Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಧು ಜಿ. ಮಾದೇಗೌಡ ಬೆಂಬಲಿಸಲು ನಿರ್ಧಾರ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಅವರನ್ನು ಬೆಂಬಲಿಸಲು ನಿವೃತ್ತ ಪ್ರಾಧ್ಯಾಪಕರ ಒಕ್ಕೂಟ ನಿರ್ಧರಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಪ್ರೊ.ಬಿ.ಎಸ್.ಬೋರೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತಿ ಎಜುಕೇಷನ್ ಟ್ರಸ್ಟ್‌ನಲ್ಲಿ ಓದಿದ ಹಾಗೂ ಕೆಲಸ ಮಾಡಿದ ನಿವೃತ್ತ ಪ್ರಾಧ್ಯಾಪಕರೆಲ್ಲರೂ ಸೇರಿಕೊಂಡು ನಿವೃತ್ತ ಪ್ರಾಧ್ಯಾಪಕರ ಒಕ್ಕೂಟ ರಚಿಸಿಕೊಂಡಿದ್ದೇವೆ.

ಭಾರತಿ ಎಜುಕೇಷನ್ ಟ್ರಸ್ಟ್ ನಮಗೆ ಕೆಲಸ ನೀಡುವ ಮೂಲಕ ನಮಗೆ ಅನ್ನ ನೀಡಿದೆ.ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ನಮ್ಮ ಸೇವೆಯೂ ಸೇರಿದ್ದು, ನಮ್ಮೆಲ್ಲರಿಗೂ ಅನ್ನದಾತರಾಗಿದ್ದ ಮಾಜಿ ಸಂಸದ ಜಿ.ಮಾದೇಗೌಡರ ಋಣ ತೀರಿಸುವ ಅವಕಾಶ ದೊರೆತಿದೆ. ಹೀಗಾಗಿ ಮಾದೇಗೌಡರ ಪುತ್ರ ಮಧು ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿ ಮಾದೇಗೌಡರ ಮತ್ತು ಸಂಸ್ಥೆಯ ಋಣ ತೀರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಮಧು ಜಿ.ಮಾದೇಗೌಡರು ಕೂಡ ಭಾರತಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾಗಿ ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಇಂದಿನ ಯುವಜನರಿಗೆ ಬೇಕಾಗಿರುವ ಶಿಕ್ಷಣ, ಆರೋಗ್ಯ ಮತ್ತು ಸ್ವಾವಲಂಬಿ ಬದುಕು ರೂಪಿಸುವುದಕ್ಕೆ ವಿಶೇಷವಾದ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಇವರ ಮತ್ತಷ್ಟು ಸಮಾಜಮುಖಿ ಕೆಲಸ ಕಾರ‌್ಯಗಳಿಗೆ ಶಕ್ತಿ ತುಂಬಲು ರಾಜಕೀಯ ಶಕ್ತಿ ಅಗತ್ಯವಾಗಿದೆ ಎಂದರು.

ಭಾರತಿ ಎಜುಕೇಶನ್ ವಿದ್ಯಾಸಂಸ್ಥೆಯಲ್ಲಿ ವಿದ್ಯೆ ಕಲಿತು ಹೊರ ಬಂದ ಲಕ್ಷಾಂತರ ಗ್ರಾಮೀಣ ಯುವಜನರು ಇಂದು ಬೇರೆ ಬೇರೆ ಭಾಗಗಳಲ್ಲಿ ಉದ್ಯೋಗಿಗಳಾಗಿ, ಹಸನಾದ ಜೀವನ ಸಾಗಿಸುತ್ತಿದ್ದಾರೆ. ಅವರೆಲ್ಲರನ್ನೂ ಭೇಟಿಯಾಗಿ ಮಧು ಮಾದೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡುತ್ತೇವೆ ಎಂದರು.

ಗೋಷ್ಠಿಯಲ್ಲಿ ಒಕ್ಕೂಟದ ಸದಸ್ಯರಾದ ಟಿ.ಹನುಮಯ್ಯ ನಿಂಗಣ್ಣ ಪ್ರೊ.ಆರ್.ಪಿ.ನಾಗರಾಜು, ಪ್ರೊ.ಎಚ್.ಬಿಳೀಗೌಡ, ಪ್ರೊಎಸ್.ಬಿ.ನಾಗರಾಜು, ಪ್ರೊ.ನಾಗರಾಜು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!