೊಬ್ಬ ತನ್ನ ರಾಜಧಾನಿಯಲ್ಲೇ ಹಿಂದೂ ದೇವಸ್ಥಾನವನ್ನು ಸಮೃದ್ಧವಾಗಿ ಉಳಿಯಗೊಡಲು ಸಾಧ್ಯವಿತ್ತೇ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!