ಮದ್ದೂರು ತಾಲ್ಲೂಕಿನ ಭಾರತಿನಗರದ ಮಾರಿಗುಡಿ ಬೀದಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀವೆಂಕಟೇಶ್ವರಸ್ವಾಮಿ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವ ಜೂ.7ರಿಂದ 9ರವರೆಗೆ ನಡೆಯಲಿದೆ ಎಂದು ಶ್ರೀವೆಂಕಟೇಶ್ವರಸ್ವಾಮಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಪೂಜೂರಿ ವೆಂಕಟೇಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್ 7ರಿಂದ 9 ರವರೆಗೆ ವಿವಿಧ ದೇವತಾ ಕಾರ್ಯಗಳು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೆಂಕಟೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದರು.
ಟ್ರಸ್ಟ್ ನಿರ್ದೇಶಕ ಬಿ.ಟಿ.ವೆಂಕಟೇಶ್ ಮಾತನಾಡಿ, ಇಟ್ಟಿಗೆಗಳನ್ನು ಬಳಸದೆ ಸಂಪೂರ್ಣ ಕಲ್ಲುಗಳಿಂದಲೇ ಕಟ್ಟಿರುವ ವೆಂಕಟೇಶ್ವರ ಸ್ವಾಮಿ ದೇವಾಲಯ ಬಹಳ ಸುಂದರವಾಗಿ ನಿರ್ಮಾಣಗೊಂಡಿದೆ. 7.1 ಅಡಿ ಎತ್ತರವುಳ್ಳ ಪೀಠ ಹಾಗೂ ಐದೂವರೆ ಅಡಿ ಎತ್ತರದ ಶ್ರೀವೆಂಕಟೇಶ್ವರಸ್ವಾಮಿಯ ಮೂರ್ತಿಯನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ವಾಸ್ತುಶಿಲ್ಪಿ ಬಿಡದಿಯ ಸುರೇಶ್ ಗುಡಿಕಾರ ಅವರು ಕೃಷ್ಣಶಿಲೆಯಿಂದ ಕೆತ್ತನೆ ಮಾಡಿದ್ದಾರೆ ಎಂದರು.
ತಮಿಳುನಾಡಿನ ವಿರುದುನಗರದ ಶಿಲ್ಪಿ ಎ.ರಾಜಪಾಂಡಿ ಎಂಬುವರು ದೇವಾಲಯದ ನಿರ್ಮಾಣದ ಜವಾಬ್ದಾರಿ ಹೊತ್ತು ಸಮರ್ಥವಾಗಿ ನಿಭಾಯಿಸಿದ್ದಾರೆ. ಈಗಾಗಲೇ ವಿಗ್ರಹವನ್ನು ದೇವಾಲಯಕ್ಕೆ ತರಲಾಗಿದ್ದು, ಜೂ.7ರಂದು ನಾನಾ ದೇಗುಲಗಳ ಬಸವಗಳು, ಪೂಜೆಗಳ ಮೆರವಣಿಗೆ, ಜಲಯಾತ್ರೆ ಯಾಗಶಾಲಾ, ಪ್ರವೇಶ ದ್ವಾರ, ಧ್ವಜ, ಕುಂಭದೊಂದಿಗೆ ವಿಗ್ರಹ ಪ್ರತಿಷ್ಠಾಪಿಸಿ, ಆರಾಧನೆಯೊಂದಿಗೆ ಮಹಾಂಗಳಾರತಿ ಮಾಡಲಾಗುತ್ತದೆ ಎಂದರು.
ಜೂ.8ರಂದು ನಾನಾ ರೀತಿಯ ಹೋಮಗಳನ್ನು ನೆರವೇರಿಸಲಾಗುತ್ತದೆ. ಜೂ.9ರಂದು ಬೆಳಗ್ಗೆ 1.57ರಿಂದ ಮಧ್ಯಾಹ್ನ 12.48ರವರೆಗೆ ಸಲ್ಲುವ ಶುಭ ಸಿಂಹ ಲಗ್ನದಲ್ಲಿ ಶ್ರೀವೆಂಕಟೇಶ್ವರಸ್ವಾಮಿಯ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ, ಮಹಾಕುಂಭ ಪೋಕ್ಷಣೆ, ಮಹಾಭಿಷೇಕ, ಕುಂಭಾಭಿಷೇಕ ನೆರವೇರಿಸಲಾಗುವುದು. ಮಧ್ಯಾಹ್ನ 12ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ವಿವರಿಸಿದರು.
ಬೆಳಗ್ಗೆ 11.30ಕ್ಕೆ ಶಾಸಕ ಡಿ.ಸಿ.ತಮ್ಮಣ್ಣ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಮೇಲುಕೋಟೆ ಯತಿರಾಜಮಠದ ಶ್ರೀಯದುಗಿರಿ ಯತಿರಾಜ ನಾರಾಯಣರಾಮಾನುಜಜೀಯರ್ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸಾನಿಧ್ಯ ವಹಿಸುವರು.
ಮೈಸೂರಿನ ರಾಜವಂಶದ ಶ್ರೀಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಭಾರತಿ ಎಜುಕೇಷನ್ ಟ್ರಸ್ಟ್‌ನ ಅಧ್ಯಕ್ಷ ಮಧು ಜಿ.ಮಾದೇಗೌಡ, ಚಾಂಶುಗರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಂ.ಶ್ರೀನಿವಾಸನ್ ಭಾಗವಹಿಸುವರು ಎಂದು ಹೇಳಿದರು.
ಮೇಲುಕೋಟೆ ಆಗಮ ಪ್ರವೀಣ ಡಾ.ಶೆಲ್ವಪಿಳ್ಳೆ ಅಯ್ಯಂಗಾರ್, ಗುರೂಜಿ ಶ್ರೀನಿವಾಸ ನರಸಿಂಹನ್, ಪುರೋಹಿತ ಯು.ವಿ.ಗಿರೀಶ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ‌್ಯಕ್ರಮಗಳು ಜರುಗಲಿವೆ. ಸಂಜೆ 5.30ಕ್ಕೆ ಸಿ.ಎ.ಕೆರೆ ಹೋಬಳಿ ರಂಗಭೂಮಿ ಕಲಾವಿದರ ಸಂಘದ ಕಲಾವಿದರು ‘ಶ್ರೀನಿವಾಸ ಕಲ್ಯಾಣ’ ಪೌರಾಣಿಕ ನಾಟಕ ಪ್ರದರ್ಶಿಸುವರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ‌್ಯದರ್ಶಿ ಎಚ್.ಬಿ.ನಾಗಪ್ಪ, ಸಲಹೆಗಾರ ಅಣ್ಣೂರು ಸತೀಶ್ ಉಪಸ್ಥಿತರಿದ್ದರು.