Friday, September 20, 2024

ಪ್ರಾಯೋಗಿಕ ಆವೃತ್ತಿ

ಮಾಜಿ ಸಿಎಂ ಸಿದ್ದರಾಮಯ್ಯಗೆ ಸ್ಪರ್ಧಿಸಲು ಕ್ಷೇತ್ರವಿಲ್ಲ : ನಳಿನ್ ಕುಮಾರ್ ಕಟೀಲ್

ಮಾಜಿ ಸಿಎಂ ಸಿದ್ದರಾಮಯ್ಯಗೇ ಸ್ಪರ್ಧಿಸಲು ಕ್ಷೇತ್ರವಿಲ್ಲ, ಅವರಿಗೆ ಕ್ಷೇತ್ರವಿಲ್ಲದಿರುವಾಗ ಪಕ್ಷದ ಶಾಸಕರಿಗೆ ನೆಲೆ ಎಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಶ್ರೀರಂಗಪಟ್ಟಣ ಪಟ್ಟಣದ ಶ್ರೀ ನಿಮಿಷಾಂಭ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಬಿಡಲು ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ತಮ್ಮವರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಜನವರಿ-ಫೆಬ್ರವರಿಯಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮನೆ ಖಾಲಿಯಾಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬೇರೆ ಪಕ್ಷಗಳ ಮುಖಂಡರನ್ನು ಆಹ್ವಾನಿಸುತ್ತಿದ್ದಾರೆ. ಮೊದಲು ತಮ್ಮ ಪಕ್ಷದವರನ್ನು ಹಿಡಿದಿಟ್ಟುಕೊಳ್ಳಲಿ, ನಂತರ ಬೇರೆಯವರನ್ನು ಆಹ್ವಾನಿಸಲಿ ಎಂದು ವ್ಯಂಗ್ಯವಾಡಿದರು.

ಜಗತ್ತೇ ಬುಡಮೇಲಾದರೂ ಪಕ್ಷದಿಂದ ಹೊರ ಹೋದವರನ್ನು ಮತ್ತೆ ವಾಪಸ್ ಕರೆದುಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯಿಂದ ಪಕ್ಷ ಅತಂತ್ರ ಸ್ಥಿತಿಯಲ್ಲಿದೆ ಎಂಬುದು ಗೊತ್ತಾಗುತ್ತೆ, ಹೊರ ಹೋದವರನ್ನು ಕರೆಯುವುದಿಲ್ಲ ಎಂದು ಹೇಳಿದ್ದವರು ಮತ್ತೆ, ಈಗ ವಾಪಸ್ ಕರೆಯುತ್ತಿದ್ದಾರೆ ಎಂದರೆ, ಕಾಂಗ್ರೆಸ್‌ನವರ ಪರಿಸ್ಥಿತಿ ಹೇಗಿರಬೇಕು ಎಂಬುದು ತಿಳಿಯುತ್ತದೆ ಎಂದರು.

ಮಂಡ್ಯ ಜಿಲ್ಲೆಯಲ್ಲೂ ಸಂಘಟನೆ ಭದ್ರವಾಗಿದೆ. ಸಂಘಟನಾ ಕಾರ್ಯ ಕಾಣುವಂತೆ ಮಾಡುವುದಿಲ್ಲ. ನಾವು ಬೇರೆಯವರ ರೀತಿ ಬಂಡೆ, ಹುಲಿಯಾ ಎಂದು ರಾಜಕಾರಣ ಮಾಡುವುದಿಲ್ಲ. ಕಾರ್ಯಕರ್ತರ ಹೃದಯ ಗೆದ್ದು ಮಾಡುವಂತಹುದ್ದು. ಸಂಘಟನಾ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ಅದರಲ್ಲಿ ಯಾವುದೇ ಕೊರತೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅನೇಕ ನಾಯಕರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಬೇರೆ ಬೇರೆ ಹಂತಗಳಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರೂ ಸಹ ಮಾತುಕತೆ ಮಾಡುತ್ತಿದ್ದಾರೆ. ಎಲ್ಲವನ್ನೂ ಕಾದು ನೋಡಿ ಎಂದು ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಹಳೇ ಮೈಸೂರು ಭಾಗದಲ್ಲಿ ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ಕಳೆಗುಂದಿತ್ತು. ಅದರಲ್ಲೂ ವಿಶೇಷವಾಗಿ ಮಂಡ್ಯದಲ್ಲಿ ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಶಾಸಕರು ಆಯ್ಕೆಯಾಗುವ ಮೂಲಕ ಶಕ್ತಿ ದೊರೆತಿದೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಮರ‍್ನಾಲ್ಕು ಮಂದಿ ಶಾಸಕರು ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಬಗ್ಗೆ ಜನರಿಗೆ ನಿರಾಸೆಯುಂಟಾಗಿದೆ. ಜಾ.ದಳ ಕುಟುಂಬಕ್ಕೆ ಸೀಮಿತವಾಗಿದೆ. ಎರಡೂ ಪಕ್ಷಗಳನ್ನು ತೊರೆದು ಜನ ನಮ್ಮ ಪಕ್ಷದತ್ತ ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಯೋಜನೆ, ಅನುಷ್ಠಾನ ಅಭಿವೃದ್ಧಿ ಕಾರ್ಯಗಳು ಜನಮನ ಸೆಳೆಯುತ್ತಿದೆ. ರಾಜ್ಯದಲ್ಲೂ ಸಹ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರು ಉತ್ತಮವಾಗಿ ಆಡಳಿತ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಜನ ನಮ್ಮ ಪಕ್ಷದ ಪರವಾಗಿದ್ದಾರೆ ಎಂದು ಹೇಳಿದರು.

ಸಾವಿನ ಬಗ್ಗೆ ತನಿಖೆ 

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಸಾವು  ಅನುಮಾನಾಸ್ಪದವಾಗಿದ್ದು, ಈ ಬಗ್ಗೆ ನಮ್ಮ ಸರ್ಕಾರ ತನಿಖೆಯನ್ನು ತೀವ್ರಗೊಳಿಸಿದೆ ಎಂದರು. ಈ ದುರ್ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಎಲ್ಲ ಹಂತದಲ್ಲೂ ತನಿಖೆ ನಡೆಸುತ್ತಿದ್ದಾರೆ. ಬಹಳಷ್ಟು ಅನುಮಾನಗಳು ಇವೆ. ನಮಗೂ ಸಹ ಈ ಸಾವಿನ ಬಗ್ಗೆ ಅನುಮಾನ ಇದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಜಿಲ್ಲಾ ಉಸ್ತುವಾರಿ ಜಗದೀಶ್ ಹಿರೇಮನಿ, ಮುಖಂಡರಾದ ಡಾ. ಸಿದ್ದರಾಮಯ್ಯ, ಇಂದ್ರೇಶ್, ಮುನಿರಾಜು, ಅರುಣ್ ಕುಮಾರ್, ಸುರೇಶ್, ಎಸ್.ಪಿ. ಸ್ವಾಮಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!