Thursday, September 19, 2024

ಪ್ರಾಯೋಗಿಕ ಆವೃತ್ತಿ

”ಕರ್ನಾಟಕ ಬಂದ್” ಗೆ ಮಂಡ್ಯದಲ್ಲಿ ಅಭೂತಪೂರ್ವ ಬೆಂಬಲ; ಒಗ್ಗಟ್ಟು ಪ್ರದರ್ಶಿಸಿದ ಜನತೆ

ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯದಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಂಡ್ಯ ಜಿಲ್ಲೆಯ ಜನತೆ ಅಭೂತಪೂರ್ವವಾಗಿ ಬೆಂಬಲ ವ್ಯಕ್ತಪಡಿಸಿ, ಸ್ವಯಂ ಪ್ರೇರಿತರಾಗಿ ಎಲ್ಲ ಬಗೆ ವಾಣಿಜ್ಯ ಚಟುವಟಿಕೆಗಳಿಂದ ದೂರ ಉಳಿದು, ಶಾಂತಿಯುತ ಹೋರಾಟದಲ್ಲಿ ಭಾಗಿಯಾದರು.

ಮಂಡ್ಯ ಜಿಲ್ಲಾ ರೈತ ಹಿತರಕ್ಷಣ ಸಮಿತಿ, ರೈತ ಸಂಘ, ಮಂಡ್ಯ ಜೈನ್ ಸಮಾಜ ಹಾಗೂ ಎಸ್.ಡಿ.ಪಿ.ಐ, ಕನ್ನಡ ಸೇನೆ, ಕದಂಬ ಸೇನೆ, ವತಿಯಿಂದ ಸಂಜಯ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಲಾಯಿತು. ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿ ಹೋರಾಟದಲ್ಲಿ ಭಾಗಿಯಾದರು. ಪ್ರಗತಿಪರ, ದಲಿತ, ಮುಸ್ಲಿಂ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ವಿಭಿನ್ನ ಪ್ರತಿಭಟನೆ ನಡೆಸಿ ಕೇಂದ್ರ – ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಮಂಡ್ಯನಗರವು ಅಕ್ಷರಶಃ ಭಣಗುಡುವಂತಿತ್ತು. ವಿವಿ ರಸ್ತೆ, ನೂರಡಿ ರಸ್ತೆ, ಆರ್.ಪಿ ರಸ್ತೆ, ಬನ್ನೂರು ರಸ್ತೆ, ಗುತ್ತಲು ರಸ್ತೆ, ಪೇಟೆ ಬೀದಿ, ಬೆಂ-ಮೈ ರಸ್ತೆಗಳಲ್ಲಿ ಎಲ್ಲ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಚಿತ್ರ ಮಂದಿರಗಳು, ಮಾಲ್ ಗಳು ಬಂದ್ ಆಗಿದ್ದವು. ಶಾಲೆ ಕಾಲೇಜುಗಳಿಗೂ ಕೂಡ ಜಿಲ್ಲಾಡಳಿತ ರಜೆ ಘೋ‍ಷಣೆ ಮಾಡಿತ್ತು.

ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ ಗಳು ಸೇರಿದಂತೆ ತುರ್ತುಸೇವೆಗಳಿಗೆ ತಡೆ ಇರಲಿಲ್ಲ, ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಿದರು. ಅಲ್ಲಿ ಪೆಟ್ರೋಲ್ ಡೀಸೇಲ್ ಹಾಕಿಸಿಕೊಳ್ಳಲು ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು.

ಸ್ಟಾಲಿನ್ ವಿರುದ್ದ ಆಕ್ರೋಶ

ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಭಾವಚಿತ್ರ ಹಿಡಿದು ಧಿಕ್ಕಾರದ ಘೋಷಣೆ ಕೂಗುತ್ತಾ ಕರ್ನಾಟಕದ ರೈತರ ಪಾಲಿಗೆ ಮರಣ ಶಾಸನ ಬರೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಲು ಮುಂದಾದಾಗ, ತಕ್ಷಣ ಎಚ್ಚೆತ್ತ ಪೊಲೀಸರು ತಮಿಳುನಾಡು ಮುಖ್ಯಮಂತ್ರಿ ಭಾವಚಿತ್ರವನ್ನು ಪ್ರತಿಭಟನಾಕಾರರಿಂದ ಕಿತ್ತು ತೆಗೆದುಕೊಂಡು ಹೋದರು.

ಸಂಸದರ ವಿರುದ್ದ ಆಕ್ರೋಶ 

ರಾಜ್ಯದ 28 ಸಂಸದ ವಿರುದ್ದ ಹೋರಾಟಗಾರರು ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ರಾಜ್ಯದ ಸಂಸದರ ಭಾವಚಿತ್ರ ಹಿಡಿದು ಪ್ರತಿಭಟಿಸಿ ಕಾವೇರಿ ಹೋರಾಟಕ್ಕೆ ಬಾರದ ಬೇಜವಾಬ್ದಾರಿ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಉರುಳು ಸೇವೆ ಮಾಡಿ ಆಳುವ ಸರ್ಕಾರಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿದರು.

ವಿವಿಧ ಸಂಘಟನೆಗಳ ಕಾರ್ಯಕರ್ತರು ಜೊತೆಗೂಡಿ ಮಾನವ ಸರಪಳಿ ರಚಿಸಿ ಕಾವೇರಿ ವಿಚಾರವಾಗಿ ನಿರ್ಲಕ್ಷ ತೋರಿರುವ ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮುಖಂಡನೊಬ್ಬ ಅಂಗೈ ಕೊಯ್ದು ಕೊಂಡು ರಕ್ತ ಚಿಮ್ಮಿಸಿ ಕಾವೇರಿ ನಮ್ಮದು ರಕ್ತ ಕೊಟ್ಟರೂ ನೀರು ಬಿಡೆವು ಎಂದರು.

ಕಲ್ಲು ಹೊತ್ತು ಪ್ರತಿಭಟನೆ

ಕನ್ನಡ ಸೇನೆ ಕಾರ್ಯಕರ್ತರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿ ಕಾವೇರಿ ವಿಚಾರದಲ್ಲಿ ಕನ್ನಡಿಗರು ಮತ್ತು ರೈತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿದರು. ಒಟ್ಟಾರೆಯಾಗಿ ಮಂಡ್ಯನಗರವು ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!