Friday, September 20, 2024

ಪ್ರಾಯೋಗಿಕ ಆವೃತ್ತಿ

ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ ಸಂಗ್ರಹದಲ್ಲಿ ಹಗಲು ದರೋಡೆ : ಟಿ.ಎಸ್.ಸತ್ಯಾನಂದ

ಮಂಡ್ಯ ಸರ್ವೀಸ್ ರಸ್ತೆ ಕಾಮಗಾರಿ ಮುಗಿಯದಿದ್ದರೂ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ನಲ್ಲಿ ಹೆಚ್ಚಿನ ಟೋಲ್ ಸಂಗ್ರಹದ ಮೂಲಕ ಹಗಲು ದರೋಡೆ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡಲು ಚಿಂತಿಸಲಾಗಿದೆ ಎಂದು ಕೆಪಿಸಿಸಿ ಮಂಡ್ಯ ವಕ್ತಾರ, ವಕೀಲ ಟಿ.ಎಸ್.ಸತ್ಯಾನಂದ ತಿಳಿಸಿದರು.

ಮಂಡ್ಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿTS Satyananda ಮಂಡ್ಯ-ಶ್ರೀರಂಗಪಟ್ಟಣ ನಡುವಿನ ಗಣಂಗೂರು ಬಳಿ ನಿರ್ಮಿಸಿರುವ ಟೋಲ್‌ಗೇಟ್‌ನಲ್ಲಿ ಜು.1ರಿಂದ ವಾಹನಗಳಿಗೆ ಟೋಲ್ ಶುಲ್ಕ ವಿಧಿಸುವುದಾಗಿ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆದರೆ, ಅವೈಜ್ಞಾನಿಕವಾಗಿ ಟೋಲ್ ದರ ನಿಗದಿಪಡಿಸಿದೆ. ಇದು ಸರಿಯಲ್ಲ ಎಂದರು.

ಈಗ ನಿಗದಿಪಡಿಸಿರುವ ಟೋಲ್ ಶುಲ್ಕವನ್ನು ನೋಡಿದರೆ ಟೋಲ್ ಕೇಂದ್ರಗಳು ಸುಲಿಗೆ ಕೇಂದ್ರಗಳಾಗಲಿವೆ ಅನಿಸುತ್ತಿದೆ. ಟೋಲ್ ಸಿಬ್ಬಂದಿ ಬಡ, ಮಧ್ಯಮ ವರ್ಗದ ಜನರಿಂದ ಹಗಲು ದರೋಡೆ ಸಂಶಯವಿಲ್ಲ. ಟೋಲ್ ಪಾವತಿಸಿದ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಮೂಲ ಸೌಕರ್ಯಗಳಿಲ್ಲ. ಇಂಡಿಯನ್ ರೋಡ್ಸ್ ಕಾಂಗ್ರೆಸ್ (ಐಆರ್‌ಸಿ)ನ ಬಹುತೇಕ ನಿಯಮಗಳನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾಲಿಸಿಲ್ಲ ಎಂದು ಆಪಾದಿಸಿದರು.

ಬೆಂಗಳೂರು-ಮೈಸೂರು ನಡುವೆ ಶೇ.30ರಷ್ಟು ಜನರು ಮಾತ್ರ ಸಂಚರಿಸುತ್ತಾರೆ. ಉಳಿದ ಶೇ.70ರಷ್ಟು ಜನರು ಸ್ಥಳೀಯರೇ ಆಗಿದ್ದಾರೆ. ಅವರೆಲ್ಲರೂ ಮಾರ್ಗಮಧ್ಯದ ನಗರ, ಪಟ್ಟಣಗಳಿಗೆ ಪ್ರಯಾಣ ಮಾಡುತ್ತಾರೆ. ಶೇ.30 ರಷ್ಟು ಜನರಿಗಾಗಿ ಎಂಟತ್ತು ಸಾವಿರ ಕೋಟಿ ರೂ. ಖರ್ಚು ಮಾಡಿ ಹೆದ್ದಾರಿ ನಿರ್ಮಿಸಲಾಗಿದೆ. ಇದರ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಮೈಸೂರು ರಾಜವಂಶಸ್ಥರು ಬೆಂಗಳೂರು-ಮೈಸೂರು ನಡುವೆ ರಸ್ತೆ ನಿರ್ಮಿಸಿದ್ದರು. ಅದನ್ನು ಎರಡು ದಶಕಗಳ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ನಾಲ್ಕು ಪಥದ ರಸ್ತೆಯಾಗಿ ಮೇಲ್ದರ್ಜೆಗೇರಿಸಿದರು. ಆದರೀಗ ಬಿಜೆಪಿ ಸರಕಾರ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ, ಎಕ್ಸ್ ಪ್ರೆಸ್ ಹೈವೇ ನಿರ್ಮಿಸಿದೆ. ಇದಕ್ಕಾಗಿ ಮಂಡ್ಯ ಜಿಲ್ಲೆ ವ್ಯಾಪ್ತಿಯ 60ಕಿ.ಮೀ. ಉದ್ದ ರಸ್ತೆಯ ಅಕ್ಕಪಕ್ಕದಲ್ಲಿ 690 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡಿದೆ ಎಂದರು.

ಜಮೀನು ಕೊಟ್ಟ ರೈತರಿಗೆ ಹೆದ್ದಾರಿಯಿಂದ ಏನು ಪ್ರಯೋಜನ?

ಭೂಮಿ ಕೊಟ್ಟ ರೈತರು ಟೋಲ್ ಪಾವತಿಸಿ ಸಂಚರಿಸಬೇಕು. ಮದ್ದೂರು ನಿಡಘಟ್ಟದಿಂದ ಮೈಸೂರಿಗೆ ಹೋಗುವವರಿಗೆ 155 ರೂ. ಟೋಲ್ ನಿಗದಿಪಡಿಸಲಾಗಿದೆ. ಮಂಡ್ಯದಿಂದ, ಮಂಡ್ಯ ತಾಲೂಕು ತೂಬಿನಕೆರೆಯಿಂದ ಮೈಸೂರಿಗೆ ಹೋಗುವವರು ಇಷ್ಟೇ ಮೊತ್ತ ಪಾವತಿಸಬೇಕು. ಇದು ಅವೈಜ್ಞಾನಿಕ. ಇಷ್ಟಾಗಿಯೂ ಟೋಲ್ ಕಟ್ಟಿದವರಿಗೆ ಹೆದ್ದಾರಿಯಲ್ಲಿ ಸೂಕ್ತ ಸವಲತ್ತುಗಳಿಲ್ಲ ಎಂದು ಆರೋಪಿಸಿದರು.

ಮಂಡ್ಯ ತಾಲೂಕು ಉಮ್ಮಡಹಳ್ಳಿ ಗೇಟ್, ವಿ.ಸಿ.ಫಾರ್ಮ್ ಬಳಿ ಸರ್ವೀಸ್ ರಸ್ತೆ, ಅಂಡರ್‌ಪಾಸ್ ಕಾಮಗಾರಿ ಮುಗಿದಿಲ್ಲ. ಬೆಂಗಳೂರು-ಮೈಸೂರು ನಡುವಿನ ನಗರ, ಪಟ್ಟಣಗಳಿಗೆ ಆಗಮನ, ನಿರ್ಗಮದ ವ್ಯವಸ್ಥೆ ಸರಿಯಾಗಿಲ್ಲ. ಮದ್ದೂರು ಪಟ್ಟಣದೊಳಗೆ ಮೇಲ್ಸೇತುವೆ ಮೂಲಕ ಹೆದ್ದಾರಿ ಹಾದು ಹೋಗಿದೆ. ಆದರೆ, ಹೆದ್ದಾರಿ ಕೆಳಗಿನ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ. ಇಷ್ಟೆಲ್ಲ ಇದ್ದರೂ ಸಂಸದ ಪ್ರತಾಪ್‌ಸಿಂಹ ಅವರು ಹೆದ್ದಾರಿ ನಿರ್ಮಾಣ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಅವರಿಗೆ ಹೆದ್ದಾರಿಯಲ್ಲಿ ಸಮಸ್ಯೆಗಳು, ಲೋಪಗಳು ಕಾಣುತ್ತಿಲ್ಲವೇ ಎಂದು ಮರು ಪ್ರಶ್ನೆ ಮಾಡಿದರು.

ಗೋಷ್ಠಿಯಲ್ಲಿ ನಗರಸಭೆ ಸದಸ್ಯ ರಾಮಲಿಂಗಯ್ಯ, ಕಾಂಗ್ರೆಸ್ ಮುಖಂಡರಾದ ಪ್ರಶಾಂತ್‌ಬಾಬು, ನರಸಪ್ಪ ಹೆಗ್ಗಡೆ, ಸಂಪತ್, ಲಿಂಗರಾಜು, ಗೋವಿಂದ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!