Friday, September 13, 2024

ಪ್ರಾಯೋಗಿಕ ಆವೃತ್ತಿ

ಕೊನೆ ಉಸಿರಿರೋವರೆಗೂ ಅನ್ಯಾಯ ಆಗಲು ಬಿಡಲ್ಲ: ಹೆಚ್.ಡಿ ದೇವೇಗೌಡ

ನದಿ ನೀರಿನ ವಿಚಾರದಲ್ಲಿ ನನ್ನ ಕೊನೆ ಉಸಿರಿರೋವರೆಗೂ ಹೋರಾಟ ಮಾಡುತ್ತೇನೆ. ರಾಜ್ಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಂಡ್ಯ ನಗರದ ಹೊರವಲಯದಲ್ಲಿರುವ ಗ್ರೀನ್ ಪ್ಯಾಲೇಸ್‌ನಲ್ಲಿ ಜೆಡಿಎಸ್ ಪಕ್ಷ ಆಯೋಜಿಸಿದ್ದ, ಜನತಾ ಜಲಧಾರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾವೇರಿ ವಿಚಾರದಲ್ಲಿ ನಾನು ನಡೆಸಿದ ಹೋರಾಟದ ಫಲವಾಗಿ ರಾಜ್ಯಕ್ಕೆ ಹೆಚ್ಚುವರಿಯಾಗಿ 14.75ಟಿಎಂಸಿ ನೀರು ದೊರಕಿತು. ನನ್ನ ಹೋರಾಟಕ್ಕೆ ಬಿಜೆಪಿ-ಕಾಂಗ್ರೆಸ್ ಕೈಜೋಡಿಸಿದ್ದರೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಪಡೆಯಬಹುದಾಗಿತ್ತು ಎಂದರು.
ನಾನು ಪ್ರಧಾನಮಂತ್ರಿಯಾಗಿದ್ದಾಗ, ಸಂಸದನಾಗಿದ್ದ ಸಮಯದಲ್ಲಿ ನಿರಂತರವಾಗಿ ನೀರಿನ ಮೇಲೆ ಹಕ್ಕು ಸ್ಥಾಪಿಸಲು ಹೋರಾಟ ಮಾಡಿದೆ. ನನಗೆ ಕಾಂಗ್ರೆಸ್ ಮತ್ತು ಬಿಜೆಪಿಯವರಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ.

ತಮಿಳುನಾಡು ಪರವಾಗಿ ಸಮರ್ಥವಾಗಿ ದನಿ ಎತ್ತುವ ಪ್ರಭಾವಿ ವಕೀಲರು ಸುಪ್ರೀಂ ಕೋರ್ಟ್ ನಲ್ಲಿದ್ದಾರೆ. ನಮ್ಮಲ್ಲಿ ವಕೀಲರಿದ್ದರೂ ಅವರಷ್ಟು ಸಾಮರ್ಥ್ಯ ನಮ್ಮಲ್ಲಿಲ್ಲ. ನಮ್ಮ ನೀರಿನ ಮೇಲಿನ ಹಕ್ಕನ್ನು ಪಡೆಯುವುದಕ್ಕೂ ತಮಿಳು ನ್ಯಾಯವಾದಿಯನ್ನೇ ಅವಲಂಬಿಸಬೇಕಾಯಿತು ಎಂದರು.

ಅಂದು ಕನ್ನಂಬಾಡಿ ಅಣೆಕಟ್ಟು ಕಟ್ಟುವ ಸಮಯದಲ್ಲಿ ಬ್ರಿಟಿಷರಿದ್ದ ಕಾಲದಲ್ಲಿ ನದಿ ನೀರಿನ ವಿಷಯವಾಗಿ ಮಾಡಿಕೊಂಡಿರುವ ಷರತ್ತು ಬದ್ಧ ಒಪ್ಪಂದಗಳೇ ಇಂದು ನಮಗೆ ಸುರುಳಿಯಾಗಿ ಸುತ್ತಿಕೊಂಡಿವೆ. ಅದರಿಂದ ಬಿಡಿಸಿಕೊಂಡು ಹೊರಬರುವುದು ಕಷ್ಟವಾಗಿದೆ. ರಾಜಕೀಯ ಒಗ್ಗಟ್ಟು ನಮ್ಮಲ್ಲಿ ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ನ್ಯಾಯ ಸಿಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕಾವೇರಿ ನ್ಯಾಯ ಮಂಡಳಿ ಹಂಚಿಕೆ ಮಾಡಿರುವ 284 ಟಿಎಂಸಿ ನೀರಿನಲ್ಲಿ, ನಾವು ನೀರಾವರಿ ಆಧಾರಿತ ಬೆಳೆಗಳನ್ನು ಬೆಳೆಯಲಾಗದು. ಖುಷ್ಕಿ ಆಧಾರಿತ ಬೆಳೆಗಳಾದ ರಾಗಿ, ಜೋಳ, ಹುರುಳಿ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯಲು ಮಾತ್ರ ಸಾಧ್ಯ ಎಂದ ದೇವೇಗೌಡರು, ನಾನು ಪ್ರಧಾನಿಯಾಗಿದ್ದಾಗ ಕುಡಿಯುವ ನೀರಿಗೆ 9 ಟಿಎಂಸಿ ಅಡಿ ನೀರು ಅವಶ್ಯಕವೆಂದು ಪ್ರತಿಪಾದಿಸಿದ್ದೆನು.

ಆದರೆ ನ್ಯಾಯಮಂಡಳಿ ನಮಗೆ ಕೊಟ್ಟಿರುವುದು 4.5 ಟಿಎಂಸಿ ಅಡಿ ಮಾತ್ರ. ಇದರಲ್ಲಿ ಬೆಂಗಳೂರಿನವರಿಗೆ ನೀರು ಕೊಡುವುದು ಹೇಗೆ ಎಂದು ಪ್ರಶ್ನಿಸಿದರು.

ಮೇಕೆದಾಟು ಅಣೆಕಟ್ಟು ಬಗ್ಗೆ ಕಾಂಗ್ರೆಸ್‌ನವರು ಈಗ ಮಾತನಾಡುತ್ತಿದ್ದಾರೆ. 30 ವರ್ಷಗಳ ಹಿಂದೆ ನಾನು ಪ್ರಧಾನಿಯಾಗಿದ್ದಾಗಲೇ ಈ ಅಣೆಕಟ್ಟೆಗೆ ಯೋಜನೆ ರೂಪಿಸಿ 650 ಕೋಟಿ ರೂ. ಹಣ ಮೀಸಲಿಟ್ಟಿದ್ದೆ ಎಂಬ ವಿಚಾರವನ್ನು ಮರೆತಿದ್ದಾರೆ.

ಕೇವಲ ಪ್ರಚಾರಕ್ಕೆ ಪಾದಯಾತ್ರೆ ಮಾಡಿದರೆ ಪ್ರಯೋಜನವಿಲ್ಲ. ನೀರಾವರಿ ಯೋಜನೆಗಳ ಜಾರಿ ವಿಷಯದಲ್ಲಿ ಒಗ್ಗಟ್ಟು, ಬದ್ಧತೆ ಪ್ರದರ್ಶಿಸುವಂತೆ ಸಲಹೆ ನೀಡಿದರು.

ಶಾಸಕ ಎಂ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಾ.ದಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್, ಶಾಸಕರಾದ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ದಕ್ಷಿಣ ಪದವೀಧರ ಕ್ಷೇತ್ರದ ಜಾ.ದಳ ಅಭ್ಯರ್ಥಿ ಎಚ್.ಕೆ.ರಾಮು, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಉಪಾಧ್ಯಕ್ಷೆ ಇಷ್ರತ್‌ಫಾತಿಮಾ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ್, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಜಾ.ದಳ ತಾಲ್ಲೂಕು ಅಧ್ಯಕ್ಷ ತಿಮ್ಮೇಗೌಡ, ನಗರಸಭೆ ಸದಸ್ಯರಾದ ಮಂಜುಳಾ, ಮೀನಾಕ್ಷಿ, ನಾಗೇಶ್ ಮತ್ತಿತರರಿದ್ದರು.

Related Articles

ಅತ್ಯಂತ ಜನಪ್ರಿಯ

error: Content is protected !!