ಪಠ್ಯ ಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ಕನ್ನಡ ನಾಡು-ನುಡಿ ಹಾಗೂ ಮಹಾಕವಿ ಕುವೆಂಪು ಸೇರಿದಂತೆ ಹಲವು ಮಹನೀಯರಿಗೆ ರೋಹಿತ್ ಚಕ್ರತೀರ್ಥ ಅವಮಾನ ಮಾಡಿದ್ದಾನೆ ಎಂದು ಆರೋಪಿಸಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾವೇರಿ ನದಿಗೆ ಪಿಂಡ ಪ್ರದಾನ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಶ್ರೀರಂಗಪಟ್ಟಣದ ಸ್ನಾನ ಘಟ್ಟ ಬಳಿಯ ಕಾವೇರಿ ನದಿಯಲ್ಲಿ ಮಂಡ್ಯ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶಂಕರ್‌ಬಾಬು ಸೇರಿದಂತೆ ವಿವಿಧ ಕನ್ನಡಪರ ಹೋರಾಟಗಾರರು ಕನ್ನಡ ಬಾವುಟ ಹಿಡಿದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಆತನ ಭಾವಚಿತ್ರ ಇಟ್ಟು ಪೂಜೆ ಮಾಡಿ ನಂತರ ಎಡೆ ಇಟ್ಟು ಪೂಜೆ ಸಲ್ಲಿಸಿದರು.
ನಂತರ ಕಾವೇರಿ ನದಿಗೆ ಇಳಿದ ಹೋರಾಟಗಾರರು ತಿಲ ತರ್ಪಣ ಅರ್ಪಿಸಿ, ಪಿಂಡ ಪ್ರದಾನ ಮಾಡಿ ಎಳ್ಳು ನೀರು ಬಿಡುವ ಮೂಲಕ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ಶಂಕರ್‌ಬಾಬು ಮಾತನಾಡಿ, ರೋಹಿತ್ ಚಕ್ರತೀರ್ಥ ಅವರು ಬಸವಣ್ಣ, ನಾರಾಯಣ ಗುರು ಅವರ ಬಗ್ಗೆ ಪಠ್ಯದಲ್ಲಿ ಹಲವು ವಿಚಾರಗಳನ್ನು ಕೈ ಬಿಟ್ಟಿದ್ದಾರೆ.ಕುವೆಂಪು ಸೇರಿದಂತೆ ಇತರರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ರಾಜ್ಯದಾದ್ಯಂತ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈತನನ್ನು ಕೂಡಲೇ ಬಂಧಿಸಬೇಕು ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆಗಾಗಿ ನೂರಾರು ಕೋಟಿ ರೂ. ವೆಚ್ಚ ಮಾಡಿಸಿ ಮಕ್ಕಳ ವಿದ್ಯಾಭ್ಯಾಸಕ್ಕೂ ಉಪಯೋಗಕ್ಕೆ ಬಾರದಂತೆ ಇದೀಗ ಗೋಡೌನ್‌ಗಳಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗಿದ್ದು, ಆ ಹಣವನ್ನು ರೋಹಿತ್ ಚಕ್ರತೀರ್ಥನ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುವ ಜೊತೆಗೆ ಅವರನ್ನ ಕೂಡಲೇ ರಾಜ್ಯದಿಂದ ಗಡಿಪಾರು ಮಾಡುವಂತೆ ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಕಾರ್ಯಕರ್ತರಾದ ಜಗದೀಶ, ನಾರಾ ಯಣಗೌಡ, ಕುಮಾರ್, ವಿಶ್ವಾಸ್, ರಾಬಿನ್, ಕೂಡಲಕುಪ್ಪೆ ಕುಮಾರ್, ರವಿ ಸೇರಿದಂತೆ ಇತರರಿದ್ದರು.