Wednesday, September 18, 2024

ಪ್ರಾಯೋಗಿಕ ಆವೃತ್ತಿ

ಭೂವರಹನಾಥ ಸ್ವಾಮಿಗೆ ವಿಶೇಷ ಪೂಜೆ

ಕೆ.ಆರ್.ತಾಲ್ಲೂಕಿನ ಭೂವೈಕುಂಠವೆಂದೇ ಪ್ರಖ್ಯಾತವಾಗಿರುವ ಲಕ್ಷ್ಮೀಸಮೇತನಾಗಿ ನೆಲೆಸಿರುವ ಪುಣ್ಯಕ್ಷೇತ್ರ ಭೂವರಹನಾಥ ಕಲ್ಲಹಳ್ಳಿಯಲ್ಲಿ ರೇವತಿ ನಕ್ಷತ್ರದ ಅಂಗವಾಗಿ ಇಂದು ವರಹನಾಥಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿತು.

ದೇಶದಲ್ಲಿಯೇ ಅಪರೂಪದ್ದಾಗಿರುವ 17 ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯ ವರಹನಾಥ ಮೂರ್ತಿಗೆ ರೇವತಿ ನಕ್ಷತ್ರದ ಅಂಗವಾಗಿ ನಡೆದ ಅಭಿಷೇಕಕ್ಕೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಎಳನೀರು, ಐನೂರು ಲೀಟರ್ ಕಬ್ಬಿನ ಹಾಲು, ಪವಿತ್ರ ಗಂಗಾಜಲ, ಸುಗಂಧ ದ್ರವ್ಯಗಳು, ಜೇನುತುಪ್ಪ, ಹಸುವಿನ ತುಪ್ಪ, ಅರಿಶಿನ ಹಾಗೂ ಶ್ರೀಗಂಧದಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸೇವಂತಿಗೆ, ಗುಲಾಬಿ, ಪನ್ನೀರು ಹೂ, ಜವನ, ತುಳಸಿ ಪವಿತ್ರ ಪತ್ರೆಗಳು, ಕಮಲದ ಹೂ ಸೇರಿದಂತೆ 58 ಬಗೆಯ ವಿವಿಧ ಪುಷ್ಪಗಳಿಂದ ಪುಷ್ಪಾಭಿಷೇಕ ಮಾಡಲಾಯಿತು.

ಶ್ರೀ ಭೂವರಹನಾಥಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿಗಳಾದ ಶ್ರೀನಿವಾಸರಾಘವನ್ ಮಾತನಾಡಿ, ಭೂವರಹನಾಥ ಕ್ಷೇತ್ರವನ್ನು ತಿರುಮಲ ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಹೊಯ್ಸಳ ಚಕ್ರವರ್ತಿ ಎರಡನೇ ವೀರಬಲ್ಲಾಳರ ನೆನಪಿಗಾಗಿ 16 ಕಾಲುಗಳ ಮಂಟಪ, 108 ಕಾಲುಗಳ ಮಂಟಪ ಸೇರಿದಂತೆ ಮೂರು ಪ್ರಾಕಾರಗಳ ದೇವಾಲಯ ಹಾಗೂ 172 ಅಡಿ ಎತ್ತರದ ರಾಜಗೋಪುರವನ್ನು ನಿರ್ಮಿಸಲಾಗುತ್ತಿದ್ದು ಮೂಡಬಿದರೆ, ಕುಂಭಕೋಣಂ ಹಾಗೂ ಮುರುಡೇಶ್ವರದಿಂದ ಶಿಲ್ಪಿಗಳ ಮೂರು ತಂಡಗಳು ಆಗಮಿಸಿ ಸ್ಥಪತಿಗಳಾದ ಡಾ.ದೇವರಾಜನ್ ಅವರ ನೇತೃತ್ವದಲ್ಲಿ ದೇವಾಲಯಕ್ಕೆ ಬೇಕಾದ ಕಂಬಗಳು ಹಾಗೂ ಇತರೆ ಅಗತ್ಯವಸ್ತುಗಳ ಕೆತ್ತನೆ ಕಾರ್ಯವು ಭರದಿಂದ ಸಾಗಿದೆ ಎಂದು ವಿವರಿಸಿದರು.
ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮೀಜಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದರು.

ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಪ್ರಸಾದವನ್ನು ಸ್ವೀಕರಿಸಿ ಧನ್ಯರಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!