Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆರಗೋಡು ಧ್ವಜ ವಿವಾದದ ಹಿಂದಿದೆಯೇ ಕುತಂತ್ರ ರಾಜಕಾರಣ…?

ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಅಳವಡಿಸಲಾಗಿದ್ದ ಕೇಸರಿ ಭಗವಾ ಧ್ವಜ ತೆರವುಗೊಳಿಸಿದ್ದನ್ನು ವಿರೋಧಿಸಿ ಕೆರಗೋಡಿನಿಂದ ಮಂಡ್ಯದವರೆಗೆ ಬಿಜೆಪಿ- ಜೆಡಿಎಸ್-ಸಂಘ ಪರಿವಾರ ನಡೆಸಿದ ಪಾದಯಾತ್ರೆಯಲ್ಲಿ ಹಲವು ಅವಾಂತರಗಳು ನಡೆದು ಜನರೇ ಆಕ್ರೋಶ ವ್ಯಕ್ತಪಡಿಸಿದರು.

ಕೆರಗೋಡು ಗ್ರಾಮದಿಂದ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಮುಂದಾಳತ್ವದಲ್ಲಿ ಪಾದಯಾತ್ರೆ ಹೊರಟ ಸಾವಿರಾರು ಕಾರ್ಯಕರ್ತರು ದಾರಿಯುದ್ದಕ್ಕೆ ಕೇಸರಿ ಧ್ವಜಗಳನ್ನು ಹಿಡಿದು, ಕಾಂಗ್ರೆಸ್ ಹಾಗೂ ಆ ಪಕ್ಷದ ಮುಖಂಡರ ವಿರುದ್ಧ ಘೋಷಣೆಗಳನ್ನು ಕೂಗಿದರು. ದಾರಿಯುದ್ದಕ್ಕೂ ರಸ್ತೆಯಲ್ಲಿ ಹಾಕಿದ್ದ ಗಣಿಗ ರವಿಕುಮಾರ್ ಫ್ಲೆಕ್ಸ್ ಗಳನ್ನು ಕಂಡೊಡನೆ ಉದ್ರಿಕ್ತ ಗುಂಪು ಜೋರಾಗಿ ಕಿರುಚಿಕೊಂಡು ಹರಿದು ಹಾಕಿ ಚಪ್ಪಲಿಯಲ್ಲಿ ಗಣಿಗ ರವಿಕುಮಾರ್ ಭಾವಚಿತ್ರಕ್ಕೆ ಹೊಡೆದು, ಉಗಿದು ಧಿಕ್ಕಾರ ಕೂಗುತ್ತಿದ್ದರು. ಇಂತಹ ಪ್ರತಿಭಟನಾಕಾರರನ್ನು ಕಂಡು ಸಾರ್ವಜನಿಕರೇ ಬೈಯುತ್ತಿದ್ದ ಘಟನೆಗಳು ಕಂಡು ಬಂತು.

ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಚಲುವರಾಯಸ್ವಾಮಿ ಹಾಗೂ ಗಣಿಗ ರವಿಕುಮಾರ್ ಫ್ಲೆಕ್ಸ್ ಕಂಡು ಗುಂಪು ಅದನ್ನು ಹರಿದು ಹಾಕಿತು. ಪರಸ್ಥಿತಿ ಕೈ ಮೀರಿದ್ದನ್ನು ಕಂಡು ಪೋಲಿಸರು ಲಘು ಲಾಠಿ ಪ್ರಹಾರ ನಡೆಸಿದರು. ಹಲವರಿಗೆ ತಲೆಗೆ, ಕಣ್ಣಿಗೆ ಗಾಯವಾಗಿ ರಕ್ತ ಹರಿಯಿತು. ಲಾಠಿ ಬೀಸುತ್ತಿದ್ದಂತೆ ಪ್ರತಿಭಟನಾಕಾರರು ಎದ್ದು-ಬಿದ್ದು ಹೆಂಗಸರು ಮಕ್ಕಳೆನ್ನದೇ ಅವರನ್ನು ತಳ್ಳುತ್ತಾ, ಬೀಳಿಸಿಕೊಂಡು ಓಡಿಹೋದರು. ಚಪ್ಪಲಿ, ಬೈಕುಗಳು ರಸ್ತೆಗೆ ಬಿದ್ದವು.

ಕಾರ್ಯಕರ್ತರಿಗೆ ಲಾಠಿ ಏಟು 

ಇದಕ್ಕೆ ಬಿಜೆಪಿ-ಜೆಡಿಎಸ್ ನಾಯಕರು ಸಾಮಾನ್ಯ ಕಾರ್ಯಕರ್ತರನ್ನು ಪ್ರಚೋದಿಸಿ, ಅವರಿಗೆ ಪೋಲಿಸರಿಂದ ಲಾಠಿ ಏಟು ಬೀಳುವಂತೆ ಮಾಡಿದರು. ಅವರ ರಾಜಕೀಯಕ್ಕಾಗಿ ಅಮಾಯಕ ಯುವಕರು ರಕ್ತ ಹರಿಸಬೇಕಾಯಿತೆಂದು ನಾಗರೀಕರು ಮರುಗುತ್ತಿದ್ದ ದೃಶ್ಯ ಕಂಡು ಬಂತು. ಇಲ್ಲಿರುವ ಬಿಜೆಪಿ-ಜೆಡಿಎಸ್ ನಾಯಕರು ಪ್ರಚೋದನೆ ಮಾಡಿ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ. ಬಂದಿರುವ ಬಹುತೇಕರು ಕೆರಗೋಡು ಸುತ್ತಮುತ್ತಲಿನ ಹಳ್ಳಿಯವರಲ್ಲ.ಹೊರಗಿನಿಂದ ಕರೆತರಲಾಗಿದೆ‌.ಬಿಜೆಪಿ ನಾಯಕರು ತಮ್ಮ ಮಕ್ಕಳನ್ನು ಕರೆತಂದು ಕಲ್ಲು ಹೊಡೆಸುವ ಬದಲು ಈ ಭಾಗದ ಮಕ್ಕಳ ಕೈಲಿ ಕಲ್ಲು ಹೊಡೆಸಿದ್ದಾರೆ. ನಮ್ಮ ಮಕ್ಕಳು ದೇವರು ,ಧರ್ಮ, ಭಗವಾ ಧ್ವಜ ಎಂದು ಕೇಸು ಹಾಕಿಸಿಕೊಂಡು ಇವರಿಗೆ ರಾಜಕೀಯ ಅಧಿಕಾರ ಕೊಡಿಸುತ್ತಾರೆ. ಅವರ ಮಕ್ಕಳನ್ನು ಇದೇ ರೀತಿ ಯಾಕೆ ಬೀದಿಗೆ ತರಲ್ಲ. ಅವರು ಮಾತ್ರ ಉತ್ತಮ ವಿದ್ಯಾಭ್ಯಾಸ ಪಡೀಬೇಕು. ನಮ್ಮ ಮಕ್ಕಳು ಪೋಲೀಸರ ಲಾಠಿ ಏಟು ತಿಂದು ರಕ್ತ ಸುರಿಸಬೇಕಾ ಎಂದು ಹಿರಿಯರೊಬ್ಬರು ದೂರಿದರು.

ಮಾಧ್ಯಮಗಳಿಂದ ಪ್ರಚೋದನೆ

ಬಹುತೇಕ ಮಾಧ್ಯಮಗಳು ಕೆರಗೋಡು ಕೊತ ಕೊತ, ಕೆರಗೋಡು ಧಗ ಧಗ, ಧ್ವಜ ದಂಗಲ್, ಧರ್ಮ ದಂಗಲ್ ಎಂದೆಲ್ಲಾ ದಿನವಿಡೀ ಪ್ರಸಾರ ಮಾಡಿ ಜನರನ್ನು ದಾರಿ ತಪ್ಪಿಸಿ ಅವರನ್ನು ಪ್ರಚೋದಿಸಿದ್ದರಿಂದಲೂ ಈ ಘಟನೆ ದೊಡ್ಡದಾಗಲು ಕಾರಣವಾಯಿತು ಎಂದು ಹಲವು ಸಾರ್ವಜನಿಕರು ಕಿಡಿಕಾರಿದರು.

ಸರ್ಕಾರಿ ಜಾಗದಲ್ಲಿ ಯಾವುದೇ ಧಾರ್ಮಿಕ ಬಾವುಟ ಹಾರಿಸಬಾರದೆಂದು ಪಂಚಾಯತಿ ತಿಳಿಸಿದ್ದರೂ ಕೂಡ ಹನುಮ ಧ್ವಜ ಹಾರಿಸಿದ್ದು ಏಕೆ? ಇದರ ಹಿಂದೆ ಷಡ್ಯಂತ್ರವಿದೆ. ತಮ್ಮ ರಾಜಕೀಯ ತೀಟೆ ತೀರಿಸಿಕೊಳ್ಳಲು ಹಿಂದೂಗಳ ನಡುವೆ ದ್ವೇಷದ ಕಿಡಿ ಹೊತ್ತಿಸಿದ್ದಾರೆ.

ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್ ಶ್ರೀ ರಾಮನ ದೇವಸ್ಥಾನಗಳಿಗೆ ಲಕ್ಷಾಂತರ ರೂ. ಹಣ ನೀಡಿದ್ದಾರೆ. ಆದರೂ ಅವರ ವಿರುದ್ಧ ಕುತಂತ್ರ ರಾಜಕಾರಣ ಮಾಡಲು ಸ್ಥಳೀಯ ಜೆಡಿಎಸ್ ಮುಖಂಡರು ಬಿಜೆಪಿ-ಸಂಘ ಪರಿವಾರದ ಜೊತೆ ಕೈ ಜೋಡಿಸಿದ್ದಾರೆ. ನಮ್ಮ ಜನರು ಇವರ ಕುತಂತ್ರ ರಾಜಕಾರಣ ಅರಿಯದೆ ಅವರ ಬಲೆಗೆ ಬಿದ್ದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದರು.

ಸಿಎಂ ಪ್ಲೆಕ್ಸ್ ಗೆ ಕಲ್ಲು ತೂರಾಟ

ಕುರುಬರ ಹಾಸ್ಟೆಲ್ ಮುಂದೆ ಸಿಎಂ ಸಿದ್ದರಾಮಯ್ಯನವರ ಫ್ಳೆಕ್ಸ್ ಕಂಡೊಡನೆ ಉನ್ಮತ್ತರಾದ ಯುವಕರು ಕಲ್ಲುಗಳನ್ನು ಎತ್ತಿಕೊಂಡು ಸಿದ್ದರಾಮಯ್ಯನವರ ಫ್ಳೆಕ್ಸ್ ಗೆ ತೂರಿದರು. ಕಲ್ಲು ಎಸೆದಿದ್ದರಿಂದ ಕುರುಬರ ಸಂಘದ ಹಾಸ್ಟೆಲ್ ನ ಗಾಜುಗಳು ಪುಡಿಪುಡಿಯಾದವು. ಈ ಬಗ್ಗೆ ದೂರು ದಾಖಲಾಗಿದೆ ಎಂಬ ಮಾಹಿತಿ ಬಂದೊಡನೆ, ಪಶ್ಚಿಮ ಠಾಣೆಯ ಪೋಲಿಸರನ್ನು ವಿಚಾರಿಸಲಾಗಿ ಯಾರೂ ದೂರು ನೀಡಿಲ್ಲ. ದೂರು ಬಂದರೆ ಪರಿಶೀಲನೆ ಮಾಡುವುದಾಗಿ ತಿಳಿಸಿದರು.

ಕಾಣಿಸದ ಜೆಡಿಎಸ್ ಚಿನ್ಹೆ ಮತ್ತು ಶಾಲುಗಳು

ಬಿಜೆಪಿಯೊಂದಿಗೆ ಜೆಡಿಎಸ್ ಕೈ ಜೋಡಿಸಿದ ನಂತರ ಜಿಲ್ಲೆಯಲ್ಲಿ ಉಗ್ರ ಹಿಂದುತ್ವದ ಚಟುವಟಿಕೆಗಳು ಆರಂಭವಾಗಿವೆ. ಇಂದು ನಡೆದ ಪ್ರತಿಭಟನೆಯಲ್ಲಿ ಜೆಡಿಎಸ್ ಪಕ್ಷದ ನಾಯಕರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜೆಡಿಎಸ್ ನಾಯಕರು ತಮ್ಮ ಪಕ್ಷದ ಹಸಿರು ಶಾಲನ್ನು ಹಾಕದೆ ಕೇಸರಿ ಶಾಲುಗಳನ್ನು ಹಾಕಿದ್ದರಿಂದ ಸಂಪೂರ್ಣ ಕೇಸರಿಮಯವಾಗಿತ್ತು. ಇದನ್ನುಗಮನಿಸಿದರೆ ಕುಮಾರಸ್ವಾಮಿಯವರು ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ಬದಲಿಗೆ ಬಿಜೆಪಿ ಪಕ್ಷದೊಳಗೆ ವಿಲೀನ ಮಾಡಿದ್ದಾರೆಂಬ ಭಾವನೆ ಮೂಡುತ್ತಿತ್ತು. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಭಗವಾ ಧ್ವಜವನ್ನು ಕೆಳಗಿಳಿಸಿದರು ಎಂಬ ಸಣ್ಣ ಘಟನೆಯನ್ನು ದೊಡ್ಡದಾಗಿ ಮಾಡಿದ ಬಿಜೆಪಿ-ಜೆಡಿಎಸ್ ನಾಯಕರು ಕೋಮುವಾದದ ಬೆಂಕಿಗೆ ತುಪ್ಪ ಹಾಕಿದ್ದಾರೆ, ಲೋಕಸಭಾ ಚುನಾವಣೆ ವೇಳೆಗೆ ಈ ಬೆಂಕಿ ಇನ್ನೂ ಎಷ್ಟು ಧಗಧಗಿಸಬಹುದೋ ಕಾದು ನೋಡಬೇಕು ಎಂದು ಹೆಸರೇಳದ ಮುಖಂಡರೊಬ್ಬರು ಅಳಲು ತೋಡಿಕೊಂಡರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!