Friday, September 20, 2024

ಪ್ರಾಯೋಗಿಕ ಆವೃತ್ತಿ

ಕೋಮುವಾದಿ ರಾಜಕೀಯಕ್ಕೆ ಮಂಡ್ಯದ ಜನರು ಅವಕಾಶ ಕೊಡಲ್ಲ : ಪಿ.ಎಂ‌.ನರೇಂದ್ರಸ್ವಾಮಿ

 


  • ಧರ್ಮ ಪ್ರಚೋದನೆ ಮಾಡಿ, ಜಾತಿಯ ವಿಷ ಬೀಜ ಬಿತ್ತುವ ರಾಜಕಾರಣಕ್ಕೆ ಜಿಲ್ಲೆಯ ಜನರು ಎಂದಿಗೂ ಅವಕಾಶ ನೀಡುವುದಿಲ್ಲ.

  • 13 ಬಜೆಟ್ ಗಳನ್ನು ಕೊಟ್ಟ ಸಿದ್ದರಾಮಯ್ಯನವರು ಒಂದು ಜಾತಿ, ಧರ್ಮ ಎಂದು ನೋಡದೆ ಎಲ್ಲರಿಗೂ ಸಮಾನವಾಗಿ ಅಭಿವೃದ್ಧಿ ಮಾಡಿದ ಏಕೈಕ ನಾಯಕ

ಧರ್ಮ ಪ್ರಚೋದನೆ ಮಾಡಿ, ಜಾತಿಗಳನ್ನು ಎತ್ತಿ ಕಟ್ಟಿ ಚುನಾವಣೆ ನಡೆಸಲು ಬಿಜೆಪಿ ಹೊರಟಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಮಂಡ್ಯದ ಜನರು ಕೋಮುವಾದಿ ರಾಜಕಾರಣಕ್ಕೆ ಎಂದಿಗೂ ಅವಕಾಶ ಕೊಡಲ್ಲ ಎಂದು ಕೆ.ಪಿ.ಸಿಸಿ. ಉಪಾಧ್ಯಕ್ಷ ಪಿ.ಎಂ‌.ನರೇಂದ್ರಸ್ವಾಮಿ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುಂಭಾಗ ಕಾಂಗ್ರೆಸ್ ಪಕ್ಷ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಚುನಾವಣೆ ಬಂದಾಗ ಬಿಜೆಪಿಗೆ ಧರ್ಮದ ರಾಜಕಾರಣ ನೆನಪಾಗಿದೆ. ಶ್ರೀರಂಗಪಟ್ಟಣ ವಿಚಾರ, ಟಿಪ್ಪು ಸುಲ್ತಾನ್ ವಿಚಾರ ಈಗ ಅವರಿಗೇಕೆ ಬೇಕು. ಟಿಪ್ಪು ಸುಲ್ತಾನ್ ಧರ್ಮ ವಿರೋಧಿಯಾಗಿದ್ದರೆ, ಶ್ರೀರಂಗನಾಥ ಸ್ವಾಮಿ ದೇವಾಲಯ ಇರುತಿತ್ತಾ, ಅಶ್ವಥ್ ನಾರಾಯಣ್ ನಿನ್ನ ಕಣ್ಣು ಕುರುಡಾಗಿದ್ಯಾ ಹೋಗಿ ನೋಡಿಕೊಂಡು ಬಾ. ಇದುವರೆಗೆ ಮಂಡ್ಯ ಜಿಲ್ಲೆಯಲ್ಲಿ ಶಾಂತಿಯಿಂದ ಚುನಾವಣೆ ನಡೆದಿದೆ. ಜಾತಿ,ಧರ್ಮ ಆಧಾರಿತವಾಗಿ ಒಂದು ಚುನಾವಣೆಯೂ ನಡೆದಿಲ್ಲ. ಧರ್ಮ ಪ್ರಚೋದನೆ ಮಾಡಿ, ಜಾತಿಯ ವಿಷ ಬೀಜ ಬಿತ್ತುವ ರಾಜಕಾರಣಕ್ಕೆ ಜಿಲ್ಲೆಯ ಜನರು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಕಿಡಿ ಕಾರಿದರು.

ಬಹಿರಂಗ ಕ್ಷಮೆಗೆ ಆಗ್ರಹ
ಸಿದ್ದರಾಮಯ್ಯ ಅವರನ್ನು ಟಿಪ್ಪು ಕೊಂದ ಹಾಗೆ ಕೊಲ್ಲಬೇಕು ಎಂದು ಹೇಳಿರುವ ಅಶ್ವಥ್ ನಾರಾಯಣ್, ಉನ್ನತ ಶಿಕ್ಷಣ ಸಚಿವನಾಗಲು ನಾಲಾಯಕ್. ಈತ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜನರೇ ಮುಂಬರುವ ಚುನಾವಣೆಯಲ್ಲಿ ಆತನಿಗೆ ತಕ್ಕ ಉತ್ತರ ನೀಡುತ್ತಾರೆ. ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾಡಳಿತ ಈ ನೀತಿಗೆಟ್ಟ ರಾಜಕಾರಣಿಯನ್ನು ಖಂಡಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಅಶ್ವಥ್ ನಾರಾಯಣ್ ಮೇಲೆ ಸುಮೋಟೋ ಪ್ರಕರಣ ದಾಖಲಿಸಬೇಕು.ಈ ಬಗ್ಗೆ ನಾವು ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಸಿದ್ದರಾಮಯ್ಯನವರು ಎಲ್ಲಾ ವರ್ಗದ ಜನರಿಗೂ ಅಭಿವೃದ್ಧಿಯ ಕೆಲಸ ಮಾಡಿದ್ದಾರೆ. 13 ಬಜೆಟ್ ಗಳನ್ನು ಕೊಟ್ಟ ಸಿದ್ದರಾಮಯ್ಯನವರು ಒಂದು ಜಾತಿ, ಧರ್ಮ ಎಂದು ನೋಡದೆ ಎಲ್ಲರಿಗೂ ಸಮಾನವಾಗಿ ಅಭಿವೃದ್ಧಿ ಮಾಡಿದ ಏಕೈಕ ನಾಯಕ. ಅವರು ಜನಮಾನಸದಲ್ಲಿರುವ ವ್ಯಕ್ತಿ ಎಂದರು.

ಒಕ್ಕಲಿಗರಿಗೆ ಅವಮಾನ
ಬಿಜೆಪಿ, ಸಂಘ ಪರಿವಾರ ಮೊದಲು ಈ ದೇಶದ ಸಂವಿಧಾನವನ್ನು ಓದಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗದ ವ್ಯಕ್ತಿ ಈ ದೇಶದ ಪ್ರಧಾನಿಯಾಗಲು ಸಂವಿಧಾನವೇ ಕಾರಣ. ಮಂಡ್ಯದ ಒಕ್ಕಲಿಗರನ್ನು ಮುಸಲ್ಮಾನರ ವಿರುದ್ಧ ಎತ್ತಿಕಟ್ಟಿ ರಾಜಕಾರಣ ಮಾಡಲು ಹೊರಟಿರುವ ಅಶ್ವಥ್ ನಾರಾಯಣ್ ಈ ಕೂಡಲೇ ಕ್ಷಮೆ ಕೇಳಬೇಕು. ಇತಿಹಾಸದಲ್ಲಿ ಎಂದೂ ಇಲ್ಲದ ಉರಿಗೌಡ ನಂಜೇಗೌಡರನ್ನ ಸೃಷ್ಟಿ ಮಾಡಿ ಟಿಪ್ಪು ಸುಲ್ತಾನನ್ನು ಕೊಂದ ಎನ್ನುವ ಮೂಲಕ ಒಕ್ಕಲಿಗರಿಗೆ ಅವಮಾನ ಮಾಡಲು ಹೊರಟಿದ್ದಾರೆ. ಏಯ್ ಅಶ್ವಥ್ ನಾರಾಯಣ್ ಎಚ್ಚರದಲ್ಲಿರು, ಇದು ಮಂಡ್ಯ ಎಂದು ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ  ದಡದಪುರ ಶಿವಣ್ಣ ಮಾತನಾಡಿ, ಸಿದ್ದರಾಮಯ್ಯನವರು ಯಾವ ಅಪರಾಧ ಮಾಡಿದ್ದಾರೆಂದು ಕೊಲೆ ಮಾಡಿ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೋ,ಅವರಿಗೆ ನಾಚಿಕೆಯಾಗಬೇಕು. ಸಿದ್ದರಾಮಯ್ಯನವರು ಗಾಂಧಿವಾದಿ, ಲೋಹಿಯಾ ವಾದಿ, ಕುವೆಂಪುವಾದಿ, ಅಂಬೇಡ್ಕರ್ ವಾದಿ, ಬಸವಣ್ಣವಾದಿಯಾಗಿ ಜನಪರ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅವರ ಮೇಲೆ ಒಂದು ಕಪ್ಪು ಚುಕ್ಕೆಯೂ ಇಲ್ಲ. 40% ಭ್ರಷ್ಟ ಸರ್ಕಾರದ ಅಶ್ವಥ್ ನಾರಾಯಣ್,ನಿನಗೆ ಒಬ್ಬ ಪ್ರಾಮಾಣಿಕ ವ್ಯಕ್ತಿಯ ವಿರುದ್ಧ ಮಾತನಾಡಲು ಯಾವ ನೈತಿಕತೆ ಇದೆ.ಸರ್ಕಾರ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.

ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರೆಲ್ಲ ಒಂದೇ ತಾಯಿಯ ಮಕ್ಕಳಂತೆ ಭಾವಿಸಿದ ಸಿದ್ದರಾಮಯ್ಯನವರು ವಿರುದ್ಧ ಆರ್. ಎಸ್. ಎಸ್. ಹೇಳಿಕೊಟ್ಟಂತೆ ಹೇಳುವ ಮೂಲಕ ಅಶ್ವಥ್ ನಾರಾಯಣ್ ತಪ್ಪು ಮಾಡಿದ್ದಾರೆ. ಈ ಜಿಲ್ಲೆಯ ಒಕ್ಕಲಿಗ ಸಮುದಾಯದ ಕೆ‌ ವಿ.ಶಂಕರಗೌಡ, ಜಿ. ಮಾದೇಗೌಡ, ಎಸ್. ಎಂ. ಕೃಷ್ಣ, ಎಚ್. ಡಿ. ಚೌಡಯ್ಯ, ನಾಗೇಗೌಡರಂತಹ ಮುತ್ಸದ್ದಿ ರಾಜಕಾರಣಿಗಳನ್ನು ಕಂಡಿರುವ ಒಕ್ಕಲಿಗ ಸಮುದಾಯ ಈತನಿಗೆ ಸರಿಯಾದ ಪಾಠ ಕಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಅಶ್ವಥ್ ನಾರಾಯಣ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ಎಚ್.ಎಲ್. ನಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮಾಜಿ ಶಾಸಕರಾದ ಕೆ. ಬಿ‌. ಚಂದ್ರಶೇಖರ್, ಎಚ್. ಬಿ. ರಾಮು,ಮಾಜಿ ಸಚಿವ ಎಂ.ಎಸ್. ಆತ್ಮಾನಂದ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮಹಿಳಾ ಜಿಲ್ಲಾಧ್ಯಕ್ಷ ಅಂಜನಾ ಶ್ರೀಕಾಂತ್,  ಗಣಿಗ ರವಿ ಕುಮಾರ್, ಡಾ. ಕೃಷ್ಣ, ಉಮ್ಮಡಹಳ್ಳಿ ಶಿವಪ್ಪ, ಕೀಲಾರ ರಾಧಾಕೃಷ್ಣ, ಎಂ. ಎಸ್. ಚಿದಂಬರ್, ನಗರಸಭಾ ಸದಸ್ಯರಾದ ಪೂರ್ಣಿಮಾ ರಾಮಲಿಂಗಯ್ಯ, ನಯೀಂ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!