ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಎಲ್ಲಾ ಮಾದರಿಯ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಪ್ರತಿ ಲೀಟರಿಗೆ 2 ರೂ.ಹೆಚ್ಚಳ ಮಾಡಿ ಪರಿಷ್ಕರಿಸಿದ್ದು,ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2ರೂ. ಹೆಚ್ಚಳ ಮಾಡಿದೆ. ನಾಳೆಯಿಂದಲೇ ಹೊಸ ದರ ಅನ್ವಯವಾಗಲಿದ್ದು, ಗ್ರಾಹಕರಿಂದ ಹೆಚ್ಚುವರಿಯಾಗಿ 2 ರೂ.ಪಡೆದು ಹಾಲು ಉತ್ಪಾದಕರಿಗೆ ನೀಡಿದೆ.

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಹಾಲಿನ ಗುಣಮಟ್ಟ ಶೇ.4.0 ಜಿಡ್ಡು ಮತ್ತು ಶೇ.8.5 ಜಿಡ್ಡೇತರ ಘನಾಂಶವಿರುವ ಪ್ರತಿ ಲೀಟರ್ ಹಾಲಿಗೆ ಸಂಘಗಳಿಗೆ ಪ್ರಸ್ತುತ ಇರುವ 30.15 ರೂ.ಗಳಿಂದ 32.15 ರೂ.ಗಳಿಗೆ ಹೆಚ್ಚಿಸಲಾಗಿದೆ. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ದರವನ್ನು 29.25 ರಿಂದ 31.25 ಕ್ಕೆ ಹೆಚ್ಚಿಸಲಾಗಿದೆ.
ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಪ್ರಸ್ತುತ ಪ್ರತಿನಿತ್ಯ ಸರಾಸರಿ 8.75 ಲಕ್ಷದಿಂದ 9.0 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿರುತ್ತದೆ. ಈ ಪೈಕಿ ದಿನವಹಿ 30 ಲಕ್ಷ ಲೀಟರ್ ಹಾಲು ಹಾಗೂ 50,000 ಕೆ.ಜಿ. ಮೊಸರು ಮಾರಾಟ ಮಾಡಲಾಗುತ್ತಿರುತ್ತದೆ.
ಪರಿಷ್ಕೃತ ದರದಲ್ಲಿ ಅಂದಾಜು ಒಟ್ಟು 3.5 ಲಕ್ಷ ಲೀಟರ್ ಹಾಲು ಮತ್ತು ಮೊಸರಿಗೆ ಮಾತ್ರ ರೂ.2ರಂತೆ ಹೆಚ್ಚಳದ ಲಾಭ ಒಕ್ಕೂಟಕ್ಕೆ ಲಭಿಸುತ್ತಿದೆ. ಅದ್ಯಾಗ್ಯೂ ಹಾಲು ಉತ್ಪಾದಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಹಾಲು ಉತ್ಪಾದಕರ ಹೈನು ರಾಸುಗಳ ನಿರ್ವಹಣೆ ಖರ್ಚು-ವೆಚ್ಚಗಳು ಹೆಚ್ಚಾಗಿರುವುದರಿಂದ, ರೈತರು ಹೈನೋದ್ಯಮದಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ರೂ.2 ಹೆಚ್ಚಳ ಮಾಡಲಾಗಿದೆ ಎಂದು ಮನ್ ಮುಲ್ ಆಡಳಿತ ಮಂಡಳಿ ತಿಳಿಸಿದೆ.




