Saturday, May 18, 2024

ಪ್ರಾಯೋಗಿಕ ಆವೃತ್ತಿ

ನಳಿನ್ ಕುಮಾರ್ ಕಟೀಲ್ ಬೌದ್ಧಿಕವಾಗಿ ದಿವಾಳಿ : ನರೇಂದ್ರಸ್ವಾಮಿ ಟೀಕೆ

ಬೌದ್ಧಿಕವಾಗಿ ದಿವಾಳಿತನ ಹೊಂದಿರುವ ವ್ಯಕ್ತಿ ನಳಿನ್ ಕುಮಾರ್ ಕಟೀಲ್, ನಾಯಕತ್ವದ ಗುಣವಿಲ್ಲದ, ಒಂದು ಪಕ್ಷದ ಬೇಜವಾಬ್ದಾರಿ ವ್ಯಕ್ತಿ, ಅವರಿಗೆ ನರೇಂದ್ರ ಮೋದಿ ಹೆಸರು ಬಿಟ್ಟರೆ, ಅವರ ಸ್ವಂತ ನಾಯಕತ್ವವಿಲ್ಲ ಎಂದು ಮಾಜಿ ಸಚಿವ ನರೇಂದ್ರಸ್ವಾಮಿ ಟೀಕಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಹಲವು ನಾಯಕರು, ಶಾಸಕರು ಇನ್ನು ಕೆಲವು ದಿನಗಳಲ್ಲಿ ಬಿಜೆಪಿ ಸೇರುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಉಳಿಯಲು ಯಾರೂ ಇರುವುದಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ನಾಯಕತ್ವದ ಗುಣವಿಲ್ಲದ ಕಟೀಲ್ ಅಂಥವರ ಬಗ್ಗೆ ಮಾತನಾಡುವುದೇ ವ್ಯರ್ಥ ಎಂದರು.

ಸುಳ್ಳೇ ಅವರ ಮನೆ ದೇವರು

ಬಿಜೆಪಿಯವರು ಸುಳ್ಳನ್ನು ಮನೆ ದೇವರನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಇವತ್ತಿನ ಆರ್ಥಿಕ ಪರಿಸ್ಥಿತಿಯನ್ನು ಕಂಡು ಇಡೀ ವಿಶ್ವದ ಜನ ಭಾರತವನ್ನು ಆತಂಕದಿಂದ ನೋಡುತ್ತಿದ್ದಾರೆ. ಮನಮೋಹನ್ ಸಿಂಗ್ ಅವರ ಆಡಳಿತದಲ್ಲಿ ಆರ್ಥಿಕ ಪರಿಸ್ಥಿತಿ ಯಾವ ರೀತಿ ಇತ್ತು, ಸಿದ್ದರಾಮಯ್ಯ ಅವರು ಮಾಡಿದ ಆಡಳಿತ ಹೇಗಿತ್ತು, ಬಿಜೆಪಿ ಆಡಳಿತಕ್ಕೆ ಬಂದ ನಂತರ ರಾಜ್ಯದ ಸ್ಥಿತಿ ಏನಾಗಿದೆ ಎಂಬ ಬಗ್ಗೆ ಜನರು ನೋಡುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸರ್ವಾಧಿಕಾರಿ ಆಡಳಿತಕ್ಕೆ ರಾಜ್ಯದ ಜನರು ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿಯವರಿಗೆ ಭಾವನಾತ್ಮಕ ವಿಚಾರವನ್ನು ಇಟ್ಟುಕೊಂಡು ರಾಜಕೀಯ ಮಾಡುವುದನ್ನು ಬಿಟ್ಟಿರೆ ಬೇರೇನೂ ಗತಿಯಿಲ್ಲ, ರಾಜ್ಯದಲ್ಲಿ ಈಗಾಗಲೇ ಪೇ ಸಿಎಂ, ಸೇ ಸಿಎಂ ಅಭಿಯಾನವನ್ನು ಕಾಂಗ್ರೆಸ್ ಪಕ್ಷ ಯಶಸ್ವಿಯಾಗಿ ನಡೆಸಿದೆ, ರಾಜ್ಯ ಸರ್ಕಾರ ಶೇ.40 ಕಮಿಷನ್ ಪಡೆಯುತ್ತಿದೆ ಎಂದು ಈಗಾಗಲೇ ಜಗಜ್ಜಾಹೀರಾಗಿದೆ. ಇಂತಹ ಪಕ್ಷದ ಮುಖಂಡರ ಬಂಡವಾಳವನ್ನು ಕಾಂಗ್ರೆಸ್ ಪಕ್ಷ ಬಿಚ್ಚಿಡುವ ಕೆಲಸ ಮಾಡುತ್ತಿದೆ ಎಂದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡ ಡಾ.ಕೃಷ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!