Friday, September 20, 2024

ಪ್ರಾಯೋಗಿಕ ಆವೃತ್ತಿ

ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಿ: ರವಿಕುಮಾರ್

ಮಂಡ್ಯ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಗೋಚರಿಸದೇ ಇರುವ ಐತಿಹಾಸಿಕ ಹಿನ್ನಲೆಯುಳ್ಳ ದೇವಸ್ಥಾನಗಳು, ನೈಸರ್ಗಿಕವಾಗಿ ಕಣ್ಮನ ಸೆಳೆಯುವ ತಾಣಗಳಿವೆ, ಅವುಗಳನ್ನು ಗುರುತಿಸಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಯೋಜನೆ ರೂಪಿಸಿ ಎಂದು ಮಂಡ್ಯ ಶಾಸಕ ಪಿ.ರವಿಕುಮಾರ್ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಂಡ್ಯ ಜಿಲ್ಲೆಯು ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಮತ್ತು ಪಾರಂಪರಿಕ ನಾಡಗಿದ್ದು, ಹೆಚ್ಚು ಪ್ರೇಕ್ಷಣೀಯ ಪ್ರವಾಸಿ ತಾಣಗಳಿವೆ. ಹೂಸಬೂದನೂರಿನಲ್ಲಿ ಹೊಯ್ಸಳರ ಕಾಲದ ಅನಂತಪದ್ಮನಾಭ ಹಾಗೂ ಕಾಶಿ ವಿಶ್ವೇಶ್ವರ ದೇವಾಲಯಗಳು ಅತ್ಯಂತ ಪ್ರಾಚೀನವಾದ ದೇವಾಲಯಗಳಾಗಿವೆ ಎಂದರು.

ಮಂಡ್ಯ ವ್ಯಾಪ್ತಿಯ ಅರ್ಕೇಶ್ವರ ದೇವಾಲಯ, ಹೊಳಲು ಗ್ರಾಮದ ತಾಂಡವೇಶ್ವರ ದೇವಾಲಯ, ಬೂದನೂರಿನ ದೇವಾಲಯಗಳು ಸೇರಿದಂತೆ ಜಿಲ್ಲೆಯ ಪ್ರಾಚೀನ ದೇವಾಲಯಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಫೆಬ್ರವರಿಯಲ್ಲಿ ಬೂದನೂರು ಉತ್ಸವ

ಜಿಲ್ಲೆಯ ಬೂದನೂರಿನಲ್ಲಿರುವ ಹೊಯ್ಸಳರ ಕಾಲದ ಪ್ರಾಚೀನ ದೇವಾಲಯಗಳಿಗೆ ಶತಮಾನ ಕಂಡ ಹಿನ್ನಲೆ ಫೆಬ್ರವರಿಯಲ್ಲಿ ಬೂದನೂರು ಉತ್ಸವ ಮಾಡುವುದಕ್ಕೆ ಚಿಂತಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪ್ರವಾಸೋದ್ಯಮ ಅಧಿಕಾರಿಗಳಿಗೆ ತಿಳಿಸಿದರು.

ಶ್ರೀರಂಗಪಟ್ಟಣ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ ಮಾತನಾಡಿ, ಶ್ರೀರಂಗಪಟ್ಟಣವೇ ಪ್ರಾಚೀನ ನಗರವಾಗಿದ್ದು, ಹಲವಾರು ಮಂದಿರ ಮಸೀದಿಗಳಿದ್ದು, ಇವುಗಳು ಪ್ರವಾಸಿಗರನ್ನು ಸೆಳೆಯುತ್ತದೆ. ಆಗಾಗಿ ಪ್ರವಾಸಕ್ಕೆ ಬರುವ ಪ್ರಾವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸಿ ಎಂದರು.

ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ. ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದರು.

ವೆಬ್ ಸೈಟ್ ಆಕರ್ಷಣೀಯವಾಗಿರಲಿ

ಪ್ರವಾಸೋದ್ಯಮ ವೆಬ್ ಸೈಟ್ ಆಕರ್ಷಣೀಯವಾಗಿರಲಿ, ಜಿಲ್ಲೆಯಲ್ಲಿ ಸಿದ್ಧಪಡಿಸುತ್ತಿರುವ ಪ್ರವಾಸೋದ್ಯಮ ವೆಬ್ ಸೈಟ್ ಹಾಗೂ ಮ್ಯಾಪ್ ಆಕರ್ಷಣೀಯ ಹಾಗೂ ಸರಳವಾಗಿ ಪ್ರವಾಸಿಗರಿಗೆ ಮಾಹಿತಿ ನೀಡುವ ರೀತಿ ಇರಬೇಕು ಎಂದು ಮೇಲುಕೋಟೆ ಶಾಸಕ ದರ್ಶನ ಪುಟ್ಟಣ್ಣಯ್ಯ ತಿಳಿಸಿದರು.

ಇಂದು ಜನರು ಮೊಬೈಲ್ ನಲ್ಲಿ ವೆಬ್ ಸೈಟ್ ನೋಡುವುದರಿಂದ ಸಿದ್ಧಪಡಿಸುವ ವೆಬ್ ಸೈಟ್ ಮೊಬೈಲ್ ಫ್ರೆಂಡ್ಲಿಯಾಗಿರಲಿ. ಉತ್ತಮ ಗುಣಮಟ್ಟದ ಭಾವಚಿತ್ರ ಹಾಗೂ ವಿಡಿಯೋಗಳನ್ನು ಬಳಸಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಗೆ ಪ್ರವಾಸಿಗರನ್ನು ಸೆಳೆಯಲು ಜಿಲ್ಲೆಗೆ ಅಧಿಕೃತವಾದ ವೆಬ್ ಸೈಟ್, ನಕ್ಷೆ ರೂಪುಗೊಳಿಸಲಾಗುತ್ತಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿ ಸ್ಥಳಗಳ ಮಾಹಿತಿಯ ಫಲಕಗಳನ್ನು ಅಳವಡಿಸಲು ಚರ್ಚಿಸಲಾಗುತ್ತಿದೆ ಎಂದರು.

ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಲ್ಲಿ ಹೋಂ ಸ್ಟೇ ಗಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ಬಗ್ಗೆ ಚರ್ಚಿಸಲಾಯಿತು. ತಾಲ್ಲೂಕುವಾರು ಪ್ರವಾಸೋದ್ಯಮ ಇಲಾಖೆಯಿಂದ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ರಾಘವೇಂದ್ರ, ನಿರ್ಮಿತಿ ಕೇಂದ್ರ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!