Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯ ಕೋಮುವಾದಿ ರಾಜಕಾರಣದಿಂದ ದೇಶ ಛಿದ್ರ ಛಿದ್ರ : ಉಮಾಶ್ರೀ

ವರದಿ: ಪ್ರಭು ವಿ.ಎಸ್.

ಬಿಜೆಪಿ ಪಕ್ಷವು ಕೋಮುವಾದಿಗಳನ್ನು ಸೃಷ್ಠಿಸುವ ಮೂಲಕ ದೇಶವನ್ನು ಛಿದ್ರ ಛಿದ್ರ ಮಾಡಲು ಮುಂದಾಗಿದೆ. ಬಿಜೆಪಿ ಸರ್ಕಾರದಿಂದಾಗಿ ದೇಶ ಹಾಗೂ ರಾಜ್ಯ ನಲುಗಿದ್ದು ಅವರಿಂದ ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದ್ದು ಸುಳ್ಳು ಹೇಳುವ ಪಕ್ಷಕ್ಕೆ ಮತ ಹಾಕಬೇಡಿ ಎಂದು ಮಾಜಿ ಸಚಿವೆ, ಚಿತ್ರನಟಿ ಉಮಾಶ್ರೀ ಆಕ್ರೋಶ ವ್ಯಕ್ತಪಡಿಸಿದರು.

ಮದ್ದೂರು ತಾಲೂಕು ಕೊಪ್ಪ ಹೋಬಳಿಯ ನಾಗಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಕುಶಪುರ ಗೇಟ್‌ ಬಳಿ ಸೋಮವಾರ ಆಯೋಜಿಸಿದ್ದ ಕೊಪ್ಪ ವೃತ್ತದ ‘ಬೃಹತ್ ಮಹಿಳಾ ಸಮಾವೇಶ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲೆಲ್ಲೂ ಇತಿಹಾಸ, ಧರ್ಮ, ಹಿಂದುತ್ವ, ಲವ್ ಜಿಹಾದ್, ಟಿಪ್ಪು, ಉರಿಗೌಡ, ನಂಜೇಗೌಡ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ಜನರ ಭಾವನೆಗಳನ್ನು ದಿಕ್ಕು ತಪ್ಪಿಸಿ ಗೌಡರು, ಲಿಂಗಾಯಿತರು, ಎಸ್‌ಸಿ, ಎಸ್‌ಟಿ ಜನಾಂಗವನ್ನು ಛಿದ್ರ ಮಾಡುವ ಜತೆಗೆ ಮತಗಳ ವಿಭಜನೆಗೆ ಮುಂದಾಗಿದ್ದಾರೆಂದರು ಕಿಡಿಕಾರಿದರು.

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ರೈತರ ಸಾಲಮನ್ನಾ 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ರೈತರ ಸಾಲಮನ್ನಾ, ಆಶ್ರಯಮನೆ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಹಾಗೂ ನಿಗಮ ಮಂಡಳಿಯಲ್ಲಿದ್ದ ಹಲವಾರು ಸಾಲಗಳನ್ನು ಮನ್ನಾ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವ ಮೂಲಕ ಚುನಾವಣಾ ಪ್ರಣಾಳಿಕೆಯಲ್ಲಿ ಹೊರಡಿಸಿದ್ದ 165 ಅಂಶಗಳನ್ನು ಪೂರ್ಣ ಪ್ರಮಾಣದಲ್ಲಿ ಈಡೇರಿಸಿದ್ದಾರೆಂದರು.

ಜೆಡಿಎಸ್ ಬಿಜೆಪಿಯ ಕೆಟ್ಟ ಆಡಳಿತ

ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಐದು ವರ್ಷದಲ್ಲಿ ಕೆಟ್ಟ ಆಡಳಿತ ನೀಡಿದ್ದು ಈ ಪಕ್ಷಗಳಿಗೆ ಚುನಾವಣೆ ಎದುರಿಸಲು ಯಾವುದೇ ನೈತಿಕತೆ ಇಲ್ಲ. ಸಿದ್ಧರಾಮಯ್ಯ ಅವರ ಆಡಳಿತಾವಧಿಯಲ್ಲಿ ಪ್ರಾರಂಭಿಸಿದ ಇಂದಿರಾ ಕ್ಯಾಂಟೀನ್ ಅದ್ವಾನಗೊಂಡಿದೆ. 7 ಕೆ.ಜಿ.ಯಿಂದ 5 ಕೆ.ಜಿ. ಅಕ್ಕಿಯನ್ನು ಕಡಿತಗೊಳಿಸಿದೆ. ದಲಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನಿಂತಿದೆ, ಇದು ಬಿಜೆಪಿ ದುರಾಡಳಿತವಾಗಿದೆ ಎಂದರು.

ಜಿಲ್ಲೆ ಅಭಿವೃದ್ಧಿಯಿಂದ ಕುಂಠಿತವಾಗಿದ್ದು ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡದೆ ಈಗಾಗಲೇ ಸ್ಥಗಿತಗೊಳಿಸಿದ್ದು ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರಲ್ಲದೇ ಪಕ್ಷವು ಮಹಿಳೆಯರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಿರುವುದಾಗಿ ಹೇಳಿದರು.

ಈಗಾಗಲೇ ಕಾಂಗ್ರೆಸ್ ಪಕ್ಷವು 200ಯುನಿಟ್ ವಿದ್ಯುತ್, ಪ್ರತಿ ಕುಟುಂಬದ ಮಹಿಳೆಗೆ 2 ಸಾವಿರ ಹಾಗೂ 10 ಕೆ.ಜಿ. ಅಕ್ಕಿ ವಿತರಿಸಲು ಮುಂದಾಗಿದ್ದು ಪ್ರತಿ ವರ್ಷ 3 ಲಕ್ಷ ಮನೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು, ಇದನ್ನರಿತು ಪಕ್ಷವನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದು ಕೋರಿದರು.

ಮಾಜಿ ಶಾಸಕ ಬಿ. ರಾಮಕೃಷ್ಣ, ಧನಲಕ್ಷ್ಮಿ ಚಲುವರಾಯಸ್ವಾಮಿ, ಸಚಿನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಂಜನಶ್ರೀಕಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಮುಖಂಡರಾದ ಕುಮಾರಕೊಪ್ಪ, ವಸಂತಮ್ಮ, ಕೆ.ಸಿ. ಜೋಗೀಗೌಡ, ವಿಜಯಲಕ್ಷ್ಮಿ, ಉಮಾಗಂಗಾಧರ್, ಕವಿತಾದಿವಾಕರ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!